

ನವದೆಹಲಿ: ಐಪಿಎಲ್ ಎಂದರೆ ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ. ಇದರಲ್ಲಿ ಆಡಿದ ಆಟಗಾರರ ಬದುಕೇ ಬದಲಾಗಿ ಬಿಡುತ್ತದೆ ಎಂಬುದು ನಂಬಿಕೆ. ಆದರೆ ಇದು ಎಲ್ಲ ಆಟಗಾರರ ವಿಷಯದಲ್ಲೂ ಆಗಿಲ್ಲ ಎಂಬುದಕ್ಕೆ ಈಗ ಸಾಕ್ಷಿಯೊಂದು ದೊರೆತಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸುವ ಮೂಲಕ ಐಪಿಎಲ್ನಲ್ಲಿ ಆಡಿದ ಜಮ್ಮು-ಕಾಶ್ಮೀರದ 2ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಮಂಜೂರ್ ದಾರ್ ಈಗ ನಿರುದ್ಯೋಗಿಯಾಗಿದ್ದಾರೆ. ಅಲ್ಲದೆ ಲಾಕ್ಡೌನ್ ನಡುವೆ ಜೀವನ ನಿರ್ವಹಣೆಗಾಗಿ ಪರದಾಟ ನಡೆಸುತ್ತಿದ್ದಾರೆ.
2018ರಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಆಲ್ರೌಂಡರ್ ಮಂಜೂರ್ ದಾರ್ 20 ಲಕ್ಷ ರೂ. ಬೆಲೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಸೇರ್ಪಡೆಗೊಂಡಿದ್ದರು. ದೇಶೀಯ ಕ್ರಿಕೆಟ್ನ ಲಿಸ್ಟ್ ಎ ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮತ್ತು ಉಪಯುಕ್ತ ಬೌಲಿಂಗ್ ನಿರ್ವಹಣೆ ನೀಡಿದ ಕಾರಣ ಅವರಿಗೆ ಈ ಅವಕಾಶ ಕೂಡಿಬಂದಿತ್ತು. ಈ ಮೂಲಕ ಪರ್ವೇಜ್ ರಸೂಲ್ ಬಳಿಕ ಐಪಿಎಲ್ ಸೇರಿದ ಜಮ್ಮು-ಕಾಶ್ಮೀರದ 2ನೇ ಆಟಗಾರ ಎನಿಸಿದ್ದರು. ಆಗ ಅವರಿಗೆ 24 ವರ್ಷ. ಹೀಗಾಗಿ ಇನ್ನು ಅವರ ಜೀವನವೇ ಬದಲಾಗಿ ಬಿಡಲಿದೆ ಎಂಬ ನಿರೀಕ್ಷೆ ಹರಡಿತ್ತು. ಆದರೆ ಇದಾಗಿ 3 ವರ್ಷಗಳ ಬಳಿಕ ಅವರ ಜೀವನ ಈಗ ಹಿಂದಿಗಿಂತ ಮತ್ತಷ್ಟು ಹದಗೆಟ್ಟುಹೋಗಿದೆ.
ಐಪಿಎಲ್ ಅವಕಾಶ ಸಿಗುವುದಕ್ಕೆ ಮುನ್ನ ಅವರು ಕಾರ್ಪೆಂಟರ್ ಮತ್ತು ಸೆಕ್ಯುರಿಟಿ ಗಾರ್ಡ್ ಆಗಿಯೂ ಕಾರ್ಯನಿರ್ವಹಿಸುವ ಮೂಲಕ ಕುಟುಂಬವನ್ನು ನೋಡಿಕೊಳ್ಳುತ್ತಿದ್ದರು. ಆದರೆ ಈಗ ಅವರು ಕೆಲಸವಿಲ್ಲದೆ ಪರದಾಡುತ್ತಿದ್ದು, ಕರೊನಾ ಹಾವಳಿ ಶುರುವಾದ ಬಳಿಕ ಸಂಕಷ್ಟಗಳು ಇನ್ನಷ್ಟು ಹೆಚ್ಚಿವೆ. ನಾಲ್ವರು ಸಹೋದರಿಯರು ಮತ್ತು ಮೂವರು ಸಹೋದರರನ್ನು ಹೊಂದಿರುವ ಅವರ ಮೇಲೆ ದೊಡ್ಡ ಜವಾಬ್ದಾರಿಯೇ ಇದೆ. ಅವರ ತಾಯಿಯೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ಅವರಿಗೆ ಕೆಲಸದ ಭರವಸೆ ದೊರೆತಿದ್ದರೂ ಅದು ಇನ್ನೂ ಈಡೇರಿಲ್ಲ.
ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುವ ವೇಳೆ ಪರಿಚಯವಾಗಿದ್ದ ಯುವರಾಜ್ ಸಿಂಗ್, ತಮಗೆ ಸಾಕಷ್ಟು ನೆರವು ನೀಡಿದ್ದಾರೆ ಎನ್ನುವ 26 ವರ್ಷದ ಮಂಜೂರ್ ದಾರ್, ಪ್ರತಿ ಕ್ರಿಕೆಟ್ ಋತು ಆರಂಭಕ್ಕೆ ಮುನ್ನ ತಮಗೆ ಯುವರಾಜ್ ಅವರೇ ಕಿಟ್ ಪೂರೈಸುತ್ತಾರೆ ಎಂದಿದ್ದಾರೆ. ಇರ್ಫಾನ್ ಪಠಾಣ್ ಜಮ್ಮು-ಕಾಶ್ಮೀರ ತಂಡದ ಮೆಂಟರ್ ಆಗಿದ್ದಾಗ ಸಾಕಷ್ಟು ನೆರವು ನೀಡಿದ್ದಾರೆ ಎಂದೂ ನೆನೆಸಿಕೊಂಡಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದರಿಂದ ಬಂದ 20 ಲಕ್ಷ ರೂ.ನಿಂದ ಸಣ್ಣ ಮನೆಯೊಂದನ್ನು ಖರೀದಿಸಿದ್ದೆ ಎಂದಿದ್ದಾರೆ. ತಮ್ಮ ಬ್ಯಾಟಿಂಗ್ ಶೈಲಿಯನ್ನು ವೀರೇಂದ್ರ ಸೆಹ್ವಾಗ್ ಪ್ರಶಂಸಿಸಿದ್ದಾರೆ ಎನ್ನುವ ಮಂಜೂರ್, ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟ್ರಯಲ್ಸ್ ಹೋಗಿದ್ದರೂ, ಅದು ಫಲ ನೀಡಿರಲಿಲ್ಲವಂತೆ. ಮುಂದಿನ ದೇಶೀಯ ಕ್ರಿಕೆಟ್ ಋತುವಿನಲ್ಲಿ ಮತ್ತೆ ವಿಜಯ್ ಹಜಾರೆ ಟ್ರೋಫಿ ಮತ್ತು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಗಳಲ್ಲಿ ಆಡಿ ಗಮನ ಸೆಳೆಯುವ ಹಂಬಲ ಅವರದಾಗಿದೆ.