18ನೇ ಆವೃತ್ತಿ ಆರಂಭಕ್ಕೂ ಮುನ್ನ CSK ವಿರುದ್ಧ ಅಂಪೈರ್​-ಆಕ್ಷನ್‌ ಫಿಕ್ಸಿಂಗ್​​ ಆರೋಪ ಮಾಡಿದ IPL ಮಾಜಿ ಆಯುಕ್ತ

web csk
Published on

ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಿಗಳಲ್ಲಿ ಒಂದಾದ ಐಪಿಎಲ್​ (IPL) ಆರಂಭವಾಗುವುದಲ್ಲೆ ಹಲವು ತಿಂಗಳುಗಳು ಬಾಕಿ ಉಳಿದಿದ್ದು, ಒಂದಿಲ್ಲೊಂದು ಕಾರಣಕ್ಕೆ ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿದೆ. ಈ ಹಿಂದೆ ಮ್ಯಾಚ್​ ಫಿಕ್ಸಿಂಗ್​ ವಿಚಾರವಾಗಿಯೂ ಟೂರ್ನಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿತ್ತು. ಮ್ಯಾಚ್​ ಫಿಕ್ಸಿಂಗ್ ವಿಚಾರವಾಗಿ ಚೆನ್ನೈ ಸೂಪರ್​ಕಿಂಗ್ಸ್​ (CSK) ಹಾಗೂ ರಾಜಸ್ಥಾನ ರಾಯಲ್ಸ್​ (RR)  ತಂಡಗಳು ಎರಡು ವರ್ಷಗಳ ಕಾಲ ಬ್ಯಾನ್​ ಆಗಿದ್ದವು. ಇದೀಗ ಮತ್ತೊಮ್ಮೆ ಮ್ಯಾಚ್​ ಫಿಕ್ಸಿಂಗ್​ (Match Fixing) ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಸ್ವತಃ ಐಪಿಎಲ್​ನ (IPL) ಮಾಜಿ ಆಯುಕ್ತ ಹಾಗೂ ಬಿಸಿಸಿಐನ ಮಾಜಿ ಉಪಾಧ್ಯಕ್ಷ ಲಲಿತ್​ ಮೋದಿ (Lalit Modi) ಮಾತನಾಡಿದ್ದಾರೆ.

ರಾಜ್ ಶಮಾನಿಯ Figuring Out ಪಾಡ್​ಕಾಸ್ಟ್​ನಲ್ಲಿ ಈ ಬಗ್ಗೆ ಮಾತನಾಡಿರುವ ಲಲಿತ್ (Lalit Modi), ಎರಡನೇ ಆವೃತ್ತಿಯ ಹರಾಜು ಪ್ರಕ್ರಿಯೆ ಸಮಯದಲ್ಲಿ ಬಿಡ್​ ರಿಗ್ಗಿಂಗ್​ (Bid Rigging) ಮಾಡಲಾಗಿತ್ತು. ಇಂಗ್ಲೆಂಡ್‌ ತಂಡದ ಆಟಗಾರ ಆ್ಯಂಡ್ರ್ಯೂ ಫ್ಲಿಂಟಾಫ್​ರನ್ನು (Andrew Flintoff) ಆಯ್ಕೆ ಮಾಡಲು ಮತ್ತು ಬೇರೆ ತಂಡಗಳನ್ನು ಹೊರಗಿರುವಂತೆ ಶ್ರೀನಿವಾಸನ್ ಆಗಿನ ಐಪಿಎಲ್ ಕಮಿಷನರ್ ಆಗಿದ್ದ ನನ್ನನ್ನು ಕೇಳಿದ್ದರು. ಇದೇ ಕಾರಣಕ್ಕೆ ಹರಾಜಿನಲ್ಲಿ ಬೇರೆ ಯಾವ ತಂಡಗಳು ಫ್ಲಿಂಟಾಫ್‌ಗೆ ಹೆಚ್ಚಿನ ಬಿಡ್‌ ಮಾಡದಂತೆ ಅವರು ನೀಡಿದ್ದ ಸೂಚನೆಯನ್ನು ತಂಡಗಳಿಗೆ ತಿಳಿಸಿದ್ದೆ. ಹರಾಜಿನಲ್ಲಿ ತಮಗೆ ಬೇಕಾದ ಆಟಗಾರರನ್ನು ಖರೀದಿ ಮಾಡಲು ಶ್ರೀನಿವಾಸನ್‌ ಈ ರೀತಿ ಮಾಡುತ್ತಿದ್ದರು.

ಎಲ್ಲಾ ತಂಡಗಳಿಗೂ ಇದು ಗೊತ್ತಿತ್ತು. ಇಲ್ಲದೇ ಇದ್ದಲ್ಲಿ ಐಪಿಎಲ್‌ (IPL) ಆಡಲು ಅವರು ಬಿಡುತ್ತಿರಲಿಲ್ಲ. ಬಿಸಿಸಿಐ ಸಿಂಹಾಸನದಲ್ಲಿ ಅವರು ರಾಜರಾಗಿದ್ದರು. ಅದೇ ಕಾರಣಕ್ಕೆ ಯಾರೂ ಕೂಡ ಫ್ಲಿಂಟಾಫ್‌ಗೆ ಬಿಡ್‌ ಮಾಡದೇ ಇರುವಂತೆ ಹೇಳಿದ್ದೆವು. ಶ್ರೀನಿವಾಸನ್‌ಗೆ (Srinivasan) ಫ್ಲಿಂಟಾಫ್‌ ಬೇಕಿದ್ದ ಕಾರಣಕ್ಕೆ ಈ ರೀತಿ ಮಾಡಿದ್ದರು. ಹರಾಜಿನ ಸಮಯದಲ್ಲೂ ಎನ್‌. ಶ್ರೀನಿವಾಸನ್‌ ಫಿಕ್ಸಿಂಗ್‌ ಮಾಡುತ್ತಿದ್ದರು. ಇನ್‌ಡೈರೆಕ್ಟ್‌ ಫಿಕ್ಸಿಂಗ್‌ ಅನ್ನು ನಾನು ಗಮನಿಸಿದ್ದ ಕಾರಣಕ್ಕಾಗಿ ಎನ್‌. ಶ್ರೀನಿವಾಸನ್‌ (Srinivasan) ಸಂಪೂರ್ಣವಾಗಿ ನನ್ನ ಮೇಲೆ ವೈರತ್ವ ಸಾಧಿಸಲು ಆರಂಭ ಮಾಡಿದರು ಎಂದು ಹೇಳಿದ್ದಾರೆ.

ಸ್ವತಃ ಶ್ರೀನಿವಾಸನ್‌ (Srinivasan) ಆರಂಭದಲ್ಲಿ ಐಪಿಎಲ್‌ (IPL) ಯಶಸ್ಸಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ನನಗೇ ಅವರು ದೊಡ್ಡ ಎದುರಾಳಿಯಾದರು. ಶ್ರೀನಿವಾಸನ್‌ ಅವರು ಚೆನ್ನೈ ಸೂಪರ್‌ ಕಿಂಗ್ಸ್‌ ಪರವಾಗಿ ತೀರ್ಪುಗಳು ಬರುವಂತೆ ಅಂಪೈರ್‌ಗಳ ಜತೆ ಫಿಕ್ಸಿಂಗ್‌ ಮಾಡುತ್ತಿದ್ದರು. ಐಪಿಎಲ್‌ನಂಥ ಟೂರ್ನಿಯನ್ನು ನಾನು ಏಕಾಂಗಿಯಾಗಿ ಆಯೋಜನೆ ಮಾಡುತ್ತಿದ್ದೆ. ಪ್ರತಿ ಆಟಗಾರ ಮೂರು ತಿಂಗಳು ಐಪಿಎಲ್‌ನಲ್ಲಿ ಇರುತ್ತಿದ್ದರು. ಕೆಲವೊಬ್ಬರು ಟೀಮ್‌ನಲ್ಲಿ ಮೂರು ವರ್ಷ. ಐಪಿಎಲ್‌ ಯಶಸ್ಸಾಗುವ ಬಗ್ಗೆ ಅವರಿಗೆ ಅನುಮಾನಗಳಿದ್ದವು. ಆದರೆ, ಒಮ್ಮೆ ಯಶಸ್ಸು ಕಂಡ ಬಳಿಕ ಬೋರ್ಡ್‌ನಲ್ಲಿ ನನಗೇ ಅವರು ದೊಡ್ಡ ಎದುರಾಳಿಯಾದರು. ನಾನು ಅವರ ವಿರುದ್ಧ ಹೋದೆ. ಅಂಪೈರ್‌ ಫಿಕ್ಸಿಂಗ್‌ ಬಗ್ಗೆ ನನ್ನ ಮೇಲೆ ಆರೋಪ ಮಾಡಿದ್ದರು. ನಾನು ಕೂಡ ಅದೇ ಆರೋಪ ಮಾಡಿದ್ದೆ. ಆತ ಚೆನ್ನೈ ಪಂದ್ಯಕ್ಕೆ ತಮಿಳುನಾಡಿನ ಅಂಪೈರ್‌ಗಳೇ ಇರುವಂತೆ ಮಾಡುತ್ತಿದ್ದರು. ಅಂಪೈರ್‌ಗಳನ್ನು ಬದಲಾಯಿಸುವ ಕೆಲಸ ಮಾಡುತ್ತಿದ್ದರು ಎಂದು ಲಲಿತ್​ ಮೋದಿ (Lalit Modi) ಆರೋಪಿಸಿದ್ದಾರೆ.

2025ರ ಐಪಿಎಲ್‌ಗೆ ಹರಾಜು ಪ್ರಕ್ರಿಯೆ ಮುಗಿದ ಬೆನ್ನಲ್ಲಿಯೇ ಲಲಿತ್‌ ಮೋದಿ ಈ ಸ್ಫೋಟಕ ಆರೋಪ ಮಾಡಿದ್ದು, ಕ್ರೀಡಾ ವಲಯದಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಮತ್ತು ಎನಾಗಲಿದೆ ಎಂದು ಕಾದು ನೋಡಬೇಕಿದೆ. 18ನೇ ಆವೃತ್ತಿಯ ಐಪಿಎಲ್​ ಮಾರ್ಚ್ 14ರಂದು ಪ್ರಾರಂಭವಾಗಿ ಮೇ 25ರವರೆಗೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net