

ನವದೆಹಲಿ: ಅ. 10ರಂದು ಹೈದರಾಬಾದ್ನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧದ ಗೆಲುವನ್ನು ಪಾಕ್ ಆಟಗಾರ ಮೊಹಮ್ಮದ್ ರಿಜ್ವಾನ್, ಇಸ್ರೇಲ್ ಮೇಲೆ ದಾಳಿ ಮಾಡಿದ ಹಮಾಸ್ ಉಗ್ರರಿಗೆ ಅರ್ಪಿಸಿದರು. ಇದು ಸಾಕಷ್ಟು ಟೀಕೆಗೂ ಗುರಿಯಾಗಿತ್ತು. ನಿನ್ನೆ ಪಾಕ್ ವಿರುದ್ಧ ನಡೆದ ವಿಶ್ವಕಪ್ ಟೂರ್ನಿಯ 12ನೇ ಪಂದ್ಯದಲ್ಲಿ ಭಾರತ ಭರ್ಜರಿ ಜಯ ದಾಖಲಿಸಿದ್ದು, ವೇಗಿ ಮೊಹಮ್ಮದ್ ಸಿರಾಜ್ ಗೆಲುವನ್ನು ಇಸ್ರೇಲ್ಗೆ ಅರ್ಪಣೆ ಮಾಡಿದ್ದಾರೆ ಎಂದು ಹೇಳಲಾದ ಎಕ್ಸ್ (ಟ್ವಿಟರ್) ಖಾತೆಯ ಒಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಾಕಷ್ಟು ಮಂದಿ ಪ್ರತಿಕ್ರಿಯೆ ಸಹ ಅದಕ್ಕೆ ನೀಡುತ್ತಿದ್ದಾರೆ.
ಸಿರಾಜ್ ನಿಜವಾಗಿಯೂ ಪಾಕಿಸ್ತಾನಕ್ಕೆ ಟಾಂಗ್ ಕೊಟ್ರಾ? ಟ್ವೀಟ್ ಮಾಡಿರುವುದು ನಿಜವೇ? ಎಂಬುದನ್ನು ನಾವೀಗ ತಿಳಿಯೋಣ. ನಿನ್ನೆ ನಡೆದ ಪಂದ್ಯದಲ್ಲಿ ಪಾಕ್ಗೆ ಆರಂಭಿಕ ಆಘಾತ ನೀಡಿದ್ದೇ ಸಿರಾಜ್, ಶ್ರೀಲಂಕಾ ವಿರುದ್ಧ ಶತಕ ಬಾರಿಸಿ, ಗೆಲುವಿಗೆ ಕಾರಣರಾಗಿದ್ದ ಅಬ್ದುಲ್ಲಾ ಶಫೀಕ್ರನ್ನು ಸಿರಾಜ್ ಎಲ್ಬಿಡಬ್ಲ್ಯು ಬಲೆಗೆ ಬೀಳಿಸುವ ಮೂಲಕ 20 ರನ್ಗೆ ಕಟ್ಟಿಹಾಕಿದರು. ಇದಾದ ಬಳಿಕ ಉತ್ತಮವಾಗಿ ಆಡುತ್ತಾ ಕ್ರೀಸ್ನಲ್ಲಿ ಅಂಟಿಕೊಂಡಿದ್ದ ನಾಯಕ ಬಾಬರ್ ಅಜಾಮ್ (50 ರನ್, 58 ಎಸೆತ, 7 ಬೌಂಡರಿ)ರನ್ ಬೋಲ್ಡ್ ಮಾಡುವ ಮೂಲಕ ತಂಡಕ್ಕೆ ಸಿರಾಜ್ ಒಳ್ಳೆಯ ಬೂಸ್ಟ್ ನೀಡಿದರು. ಇಲ್ಲಿಂದಾಚೆಗೆ ಪಾಕ್ ಆಟಗಾರರ ಪೆವಿಲಿಯನ್ ಪರೇಡ್ ಮುಂದುವರಿಯಿತು. ಅಂತಿಮವಾಗಿ ಭಾರತ ಬೌಲರ್ಗಳು 42.5 ಓವರ್ಗಳಲ್ಲಿ 191 ರನ್ಗೆ ಪಾಕ್ ತಂಡವನ್ನು ಆಲೌಟ್ ಮಾಡಿತು.
ಟೀಮ್ ಇಂಡಿಯಾ ನಿನ್ನೆಯ ಪಂದ್ಯದಲ್ಲಿ ಸಂಘಟಿತ ಬೌಲಿಂಗ್ ಪ್ರದರ್ಶನ ಮಾಡಿತು. ಇದೇ ಟೀಮ್ ಇಂಡಿಯಾದ ಗೆಲುವಿಗೆ ಮುಖ್ಯ ಕಾರಣವಾಯಿತು. ಹೀಗಾಗಿ ಸಿರಾಜ್ ಟೀಮ್ ಬೌಲರ್ಗಳ ಅಮೋಘ ಪ್ರದರ್ಶನವನ್ನು ಯುದ್ಧ ಪೀಡಿತ ಇಸ್ರೇಲ್ನ ಸಹೋದರ-ಸಹೋದರಿಯರಿಗೆ ಅರ್ಪಿಸಿ, ಟ್ವೀಟ್ ಮಾಡಿದ್ದಾರೆ ಎನ್ನಲಾದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟ್ವೀಟ್ನಲ್ಲಿ ಏನಿದೆ?
ಪಾಕ್ ಆಟಗಾರರ ವಿಕೆಟ್ಗಳನ್ನು ಪಡೆದು ಟೀಮ್ ಇಂಡಿಯಾ ಆಟಗಾರರು ಸಂಭ್ರಮಿಸಿದ ಫೋಟೋಗಳನ್ನು ಶೇರ್ ಮಾಡಿಕೊಂಡು ಇದು ನಮ್ಮ ಇಸ್ರೇಲ್ ಸಹೋದರ-ಸಹೋದರಿಯರಿಗೆ ಎಂದು ಬರೆಯಲಾಗಿದೆ.
ಸಿರಾಜ್ ಮಾಡಿದ ಟ್ವೀಟ್ ಅಲ್ಲ
ವೈರಲ್ ಆಗಿರುವ ಟ್ವೀಟ್ ಸಿರಾಜ್ ಅವರು ಮಾಡಿದ್ದಲ್ಲ. ಅವರ ಅಧಿಕೃತ ಖಾತೆಯಲ್ಲಿ ಎಲ್ಲಿಯೂ ಈ ಟ್ವೀಟ್ ಕಂಡಿಲ್ಲ. ನಿನ್ನೆ ನಡೆದ ಪಂದ್ಯದ ಬಳಿಕ ನಾವು 3 ಪಂದ್ಯವನ್ನು ಗೆದ್ದಿದ್ದೇವೆ. ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ ಎಂದು ಸಿರಾಜ್ ಟ್ವೀಟ್ ಮಾಡಿದ್ದಾರಷ್ಟೇ. ಅದರ ಹಿಂದಿನ ಟ್ವೀಟ್ನಲ್ಲಿ ಆಫ್ಘಾನ್ ವಿರುದ್ಧ ರೋಹಿತ್ ಶರ್ಮ ಶತಕ ಬಾರಿಸಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಆದರೆ, ಇಸ್ರೇಲ್ ಮಂದಿಯನ್ನು ಉಲ್ಲೇಖಿಸಿ ಸಿರಾಜ್ ಯಾವುದೇ ಟ್ವೀಟ್ ಮಾಡಿಲ್ಲ.
ನಕಲಿ ಖಾತೆಯಿಂದ ಟ್ವೀಟ್ ಮೊಹಮ್ಮದ್ ಸಿರಾಜ್ ಹೆಸರಲ್ಲಿ ಇರುವ ನಕಲಿ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಅವರ ಟ್ವೀಟ್ಗೆ ಟಾಂಗ್ ಕೊಡುವ ಉದ್ದೇಶದಿಂದ ಯಾರೋ ಸಿರಾಜ್ ಹೆಸರಲ್ಲಿ ನಕಲಿ ಖಾತೆಯನ್ನು ತೆರೆದು ಟ್ವೀಟ್ ಮಾಡಿದ್ದಾರೆ. ಇದೀಗ ಆ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮೊಹಮ್ಮದ್ ಸಿರಾಜ್ ಅವರ ಅಧಿಕೃತ ಖಾತೆಯಲ್ಲಿ ಬ್ಲ್ಯೂಟಿಕ್ ಮಾರ್ಕ್ ಇದೆ. ಆದರೆ, ನಕಲಿ ಖಾತೆಯಲ್ಲಿ ಯಾವುದೇ ಬ್ಲ್ಯೂಟಿಕ್ ಮಾರ್ಕ್ ಇಲ್ಲದಿರುವುದರಿಂದ ನಕಲಿ ಖಾತೆ ಎಂಬುದು ದೃಢವಾಗಿದೆ. ವೈರಲ್ ಆಗುತ್ತಿರುವ ಟ್ವೀಟ್ಗೂ ಸಿರಾಜ್ಗೂ ಯಾವುದೇ ಸಂಬಂಧವೇ ಇಲ್ಲ.
ಮೊಹಮ್ಮದ್ ರಿಜ್ವಾನ್ ಟ್ವೀಟ್ನಲ್ಲಿ ಏನಿತ್ತು? ಶ್ರೀಲಂಕಾ ವಿರುದ್ಧದ ಗೆಲುವು ಮತ್ತು ಶತಕ ಗಾಜಾದಲ್ಲಿರುವ ನಮ್ಮ ಸಹೋದರ ಮತ್ತು ಸಹೋದರಿಯರಿಗೆ. ಗೆಲುವನ್ನು ನಿಮಗೆ ಅರ್ಪಿಸಲು ತುಂಬಾ ಸಂತೋಷವಾಗುತ್ತದೆ. ಇಡೀ ತಂಡಕ್ಕೆ ಅದರಲ್ಲೂ ಗೆಲುವನ್ನು ತುಂಬಾ ಸುಲಭಗೊಳಿಸಿದ ಅಬ್ದುಲ್ ಶಫೀಕ್ ಮತ್ತು ಹಸನ್ ಅಲಿಗೆ ಈ ಕ್ರೆಡಿಟ್ ಸಲ್ಲುತ್ತದೆ. ಅದ್ಭುತ ಸತ್ಕಾರ ಮತ್ತು ಬೆಂಬಲ ನೀಡಿದ ಹೈದರಾಬಾದ್ ಜನತೆಗೆ ಅತ್ಯಂತ ಕೃತಜ್ಞರಾಗಿರುತ್ತೇವೆ ಎಂದು ರಿಜ್ವಾನ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು.
ರಕ್ತಪಾತ ಸೃಷ್ಟಿಸಿರುವ ಹಮಾಸ್
ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ರಿಜ್ವಾನ್ರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಅ.7ರ ಶನಿವಾರದಂದು ಮುಂಜಾನೆ ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ ದಿಢೀರ್ ದಾಳಿ ಮಾಡಿ, ಯುದ್ಧಕ್ಕೆ ಮುನ್ನುಡಿ ಬರೆದಿರುವ ಹಮಾಸ್ ಉಗ್ರರು ಇಸ್ರೇಲ್ನಲ್ಲಿ ರಕ್ತಪಾತ ಸೃಷ್ಟಿಸಿದ್ದಾರೆ. ಶಿಶುಗಳೆಂದು ನೋಡದೆ ಶಿರಚ್ಛೇದ ಮಾಡಿ ಮೃಗೀಯವಾಗಿ ನಡೆದುಕೊಳ್ಳುತ್ತಿದ್ದರೆ. ಭಾರತವೂ ಸೇರಿದಂತೆ ಜಗತ್ತಿನ ಬಹುತೇಕರು ಹಮಾಸ್ ಉಗ್ರರರ ನಡೆಯನ್ನು ಟೀಕೆ ಮಾಡುತ್ತಿರುವ ಈ ಸಂದರ್ಭದಲ್ಲಿ ಪಾಕ್ ಕ್ರಿಕೆಟಿಗ ರಿಜ್ವಾನ್, ಭಾರತದ ನೆಲದಲ್ಲೇ ನಿಂತು ತಮ್ಮ ಗೆಲುವು ಮತ್ತು ಶತಕವನ್ನು ಹಮಾಸ್ ಉಗ್ರರಿಗೆ ಅರ್ಪಿಸಿರುವುದಲ್ಲದೆ, ಅವರನ್ನು ಪ್ರೀತಿಯ ಸಹೋದರ, ಸಹೋದರಿಯರೇ ಎಂದು ಸಂಭೋದಿಸಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ರಿಜ್ವಾನ್ಗೆ ನೆಟ್ಟಿಗರ ತರಾಟೆ
ರಿಜ್ವಾನ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು ಪಾಕಿಸ್ತಾನ ತಂಡವನ್ನು ವಾಪಸ್ ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದಿದ್ದಾರೆ. ಅಲ್ಲದೆ, ಕ್ರಿಕೆಟ್ ವಿಶ್ವಕಪ್ ಟೂರ್ನಿಯನ್ನು ಹಮಾಸ್ ಉಗ್ರರಿಗೆ ಬೆಂಬಲ ನೀಡುವ ಸಾಧನವಾಗಿ ಮಾಡಿಕೊಳ್ಳಲು ಐಸಿಸಿ ಅನುಮತಿ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಪ್ರಸ್ತುತ ರಿಜ್ವಾನ್ ಅವರು ಅಸಂಸ್ಕೃತ ವರ್ತನೆ ಅಥವಾ ರಕ್ತಪಾತವನ್ನು ತೀವ್ರವಾಗಿ ವಿರೋಧಿಸುವ ನೆಲದಲ್ಲಿ ಇದ್ದಾರೆ. ಎಲ್ಲಿಯವರೆಗೆ ಅವರು ಭಾರತದ ನೆಲದಲ್ಲಿ ಇರುತ್ತಾರೋ ಅಲ್ಲಿಯವರೆಗೆ ಅವರು ಈ ನೆಲದ ಭಾವನೆಗಳಿಗೆ ಗೌರವ ಸಲ್ಲಿಸಬೇಕಿದೆ ಎಂದು ನಾಗೇಶ್ವರ ಸದಾಸ್ ಎಂಬುವರು ರಿಜ್ವಾನ್ಗೆ ಬುದ್ಧಿ ಹೇಳಿದ್ದಾರೆ. ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ, ಭಾರತ ಇಸ್ರೇಲ್ ಪರ ನಿಂತಿರುವುದುನ್ನು ಉಲ್ಲೇಖಿಸಿರುವ ನೆಟ್ಟಿಗ, ಆತ್ಮೀಯ ಬಿಸಿಸಿಐ, ಭಾರತ ಮತ್ತು ಪಾಕ್ ನಡುವಿನ ಪಂದ್ಯದ ಸಮಯದಲ್ಲಿ ಇಸ್ರೇಲ್ಗೆ ಬೆಂಬಲ ಪ್ರದರ್ಶಿಸಲು ಕಪ್ಪು ಪಟ್ಟಿಗಳನ್ನು ಧರಿಸಲು ನಮ್ಮ ಆಟಗಾರರಿಗೆ ಏಕೆ ಅವಕಾಶ ನೀಡಬಾರದು? ಎಂದು ಪ್ರಶ್ನೆ ಮಾಡಿದ್ದಾರೆ.
ಪಾಕ್ ವಿರುದ್ಧ ವಿಶ್ವಕಪ್ ಗೆಲುವಿನ ಸರಣಿ
ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ದುಕೊಂಡಿತು. ನಾಯಕ ರೋಹಿತ್ ಶರ್ಮಾ ನಿರ್ಧಾರವನ್ನು ಸಮರ್ಥಿಸಿಕೊಂಡ ಭಾರತದ ಬೌಲರ್ಗಳು ಎದುರಾಳಿ ಪಾಕ್ ತಂಡವನ್ನು 42.5 ಓವರ್ಗಳಲ್ಲಿ 191ಕ್ಕೆ ಆಲೌಟ್ ಮಾಡಿದ್ದರು. ಭಾರತದ ಪರ ಜಸ್ಪ್ರೀತ್ ಬುಮ್ರಾ (7-1-19-2), ಮೊಹಮ್ಮದ್ ಸಿರಾಜ್ (8-0-50-2), ಹಾರ್ದಿಕ್ ಪಾಂಡ್ಯ (6-0-34-2), ಕುಲದೀಪ್ ಯಾದವ್ (10-0-35-2), ರವೀಂದ್ರ ಜಡೇಜಾ (9.5-0-38-2), ಶಾರ್ದೂಲ್ ಠಾಕೂರ್ (2-0-12-0) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
192ರನ್ಗಳ ಸುಲಭ ಗುರಿ ಬೆನ್ನತ್ತಿದ್ದ ಭಾರತ ತಂಡವು ನಾಯಕ ರೋಹಿತ್ ಶರ್ಮಾ (86 ರನ್, 63 ಎಸೆತ, 6 ಬೌಂಡರಿ, 6 ಸಿಕ್ಸರ್), ಶ್ರೇಯಸ್ ಅಯ್ಯರ್ (53 ರನ್, 62 ಎಸೆತ, 3 ಬೌಂಡರಿ, 2 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ಫಲವಾಗಿ ಸುಲಭ ಗುರಿಯನ್ನು 30.3 ಒವರ್ಗಳಲ್ಲಿ ತಲುಪಿ ಗೆಲುವಿನ ನಗೆ ಬೀರಿತ್ತು. ಈ ಮೂಲಕ ಭಾರತ ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧದ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ನಿನ್ನೆಯ ಪಂದ್ಯವು ಸೇರಿದಂತೆ ವಿಶ್ವಕಪ್ ಟೂರ್ನಿಯಲ್ಲಿ 8 ಬಾರಿ ಮುಖಾಮುಖಿಯಾಗಿದ್ದು, 8 ಬಾರಿಯೂ ಭಾರತವೇ ಜಯಿಸಿದೆ. (ಏಜೆನ್ಸೀಸ್)