

ಮಾಂಟ್ರಿಯಲ್: ಮಹಿಳಾ ಟೆನಿಸ್ ಲೋಕದ ಗ್ಲಾಮರಸ್ ತಾರೆ ಎನಿಸಿದ್ದ ಕೆನಡದ ಬೆಡಗಿ ಎಗುನಿ ಬೌಚಾರ್ಡ್ 2014ರ ವಿಂಬಲ್ಡನ್ನಲ್ಲಿ ಫೈನಲ್ಗೇರಿ ಗಮನಸೆಳೆದಿದ್ದರು. ಆದರೆ 2015ರ ನಂತರದಲ್ಲಿ ಅವರ ವೃತ್ತಿಪರ ಟೆನಿಸ್ ಜೀವನ ಏರುಗತಿ ಕಾಣಲೇ ಇಲ್ಲ. 2014ರಲ್ಲಿ ಡಬ್ಲ್ಯುಟಿಎ ಸಿಂಗಲ್ಸ್ ರ್ಯಾಂಕಿಂಗ್ನಲ್ಲಿ 5ನೇ ಸ್ಥಾನಕ್ಕೇರಿದ್ದ ಬೌಚಾರ್ಡ್ ಇತ್ತೀಚೆಗೆ 215ನೇ ಸ್ಥಾನಕ್ಕೆ ಕುಸಿತ ಕಂಡಿದ್ದರು. ಈ ಹಿನ್ನೆಲೆಯಲ್ಲಿ 29 ವರ್ಷದ ಬೌಚಾರ್ಡ್ ಈಗ ಕ್ರೀಡೆಯನ್ನೇ ಬದಲಾಯಿಸಲು ಮುಂದಾಗಿದ್ದು, 2024ರಿಂದ ವೃತ್ತಿಪರ ಪಿಕಲ್ಬಾಲ್ ಲೀಗ್ನಲ್ಲಿ ಆಡಲು ಸಜ್ಜಾಗಿದ್ದಾರೆ.
ಪಿಕಲ್ಬಾಲ್ ಕೂಡ ಒಂದು ರ್ಯಾಕೆಟ್ ಕ್ರೀಡೆಯಾಗಿದ್ದು, ಟೆನಿಸ್ ಕೋರ್ಟ್ಗಿಂತ ಕಿರಿದಾದ ಕೋರ್ಟ್ನಲ್ಲಿ ಆಡಲಾಗುತ್ತದೆ. ಇದು ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಯೂ ಆಗಿದೆ. ಟೆನಿಸ್ ಮತ್ತು ಟೇಬಲ್ ಟೆನಿಸ್ ಆಟದ ಮಿಶ್ರಣದಂತಿರುವ ಈ ಆಟ ಅಮೆರಿಕ ಖಂಡದಲ್ಲಿ ಹೆಚ್ಚಿನ ಜನಪ್ರಿಯತೆ ಹೊಂದಿದೆ. ಟೇಬಲ್ ಟೆನಿಸ್ಗಿಂತ ದೊಡ್ಡದಾದ ಪ್ಯಾಡಲ್ನಲ್ಲಿ ಇದನ್ನು ಆಡಲಾಗುತ್ತದೆ.
ಕಳೆದ ತಿಂಗಳು ಮಾಂಟ್ರಿಯಲ್ನ ನ್ಯಾಷನಲ್ ಬ್ಯಾಂಕ್ ಓಪನ್ನಲ್ಲಿ ಕೊನೆಯದಾಗಿ ವೃತ್ತಿಪರ ಟೆನಿಸ್ ಪಂದ್ಯ ಆಡಿದ್ದ ಬೌಚಾರ್ಡ್, ಹಾಲಿ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೂರ್ನಿಗೆ ಅರ್ಹತೆ ಪಡೆಯಲು ಶಕ್ತರಾಗಿರಲಿಲ್ಲ. ಹೀಗಾಗಿ ಬೌಚಾರ್ಡ್ ಈಗ ಪಿಕಲ್ಬಾಲ್ನತ್ತ ಗಮನ ಹರಿಸಲು ಬಯಸಿದ್ದಾರೆ. ಟೆನಿಸ್ಗೆ ಹೋಲಿಸಿದರೆ ಇದರಲ್ಲಿನ ಬಹುಮಾನ ಮೊತ್ತ ಬಹಳ ಕಡಿಮೆಯಾಗಿದೆ. ಆದರೆ ಅಮೆರಿಕದಲ್ಲಿ ವರ್ಷದಲ್ಲಿ ನಡೆಯುವ 25 ಟೂರ್ನಿಗಳಲ್ಲಿ ಆಡುವ ಅವಕಾಶ ಲಭಿಸಲಿದೆ.