ಏಷ್ಯಾಕಪ್​ನಲ್ಲಿ ಇಂದು ಭಾರತಕ್ಕೆ ನೇಪಾಳ, ಮಳೆ ಎದುರಾಳಿ! ಪಂದ್ಯ ರದ್ದಾದರೂ, ರೋಹಿತ್​ ಪಡೆ ಸೇಫ್​!

ind vs nepal web
Published on

ಪಲ್ಲೆಕಿಲೆ (ಕ್ಯಾಂಡಿ): ಪಾಕ್​ ವಿರುದ್ಧದ ಹೈ-ವೋಲ್ಟೇಜ್​ ಪಂದ್ಯಕ್ಕೆ ಮಳೆ ತಣ್ಣೀರು ಎರಚಿದ ಬಳಿಕ ಭಾರತ ತಂಡ ಏಷ್ಯಾಕಪ್​ ಏಕದಿನ ಟೂರ್ನಿಯ ತನ್ನ 2ನೇ ಲೀಗ್​ ಪಂದ್ಯದಲ್ಲಿ ಸೋಮವಾರ ಉಪಖಂಡದ 'ಕ್ರಿಕೆಟ್​ ಶಿಶು' ನೇಪಾಳ ತಂಡವನ್ನು ಎದುರಿಸಲಿದೆ. ಆದರೆ ಪಂದ್ಯದ ವೇಳೆ ನೇಪಾಳ ತಂಡಕ್ಕಿಂತ ಮಳೆಯೇ ಭಾರತಕ್ಕೆ ದೊಡ್ಡ ಸವಾಲು ಎನಿಸಲಿದೆ. ಇದರ ನಡುವೆ, ಪಂದ್ಯ ರದ್ದಾದರೂ ಸೂಪರ್​-4 ಹಂತಕ್ಕೇರುವ ಅವಕಾಶವನ್ನು ರೋಹಿತ್​ ಶರ್ಮ ಪಡೆ ಹೊಂದಿದೆ.

ಭಾರತ ವಿರುದ್ಧದ ಪಂದ್ಯ ರದ್ದಾಗಿ ಅಂಕ ಹಂಚಿಕೊಂಡ ಬೆನ್ನಲ್ಲೇ ಪಾಕಿಸ್ತಾನ ತಂಡ ಎ ಗುಂಪಿನಿಂದ ಸೂಪರ್​-4 ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. ಈಗ ಭಾರತ ತಂಡ ಗೆಲುವಿನೊಂದಿಗೆ ಗುಂಪಿನ 2ನೇ ತಂಡವಾಗಿ ಸೂಪರ್​-4 ಹಂತಕ್ಕೇರುವ ಹಂಬಲದಲ್ಲಿದೆ. ಆದರೆ, ನೇಪಾಳ ಮೊದಲ ಪಂದ್ಯದಲ್ಲಿ ಪಾಕ್​ ವಿರುದ್ಧ ಸೋತಿರುವುದರಿಂದ, ಪಂದ್ಯ ರದ್ದಾದರೂ ಮತ್ತೆ ಒಂದು ಅಂಕ ಸಂಪಾದಿಸಿ ಭಾರತ ಸೂಪರ್​-4 ಪ್ರವೇಶಿಸಲಿದೆ. 'ಆಘಾತಕಾರಿ ಸೋಲು' ಒಂದೇ ಈಗ ಭಾರತ ತಂಡ ಸೂಪರ್​-4 ಪ್ರವೇಶಿಸದಂತೆ ತಡೆಗಟ್ಟಬಹುದಾಗಿದೆ. ಶ್ರೀಲಂಕಾದಲ್ಲಿ ಈಗ ಮಳೆಗಾಲ. ಹೀಗಾಗಿ ಲಂಕಾದಲ್ಲಿ ನಡೆಯುವ ಟೂರ್ನಿಯ ಪ್ರತಿ ಪಂದ್ಯಕ್ಕೂ ಮಳೆ ಭೀತಿ ಇದೆ. ನೇಪಾಳ ವಿರುದ್ಧದ ಪಂದ್ಯವೂ ಅದರಿಂದ ಹೊರತಾಗಿಲ್ಲ.

ಅಗ್ರ ಕ್ರಮಾಂಕಕ್ಕೆ ಬ್ಯಾಟಿಂಗ್​ ಅಭ್ಯಾಸ ಅವಕಾಶ

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕ ಕೈಕೊಟ್ಟ ಸಮಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್​ ಕೀಪರ್​-ಬ್ಯಾಟರ್​ ಇಶಾನ್​ ಕಿಶನ್​ ಮತ್ತು ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಆಸರೆಯಾಗಿದ್ದರು. ಇದೀಗ ನೇಪಾಳ ವಿರುದ್ಧದ ಪಂದ್ಯ ಭಾರತದ ಅಗ್ರ ಕ್ರಮಾಂಕಕ್ಕೆ ಬ್ಯಾಟಿಂಗ್​ ಅಭ್ಯಾಸ ಅವಕಾಶ ಒದಗಿಸಲಿದೆ. ನಾಯಕ ರೋಹಿತ್​ ಶರ್ಮ, ಶುಭಮಾನ್​ ಗಿಲ್​, ವಿರಾಟ್​ ಕೊಹ್ಲಿ ಮತ್ತು ಶ್ರೇಯಸ್​ ಅಯ್ಯರ್​ ದೊಡ್ಡ ಇನಿಂಗ್ಸ್​ ಆಡುವತ್ತ ಗಮನಹರಿಸಲಿದ್ದಾರೆ. ಪಾಕ್​ ವೇಗಿಗಳ ಎದುರು ತತ್ತರಿಸಿದ್ದ ಟಾಪ್​-4, ನೇಪಾಳ ಎದುರು ಲಯಕ್ಕೆ ಮರಳಬೇಕಿದೆ. ನೇಪಾಳದ ಬೌಲಿಂಗ್​ ವಿಭಾಗಕ್ಕೆ ಭಾರತದ ಬ್ಯಾಟಿಂಗ್​ ವಿಭಾಗ ಕಠಿಣ ಸವಾಲೆನಿಸುವುದು ನಿಶ್ಚಿತ.

ಬೌಲರ್​ಗಳಿಗೆ ಸುಲಭ ಸವಾಲು

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಬ್ಯಾಟಿಂಗ್​ ಮಾತ್ರ ಮಾಡಿದ್ದರಿಂದ ಬೌಲರ್​ಗಳಿಗೆ ಕಣಕ್ಕಿಳಿಯುವ ಅವಕಾಶ ಲಭಿಸಲಿಲ್ಲ. ಈ ಬಾರಿ ಮಳೆ ಅವಕಾಶ ಕಲ್ಪಿಸಿದರೆ, ಭಾರತೀಯ ಬೌಲರ್​ಗಳು ನೇಪಾಳಕ್ಕೆ ಕಠಿಣ ಸವಾಲಾಗಬಲ್ಲರು.

ಟೀಮ್​ ನ್ಯೂಸ್​:

ಭಾರತ: ವೇಗಿ ಜಸ್​ಪ್ರೀತ್​ ಬುಮ್ರಾ ದಿಢೀರ್​ ತವರಿಗೆ ಮರಳಿರುವುದರಿಂದ ಅವರ ಸ್ಥಾನದಲ್ಲಿ ಅನುಭವಿ ವೇಗಿ ಮೊಹಮದ್​ ಶಮಿ ಅಥವಾ ಕನ್ನಡಿಗ ಪ್ರಸಿದ್ಧ ಕೃಷ್ಣ ಕಣಕ್ಕಿಳಿಯಬಹುದು. ದುರ್ಬಲ ನೇಪಾಳ ಎದುರು ಸೂರ್ಯಕುಮಾರ್​ ಮತ್ತು ತಿಲಕ್​ ವರ್ಮಗೂ ಬ್ಯಾಟಿಂಗ್​ ಅಭ್ಯಾಸ ಸಿಗಲಿ ಎಂದು ಚಿಂತಿಸಿದರೆ, ಬ್ಯಾಟಿಂಗ್​ ವಿಭಾಗದಲ್ಲೂ ಬದಲಾವಣೆ ಆಗಬಹುದು.

ನೇಪಾಳ: ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಆಡಿದ ತಂಡದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಗಳಿಲ್ಲ.

*ಆರಂಭ: ಮಧ್ಯಾಹ್ನ 3.00

*ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net