IPL 2024: ಲಖನೌ ಸೂಪರ್​ಜೈಂಟ್ಸ್​ಗೆ ಇಂದು ಡೆಲ್ಲಿ ಕ್ಯಾಪಿಟಲ್ಸ್​ ಸವಾಲು; ಹ್ಯಾಟ್ರಿಕ್​ ಗೆಲುವಿನ ವಿಶ್ವಾಸದಲ್ಲಿ ರಾಹುಲ್​ ಪಡೆ

web dc vs lsg
Published on

ಲಖನೌ: ಹ್ಯಾಟ್ರಿಕ್​ ಗೆಲುವಿನ ವಿಶ್ವಾಸದಲ್ಲಿರುವ ಲಖನೌ ಸೂಪರ್​ಜೈಂಟ್ಸ್​ ಮತ್ತು ಆಡಿದ ಮೊದಲ 5 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದು ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಐಪಿಎಲ್​-17ರಲ್ಲಿ ಶುಕ್ರವಾರ ಮುಖಾಮುಖಿ ಆಗಲಿವೆ. ಏಕನಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾದಾಟದಲ್ಲಿ ಕೆಎಲ್​ ರಾಹುಲ್​ ಗೆಲುವಿನ ಲಯ ಕಾಯ್ದುಕೊಳ್ಳಲು ಪ್ರಯತ್ನಿಸಲಿದ್ದರೆ, ರಿಷಭ್​ ಪಂತ್​ ಪಡೆ ಗೆಲುವಿನೊಂದಿಗೆ ಪ್ಲೇಆಫ್​​ ಆಸೆ ಜೀವಂತವಿಡಲು ಹೋರಾಡಲಿದೆ.

ಲಖನೌ ವಿರುದ್ಧ ಇದುವರೆಗೆ ಆಡಿರುವ ಮೂರೂ ಪಂದ್ಯಗಳಲ್ಲಿ ಸೋತಿರುವ ಡೆಲ್ಲಿ ತಂಡ ಮೊದಲ ಬಾರಿ ಜಯ ಸಾಧಿಸುವ ತವಕದಲ್ಲಿದೆ. ಡೆಲ್ಲಿ ತಂಡಕ್ಕೆ ದುಬಾರಿ ರನ್​ ನೀಡುತ್ತಿರುವ ಬೌಲರ್​ಗಳೇ ಪ್ರಮುಖ ಸಮಸ್ಯೆಯಾಗಿದ್ದರೆ, ಲಖನೌ ತಂಡಕ್ಕೆ ಬೌಲರ್​ಗಳೇ ಪ್ರಮುಖ ಬಲ ಆಗಿದ್ದಾರೆ. ಎರಡೂ ತಂಡಗಳಿಗೆ ಆಸ್ಟ್ರೆಲಿಯಾದ ಮಾಜಿ ಆಟಗಾರರಾದ ರಿಕಿ ಪಾಂಟಿಂಗ್​ (ಡೆಲ್ಲಿ) ಮತ್ತು ಜಸ್ಟಿನ್​ ಲ್ಯಾಂಗರ್​ (ಲಖನೌ) ಕೋಚ್​ ಆಗಿದ್ದಾರೆ.

ಒತ್ತಡದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​

ಕಳೆದ 2 ಪಂದ್ಯಗಳಲ್ಲಿ 230ಕ್ಕೂ ಅಧಿಕ ರನ್​ ಬಿಟ್ಟುಕೊಟ್ಟು ಸೋತಿರುವ ಡೆಲ್ಲಿ ತಂಡ ಇನ್ನು ಒಂದೆರಡು ಪಂದ್ಯ ಸೋತರೆ ಪ್ಲೇಆ್​ ಆಸೆಯನ್ನು ಬಹುತೇಕ ಕೈಚೆಲ್ಲಬೇಕಾಗುತ್ತದೆ. ದಣ ಆಫ್ರಿಕಾ ವೇಗಿ ಅನ್ರಿಚ್​ ನೋಕಿಯಾ ದುಬಾರಿಯಾಗುತ್ತಿದ್ದರೆ, ಭಾರತೀಯ ವೇಗಿಗಳಾದ ಖಲೀಲ್​ ಅಹ್ಮದ್​, ಇಶಾಂತ್​ ಶರ್ಮ, ಮುಕೇಶ್​ ಕುಮಾರ್​ ಅಸ್ಥಿರ ನಿರ್ವಹಣೆ ತೋರಿದ್ದಾರೆ. ಇನ್ನು ಬ್ಯಾಟಿಂಗ್​ನಲ್ಲೂ ರಿಷಭ್​ ಪಂತ್​ ಮತ್ತು ಟ್ರಿಸ್ಟಾನ್​ ಸ್ಟಬ್ಸ್​ ಉತ್ತಮ ಲಯದಲ್ಲಿದ್ದರೆ, ಪೃಥ್ವಿ ಷಾ ಕಳೆದೆರಡು ಪಂದ್ಯಗಳಲ್ಲಿ ತಂಡದ ಅಗ್ರ ಕ್ರಮಾಂಕಕ್ಕೆ ಬಲ ತುಂಬಿದ್ದಾರೆ. ಆದರೂ ಡೆಲ್ಲಿ ತಂಡದ ಮಧ್ಯಮ ಕ್ರಮಾಂಕ ನಿರೀಕ್ಷಿತವಾಗಿ ರನ್​ ಕಲೆಹಾಕುವಲ್ಲಿ ಸಲವಾಗಿಲ್ಲ. ಆಲ್ರೌಂಡರ್​ ಮಿಚೆಲ್​ ಮಾರ್ಷ್​ ಗಾಯದ ಸಮಸ್ಯೆಯೂ ಡೆಲ್ಲಿಗೆ ಹಿನ್ನಡೆ ತಂದಿದೆ. ಸ್ಪಿನ್ನರ್​ ಕುಲದೀಪ್​ ಯಾದವ್​ ಕೂಡ ಇನ್ನೂ ಕೆಲ ಪಂದ್ಯ ಹೊರಗುಳಿಯಲಿದ್ದಾರೆ.

ಪಡಿಕ್ಕಲ್​ ಫಾರ್ಮ್​ ಚಿಂತೆ

ಕಳೆದ ದೇಶೀಯ ಕ್ರಿಕೆಟ್​ ಋತುವಿನಲ್ಲಿ ರನ್​ಮಳೆ ಹರಿಸಿದ್ದ ಕರ್ನಾಟಕದ ಎಡಗೈ ಬ್ಯಾಟರ್​ ದೇವದತ್​ ಪಡಿಕ್ಕಲ್​ ಐಪಿಎಲ್​ ಶುರುವಾದ ನಂತರ ರನ್​ ಗಳಿಸುವುದನ್ನೇ ಮರೆತುಬಿಟ್ಟಿದ್ದಾರೆ. ಕ್ವಿಂಟನ್​ ಡಿಕಾಕ್​, ಕೆಎಲ್​ ರಾಹುಲ್​, ನಿಕೋಲಸ್​ ಪೂರನ್​ ಬ್ಯಾಟಿಂಗ್​ನಲ್ಲಿ ಉತ್ತಮ ಕೊಡುಗೆ ನೀಡುತ್ತಿರುವ ನಡುವೆ, ವನ್​ಡೌನ್​ ಬ್ಯಾಟರ್​ ಪಡಿಕ್ಕಲ್​ ಕಳೆದ 4 ಪಂದ್ಯಗಳಲ್ಲೂ ಎರಡಂಕಿ ತಲುಪಲಾಗದೆ ಪರದಾಡಿದ್ದಾರೆ. ಈ ಬಾರಿ ರಾಜಸ್ಥಾನ ತಂಡದಿಂದ ಲಖನೌಗೆ ವರ್ಗಾವಣೆಗೊಂಡಿರುವ ಪಡಿಕ್ಕಲ್​ ನಿರೀಕ್ಷೆಯನ್ನು ಉಳಿಸಿಕೊಳ್ಳಬೇಕಿದೆ. ಗುಜರಾತ್​ ಎದುರು ಮಯಾಂಕ್​ ಯಾದವ್​ ಅರ್ಧದಲ್ಲೇ ಮೈದಾನ ತೊರೆದರೂ, ಮತ್ತೋರ್ವ ಯುವ ವೇಗಿ ಯಶ್​ ಠಾಕೂರ್​ 5 ವಿಕೆಟ್​ ಕಬಳಿಸಿ ಮಿಂಚಿದ್ದರು. ಜತೆಗೆ ನವೀನ್​ ಉಲ್​ ಹಕ್​, ಕೃನಾಲ್​ ಪಾಂಡ್ಯ, ರವಿ ಬಿಷ್ಣೋಯಿ ಒಳಗೊಂಡ ಲಖನೌ ಬೌಲಿಂಗ್​ ವಿಭಾಗ ಬಲಿಷ್ಠವಾಗಿದೆ.

ಮುಖಾಮುಖಿ: 3

ಲಖನೌ: 3

ಡೆಲ್ಲಿ: 0

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋಸಿನಿಮಾ.

*9: ರಿಷಭ್​ ಪಂತ್​ ಇನ್ನು 9 ರನ್​ ಗಳಿಸಿದರೆ ಐಪಿಎಲ್​ನಲ್ಲಿ 3 ಸಾವಿರ ರನ್​ ಪೂರೈಸಲಿದ್ದಾರೆ.

*3: ಕೆಎಲ್​ ರಾಹುಲ್​ ಇನ್ನು 3 ಸಿಕ್ಸರ್​ ಸಿಡಿಸಿದರೆ, ಟಿ20 ಕ್ರಿಕೆಟ್​ನಲ್ಲಿ 300 ಸಿಕ್ಸರ್​ ಪೂರೈಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net