

ಮುಂಬೈ: ಟೀಮ್ ಇಂಡಿಯಾ ತವರಿನಲ್ಲೇ ಮುಖಭಂಗ ಎದುರಿಸಿದ ಬೆನ್ನಲ್ಲೇ ಮಾಜಿ ಕ್ರಿಕೆಟಿಗರು ವಿವಿಧ ಕಿವಿಮಾತುಗಳನ್ನು ಹೇಳಿದ್ದಾರೆ. ದಿಗ್ಗಜರಾದ ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ಹರ್ಭಜನ್ ಸಿಂಗ್, ಭಾರತ ತಂಡ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಟೀಮ್ ಮ್ಯಾನೇಜ್ಮೆಂಟ್ ಟೆಸ್ಟ್ ಕ್ರಿಕೆಟ್ನಲ್ಲಿ ಅನಗತ್ಯವಾಗಿ ಪ್ರಯೋಗಗಳನ್ನು ಮಾಡುವುದನ್ನು ನಿಲ್ಲಿಸಬೇಕು ಮತ್ತು ಇನ್ನಷ್ಟು ಉತ್ತಮ ಪಿಚ್ಗಳಲ್ಲಿ ಆಡಬೇಕು ಎಂದು ಹೇಳಿದ್ದಾರೆ.
"ತವರಿನಲ್ಲೇ 0-3ರಿಂದ ಸೋಲುವುದು ನುಂಗಲು ಕಷ್ಟಕರವಾಗಿರುವ ಮಾತ್ರೆಯಾಗಿದೆ. ಸಿದ್ಧತೆಯ ಕೊರತೆಯೇ, ಕೆಟ್ಟ ಹೊಡೆತಗಳ ಆಯ್ಕೆಯೇ ಅಥವಾ ಮ್ಯಾಚ್ ಪ್ರ್ಯಾಕ್ಟೀಸ್ ಕೊರತೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಸಚಿನ್ ತೆಂಡುಲ್ಕರ್ ಎಕ್ಸ್ನಲ್ಲಿ ಬರೆದಿದ್ದಾರೆ.
ಭಾರತ ತಂಡದ ಆಟಗಾರರು ಸ್ಪಿನ್ ವಿರುದ್ಧ ಆಡುವ ಕೌಶಲವನ್ನು ಸುಧಾರಿಸಿಕೊಳ್ಳಬೇಕಾದ ಅಗತ್ಯವಿದೆ. ಟಿ20ಯಂತೆ ಟೆಸ್ಟ್ ಕ್ರಿಕೆಟ್ನಲ್ಲಿ ಯಾವಾಗಲೂ ಪ್ರಯೋಗಗಳನ್ನು ಮಾಡಲು ಹೋಗಬಾರದು ಎಂದು ಸೆಹ್ವಾಗ್ ಹೇಳಿದ್ದಾರೆ. ಪ್ರತಿ ಪ್ರವಾಸಿ ತಂಡವೂ ಕನಸು ಕಾಣುತ್ತಿದ್ದುದನ್ನು ಕಿವೀಸ್ ತಂಡ ನನಸಾಗಿಸಿಕೊಂಡಿದೆ. ಬೇರೆ ಯಾವ ಪ್ರವಾಸಿ ತಂಡವೂ ಭಾರತದಲ್ಲಿ ಈ ರೀತಿಯ ಪ್ರಾಬಲ್ಯ ಸಾಧಿಸಿರಲಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.
ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಸರಣಿಗಾಗಿ ಭಾರತ ನಿರ್ಮಿಸಿರುವ ಪಿಚ್ನಲ್ಲಿ ಯಾರು, ಯಾರ ವಿಕೆಟ್ ಕೂಡ ಕಬಳಿಸಬಹುದಾಗಿತ್ತು. ಇಂಥ ಪಿಚ್ಗಳಲ್ಲಿ ವಿಕೆಟ್ ಕಬಳಿಸಲು ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್, ಸಕ್ಲೇನ್ ಮುಷ್ತಾಕ್ರಂಥ ಸ್ಪಿನ್ ದಿಗ್ಗಜರು ಬೇಕಿಲ್ಲ. ಸ್ಪಿನ್ ಪಿಚ್ಗಳು ಈಗ ನಮ್ಮದೇ ಶತ್ರುಗಳಾಗಿವೆ. ಇಂಥ ಪಿಚ್ಗಳಲ್ಲಿ ಆಡುವ ಪ್ರತಿ ಬ್ಯಾಟರ್ ಕೂಡ ಸಾಮಾನ್ಯ ಬ್ಯಾಟರ್ನಂತೆ ಕಾಣಿಸುತ್ತಾನೆ ಎಂದು ಹೇಳಿದ್ದಾರೆ.
ಭಾರತದ ಹಿರಿಯ ಬ್ಯಾಟರ್ಗಳು ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನ ರೆಡ್ಬಾಲ್ ಕ್ರಿಕೆಟ್ ಪಂದ್ಯಗಳನ್ನು ಆಡದಿರುವುದೇ ವೈಫಲ್ಯಕ್ಕೆ ಕಾರಣ ಎಂದು ಮಾಜಿ ವೇಗಿ ಇರ್ಫಾನ್ ಪಠಾಣ್ ದೂರಿದ್ದಾರೆ. ಭಾರತ ತವರಿನಲ್ಲಿ ತೋರಿದ ಅತ್ಯಂತ ಮುಜುಗರದ ನಿರ್ವಹಣೆ ಇದಾಗಿದೆ. ದೇಶೀಯ ಕ್ರಿಕೆಟ್ನಲ್ಲೂ ನಮ್ಮ ತಂಡಗಳು ಇತ್ತೀಚೆಗೆ ಟರ್ನಿಂಗ್ ಪಿಚ್ಗಳಲ್ಲಿ ಆಡುತ್ತಿಲ್ಲ. ಹಸಿರು ಅಥವಾ ಫ್ಲ್ಯಾಟ್ ಪಿಚ್ಗಳಲ್ಲೇ ಹೆಚ್ಚಿನ ಪಂದ್ಯ ಆಡಲಾಗುತ್ತಿದೆ. ಇದು ಸುದೀರ್ಘ ಅವಧಿಯಲ್ಲಿ ನಮಗೆ ಹಿನ್ನಡೆಯಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.