

ಬೆಂಗಳೂರು: ಕ್ರಿಕೆಟ್ ಆಟವನ್ನು 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ಗೆ ಸೇರ್ಪಡೆಗೊಳಿಸಿದ ಬಳಿಕ ವಿಶ್ವದೆಲ್ಲೆಡೆ ಈ ಕ್ರೀಡೆ ಹರಡಲಾರಂಭಿಸಿದೆ. ಇದರ ನಡುವೆ ಮೋಸದಾಟವೂ ಹೆಚ್ಚಾದಂತಿದೆ! ಹೌದು, ಫ್ರಾನ್ಸ್ನಲ್ಲಿ ಕ್ರಿಕೆಟ್ ಪಂದ್ಯಗಳು ನಡೆದಿರುವ ಫ್ರಾನ್ಸ್ ಕ್ರಿಕೆಟ್ ಮಂಡಳಿ (ಎಫ್ಸಿ) ತನ್ನ ವೆಬ್ಸೈಟ್ಗಳಲ್ಲಿ ಸ್ಕೋರ್ಕಾರ್ಡ್ಗಳನ್ನು ಪ್ರಕಟಿಸುತ್ತಿದೆ. ಆದರೆ ವಾಸ್ತವವಾಗಿ ಅಲ್ಲಿ ಆ ಕ್ರಿಕೆಟ್ ಪಂದ್ಯಗಳೇ ನಡೆದಿಲ್ಲ! ಹಾಗಾದರೆ ಸ್ಕೋರ್ಕಾರ್ಡ್ ಸಿದ್ಧವಾಗಿದೆ. ಇದುವೇ ಫೇಕ್ ಕ್ರಿಕೆಟ್!
ಈ ರೀತಿಯ ನಕಲಿ ಕ್ರಿಕೆಟ್ಗೆ ಕಾರಣ, ಕ್ರಿಕೆಟ್ ಅಭಿವೃತ್ತಿಗಾಗಿ ಐಸಿಸಿಯಿಂದ ಸಿಗುವ ಅನುದಾನ. ಐಸಿಸಿಯಿಂದ ಹಣವನ್ನು ಪಡೆದುಕೊಳ್ಳುವುದಕ್ಕಾಗಿ ಈ ರೀತಿ, ಪಂದ್ಯಗಳು ನಡೆಯದಿದ್ದರೂ, ಅದರ ಸ್ಕೋರ್ಕಾರ್ಡ್ಗಳನ್ನು ನಕಲಿಯಾಗಿ ಸಿದ್ಧಪಡಿಸಲಾಗುತ್ತಿದೆ. ಹೀಗೆಂದು ಫ್ರಾನ್ಸ್ ಕ್ರಿಕೆಟ್ ಮಂಡಳಿ ವಿರುದ್ಧ ದೂರುಗಳು ಕೇಳಬಂದ ಬೆನ್ನಲ್ಲೇ ಐಸಿಸಿ ಈ ಪ್ರಕರಣದ ತನಿಖೆಗೆ ಮುಂದಾಗಿದೆ.
ಫ್ರಾನ್ಸ್ನ ಮಾಜಿ ಮಹಿಳಾ ಕ್ರಿಕೆಟರ್ ಹಾಗೂ ಕ್ರಿಕೆಟ್ ಮಂಡಳಿ ಸದಸ್ಯೆ ಟ್ರಾಸಿ ರೋಡ್ರಿಗಸ್, ಫ್ರಾನ್ಸ್24 ವಾಹಿನಿಯಲ್ಲಿ ಇಂಥದ್ದೊಂದು ಆರೋಪವನ್ನು ಮಾಡಿದ್ದಾರೆ. ಮಂಡಳಿ ವತಿಯಿಂದ ಕ್ರಿಕೆಟ್ ಪಂದ್ಯಗಳು ನಡೆಯುತ್ತಿವೆ ಎಂದು ಹೇಳಲಾದ ಪ್ಯಾರಿಸ್ ಮೈದಾನಕ್ಕೆ ಅವರು ಹೋದಾಗ ಅಲ್ಲಿ ಯಾವುದೇ ಪಂದ್ಯಗಳು ನಡೆಯುತ್ತಿರಲಿಲ್ಲವಂತೆ! ಆದರೆ, ಕೆಲದಿನಗಳ ಬಳಿಕ ಅದೇ ಮೈದಾನದಲ್ಲಿ ಪಂದ್ಯಗಳು ನಡೆದಿರುವ ಬಗ್ಗೆ ಆನ್ಲೈನ್ನಲ್ಲಿ ಸ್ಕೋರ್ಕಾರ್ಡ್ಗಳು ಪ್ರಕಟಗೊಂಡಿದ್ದವಂತೆ!
ಫ್ರಾನ್ಸ್ ಕ್ರಿಕೆಟ್ ಮಂಡಳಿ ಐಸಿಸಿಯ ಅಸೋಸಿಯೇಟ್ ಸದಸ್ಯನಾಗಿದ್ದು, ಮಹಿಳಾ ಮತ್ತು ಜೂನಿಯರ್ ಕ್ರಿಕೆಟ್ ಅಭಿವೃದ್ಧಿಗಾಗಿ ಅನುದಾನವನ್ನೂ ಪಡೆದುಕೊಳ್ಳುತ್ತದೆ. 2022ರಲ್ಲಿ ಫ್ರಾನ್ಸ್ ಕ್ರಿಕೆಟ್ ಅಭಿವೃದ್ಧಿಗಾಗಿ ಐಸಿಸಿ, 3.20 ಲಕ್ಷ ಡಾಲರ್ ಅಂದರೆ 2.66 ಕೋಟಿ ರೂ. ಅನುದಾನ ನೀಡಿತ್ತು. ಹೀಗಾಗಿ ಐಸಿಸಿ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸಲು ಮುಂದಾಗಿದೆ.