ಇಂದಿನಿಂದ ಒಲಿಂಪಿಕ್ಸ್​ ಅರ್ಹತಾ ಮಹಿಳಾ ಹಾಕಿ; ಪ್ಯಾರಿಸ್​ ಟಿಕೆಟ್ ಒಲಿಸಿಕೊಳ್ಳಲು ಭಾರತ ಹೋರಾಟ

hockey web
Published on

ರಾಂಚಿ: ಭಾರತದ ಮಹಿಳಾ ಹಾಕಿ ತಂಡ ಸತತ 3ನೇ ಬಾರಿಗೆ ಜಾಗತಿಕ ಕ್ರೀಡಾಹಬ್ಬದಲ್ಲಿ ಪಾಲ್ಗೊಳ್ಳುವ ಹಂಬಲದೊಂದಿಗೆ ಎ್​ಐಎಚ್​ ಪ್ಯಾರಿಸ್​ ಒಲಿಂಪಿಕ್ಸ್​ ಅರ್ಹತಾ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ. ಕಳೆದ ವರ್ಷ ಏಷ್ಯನ್​ ಗೇಮ್ಸ್​ನಲ್ಲಿ ಕಂಚಿಗೆ ತೃಪ್ತಿಪಟ್ಟ ಕಾರಣ ನೇರಅರ್ಹತೆಯಿಂದ ವಂಚಿತವಾಗಿದ್ದ ಸವಿತಾ ಪೂನಿಯಾ ಪಡೆ ಇದೀಗ ತವರು ನೆಲದಲ್ಲೇ ನಡೆಯಲಿರುವ ಅರ್ಹತಾ ಟೂರ್ನಿಯಲ್ಲಿ ಪ್ಯಾರಿಸ್​ ಟಿಕೆಟ್​ ಒಲಿಸಿಕೊಳ್ಳುವ ಛಲದಲ್ಲಿದೆ. ಭಾರತ ತಂಡ ಶನಿವಾರ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕದ ಸವಾಲು ಎದುರಿಸಲಿದೆ.

ವಿಶ್ವ ನಂ. 5 ಜರ್ಮನಿ ಟೂರ್ನಿಯ ಹಾಟ್​ ೇವರಿಟ್​ ತಂಡವಾಗಿದ್ದರೆ, ವಿಶ್ವ ರ್ಯಾಂಕಿಂಗ್​ನಲ್ಲಿ 6ನೇ ಸ್ಥಾನದಲ್ಲಿರುವ ಆತಿಥೇಯ ಭಾರತ ನಂತರದ ನೆಚ್ಚಿನ ತಂಡವೆನಿಸಿದೆ. ಆದರೆ ಮಹಿಳಾ ಹಾಕಿಯಲ್ಲಿ ಇತ್ತೀಚೆಗೆ ತಂಡಗಳ ರ್ಯಾಂಕಿಂಗ್​ಗೂ, ಫಾಮ್​ರ್ಗೂ ಹೆಚ್ಚಿನ ವ್ಯತ್ಯಾಸ ಕಂಡುಬಂದಿರುವುದರಿಂದ ಭಾರತ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಅಮೆರಿಕ ವಿಶ್ವ ರ್ಯಾಂಕಿಂಗ್​ನಲ್ಲಿ ಸದ್ಯ 15ನೇ ಸ್ಥಾನದಲ್ಲಿದ್ದರೂ, 1983ರಿಂದ ಭಾರತ ವಿರುದ್ಧ ಇದುವರೆಗೆ ಆಡಿದ 15 ಪಂದ್ಯಗಳಲ್ಲಿ 9ರಲ್ಲಿ ಗೆದ್ದ ದಾಖಲೆ ಹೊಂದಿದೆ. ಭಾರತ 4ರಲ್ಲಿ ಗೆದ್ದಿದ್ದು, 2ರಲ್ಲಿ ಡ್ರಾ ಸಾಧಿಸಿದೆ. ಹೀಗಾಗಿ ಭಾರತ ಗೆಲುವಿಗೆ ಶ್ರೇಷ್ಠ ನಿರ್ವಹಣೆಯನ್ನೇ ಹೊರಹೊಮ್ಮಿಸಬೇಕಾಗಿದೆ. ವಿಶ್ವ ನಂ. 9 ನ್ಯೂಜಿಲೆಂಡ್​ ಭಾರತಕ್ಕೆ ಬಿ ಗುಂಪಿನಲ್ಲಿ ಪ್ರಬಲ ಎದುರಾಳಿ ಎನಿಸಿದೆ. ಅನುಭವಿ ಆಟಗಾರ್ತಿ ವಂದನಾ ಕಟಾರಿಯಾ ಗಾಯದಿಂದಾಗಿ ಅಲಭ್ಯರಾಗಿರುವುದು ಭಾರತಕ್ಕೆ ಟೂರ್ನಿಗೆ ಮುನ್ನ ಎದುರಾಗಿರುವ ಆಘಾತವಾಗಿದೆ. ಅವರ ಗೈರಿನಲ್ಲಿ ಲಾಲ್ರೆಮ್​ಸಿಯಾಮಿ, ಸಂಗೀತಾ ಕುಮಾರಿ, ದೀಪಿಕಾ, ಬಲ್ಜೀತ್​, ನಿಕ್ಕಿ ಪ್ರಧಾನ್​, ಮೋನಿಕಾ, ನವನೀತ್​ ಕೌರ್​, ಸಲಿಮಾ ಟೆಟೆ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.

ಗುಂಪುಗಳು:

ಎ: ಚಿಲಿ, ಜೆಕ್​ ಗಣರಾಜ್ಯ, ಜರ್ಮನಿ, ಜಪಾನ್​.

ಬಿ: ಭಾರತ, ಇಟಲಿ, ನ್ಯೂಜಿಲೆಂಡ್​, ಅಮೆರಿಕ.

3 ತಂಡಗಳಿಗೆ ಒಲಿಂಪಿಕ್ಸ್​ ಟಿಕೆಟ್​

ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ 8 ತಂಡಗಳನ್ನು ತಲಾ 4ರಂತೆ 2 ಗುಂಪುಗಳಲ್ಲಿ ವಿಭಾಗಿಸಲಾಗಿದ್ದು, ರೌಂಡ್​ ರಾಬಿನ್​ ಲೀಗ್​ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್​ಗೇರಲಿವೆ. ಫೈನಲ್​ಗೇರುವ 2 ತಂಡಗಳಿಗೆ ಒಲಿಂಪಿಕ್ಸ್​ ಅರ್ಹತೆ ಲಭಿಸಲಿದೆ. ಸೆಮೀಸ್​ನಲ್ಲಿ ಸೋತ 2 ತಂಡಗಳು 3ನೇ ತಂಡವಾಗಿ ಒಲಿಂಪಿಕ್ಸ್​ ಟಿಕೆಟ್​ ಒಲಿಸಿಕೊಳ್ಳಲು ಹೋರಾಡಲಿವೆ.

ಭಾರತದ ಪಂದ್ಯಗಳು

ದಿನಾಂಕ: ಎದುರಾಳಿ

ಜ. 13: ಅಮೆರಿಕ

ಜ. 14: ನ್ಯೂಜಿಲೆಂಡ್​

ಜ. 16: ಇಟಲಿ

ಆರಂಭ: ರಾತ್ರಿ 7.30

ಮೆಡಲ್​ ರೌಂಡ್​

ಜ.18: ಸೆಮಿಫೈನಲ್ಸ್​

ಜ.19: 3ನೇ ಸ್ಥಾನ

ಜ.19: ಫೈನಲ್​

3: ಭಾರತದ ಮಹಿಳಾ ಹಾಕಿ ತಂಡ ಇದುವರೆಗೆ 3 ಬಾರಿ ಮಾತ್ರ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿದೆ. 1980ರ ಬಳಿಕ 2016ರಲ್ಲೇ ಮತ್ತೆ ಅರ್ಹತೆ ಪಡೆದಿತ್ತು. 2021ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ 4ನೇ ಸ್ಥಾನ ಸಂಪಾದಿಸಿದ್ದು ಶ್ರೇಷ್ಠ ನಿರ್ವಹಣೆ ಎನಿಸಿದೆ.

*ಏಷ್ಯನ್​ ಗೇಮ್ಸ್​ನಲ್ಲಿ ಒಲಿಂಪಿಕ್ಸ್​ ಅರ್ಹತೆ ತಪ್ಪಿಸಿಕೊಂಡೆವು. ಆದರೆ ಅರ್ಹತಾ ಟೂರ್ನಿಯಲ್ಲಿ ಉತ್ತಮ ನಿರ್ವಹಣೆ ತೋರುವ ವಿಶ್ವಾಸ ನಮಗಿದೆ. ನಾವು ಹಿಂದಿಗಿಂತ ಉತ್ತಮವಾಗಿ ಮತ್ತು ನಮ್ಮ ಶ್ರೇಷ್ಠ ನಿರ್ವಹಣೆಯನ್ನು ತೋರಿದರೆ ಒಲಿಂಪಿಕ್ಸ್​ಗೆ ಅರ್ಹತೆ ಸಂಪಾದಿಸಲಿದ್ದೇವೆ.

> ಜಾನೆಕ್​ ಶಾಪ್ಮನ್​, ಭಾರತ ತಂಡ ಕೋಚ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net