

ಜಕಾರ್ತ: ಯುವ ಶೂಟರ್ ರಿದಂ ಸಂಗ್ವಾನ್ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ಗೆ ಭಾರತಕ್ಕೆ 16ನೇ ಕೋಟಾ ಸ್ಥಾನವನ್ನು ಗೆದ್ದುಕೊಟ್ಟಿದ್ದಾರೆ. ಏಷ್ಯನ್ ಅರ್ಹತಾ ಶೂಟಿಂಗ್ ಕೂಟದಲ್ಲಿ 25 ಮೀ. ಸ್ಪೋರ್ಟ್ಸ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಅವರು ಈ ಸ್ಥಾನ ಮಾಡಿದ್ದಾರೆ. ಇದರೊಂದಿಗೆ ಪ್ಯಾರಿಸ್ನಲ್ಲಿ ಭಾರತದಿಂದ ದಾಖಲೆಯ ಶೂಟರ್ಗಳು ಪಾಲ್ಗೊಳ್ಳಲಿದ್ದಾರೆ.
2021ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತದಿಂದ 15 ಶೂಟರ್ಗಳು ಭಾಗವಹಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಜುಲೈ&ಆಗಸ್ಟ್ನಲ್ಲಿ ಪ್ಯಾರಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲಿ ಭಾರತದಿಂದ ಸರ್ವಾಧಿಕ 16 ಶೂಟರ್ಗಳು ಭಾಗವಹಿಸಲಿದ್ದಾರೆ. ಏಷ್ಯನ್ ಅರ್ಹತಾ ಕೂಟದಲ್ಲಿ ಭಾರತಕ್ಕೆ ಲಭಿಸಿದ 3ನೇ ಕೋಟಾ ಸ್ಥಾನ ಆಗಿದೆ. ಈ ಮುನ್ನ ಇಶಾ ಸಿಂಗ್ ಮತ್ತು ವರುಣ್ ತೋಮರ್ ಮಹಿಳೆಯರ ಮತ್ತು ಪುರುಷರ 10 ಮೀ. ಪಿಸ್ತೂಲ್ ವಿಭಾಗದಲ್ಲಿ ಕೋಟಾ ಸ್ಥಾನ ಗೆದ್ದಿದ್ದರು.
ಹರಿಯಾಣದ 20 ವರ್ಷದ ರಿದಂ ಕಳೆದ ವರ್ಷ ಏಷ್ಯನ್ ಗೇಮ್ಸ್ನಲ್ಲಿ 25 ಮೀ. ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಏಷ್ಯನ್ ಅರ್ಹತಾ ಕೂಟದಲ್ಲಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟರೂ ರಿದಂಗೆ ಒಲಿಂಪಿಕ್ಸ್ ಸ್ಪರ್ಧೆ ಅವಕಾಶ ಲಭಿಸಿತು. ಇದು ಕೂಟದಲ್ಲಿ ರಿದಂಗೆ 3ನೇ ಪದಕವಾಗಿದೆ. ಈ ಮುನ್ನ 10 ಮೀ. ಏರ್ ಪಿಸ್ತೂಲ್ನ ಮಹಿಳಾ ತಂಡ ಸ್ಪರ್ಧೆಯಲ್ಲಿ ಇಶಾ ಜತೆ ಚಿನ್ನ ಮತ್ತು ಮಿಶ್ರ ತಂಡ ವಿಭಾಗದಲ್ಲಿ ಅರ್ಜುನ್ ಸಿಂಗ್ ಜತೆ ಬೆಳ್ಳಿ ಗೆದ್ದಿದ್ದರು.