ಜಿಂಬಾಬ್ವೆಯಲ್ಲಿ ಹೊಸ ಅಧ್ಯಾಯ ಆರಂಭಿಸಲು ಸಜ್ಜಾದ ಯುವ ಭಾರತ; ಇಂದು ಮೊದಲ ಟಿ20; ಗಿಲ್​ ಬಳಗಕ್ಕೆ ಶುಭಾರಂಭದ ತವಕ

web ind vs zim
Published on

ಹರಾರೆ: ಕೆರಿಬಿಯನ್​ ನೆಲದಲ್ಲಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆದ್ದು ಬೀಗಿರುವ ಭಾರತ, ಇದೀಗ ಯುವ ತಂಡದೊಂದಿಗೆ ಜಿಂಬಾಬ್ವೆ ನೆಲದಲ್ಲಿ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದೆ. ವಿಶ್ವಕಪ್​ ಗೆಲುವಿನ ಬೆನ್ನಲ್ಲೇ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ, ರವೀಂದ್ರ ಜಡೇಜಾರಂಥ ಹಿರಿಯ ಆಟಗಾರರು ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದು, 2026ರಲ್ಲಿ ತವರಿನಲ್ಲೇ ನಡೆಯಲಿರುವ ಟಿ20 ವಿಶ್ವಕಪ್​ಗೆ ಮತ್ತೊಂದು ಬಲಿಷ್ಠ ಕಟ್ಟುವತ್ತ ಭಾರತ ಗಮನಹರಿಸಿದೆ. ಆತಿಥೇಯ ಜಿಂಬಾಬ್ವೆ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಹರಾರೆಯಲ್ಲಿ ಶನಿವಾರ ಚಾಲನೆ ಸಿಗಲಿದ್ದು, ಶುಭಮಾನ್​ ಗಿಲ್​ ಸಾರಥ್ಯದ ಯುವ ತಂಡ ಶುಭಾರಂಭ ಕಾಣುವ ತವಕದಲ್ಲಿದೆ. ಎರಡನೇ ಬಾರಿ ಟಿ20 ವಿಶ್ವಕಪ್​ ಗೆಲುವು ಕಂಡಿರುವ ತಾಜಾ ಸಾಧನೆ ಯುವ ತಂಡಕ್ಕೆ ಸ್ಫೂರ್ತಿ ತುಂಬಲಿದೆ.

ಐಪಿಎಲ್​ನಲ್ಲಿ ಗುಜರಾತ್​ ಟೈಟಾನ್ಸ್​ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ಶುಭಮಾನ್​ ಗಿಲ್​ ಅವರ ಹಂಗಾಮಿ ಸಾರಥ್ಯದಲ್ಲಿ ಭಾರತ ತಂಡ ಕಣಕ್ಕಿಳಿಯಲಿದ್ದು, ಬಹುತೇಕ ಐಪಿಎಲ್​ನಲ್ಲಿ ಮಿಂಚಿದ ಯುವ ಆಟಗಾರರನ್ನು ಒಳಗೊಂಡಿದೆ. ಎನ್​ಸಿಎ ಮುಖ್ಯಸ್ಥ ವಿವಿಎಸ್​ ಲಕ್ಷ$್ಮಣ್​ ಹಂಗಾಮಿ ಕೋಚ್​ ಆಗಿ ಮಾರ್ಗದರ್ಶನ ನೀಡಲಿದ್ದಾರೆ.

ಕಳೆದ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆಯಲು ವಿಲವಾಗಿದ್ದ ಆತಿಥೇಯ ಜಿಂಬಾಬ್ವೆ ತಂಡವೂ ಆಲ್ರೌಂಡರ್​ ಸಿಕಂದರ್​ ರಾಜಾ ನಾಯಕತ್ವದಲ್ಲಿ ಕಣಕ್ಕಿಳಿಯಲಿದ್ದು, ಭಾರತಕ್ಕೆ ನಿಕಟ ಪೈಪೋಟಿ ನೀಡುವ ಮೂಲಕ ಪುಟಿದೇಳುವ ಹಂಬಲದಲ್ಲಿದೆ. ಬೆಲ್ಜಿಯಂ ಮೂಲದ ಬ್ಯಾಟರ್​ ಅಂತುಮ್​ ನಖ್ವಿ ಸಹಿತ ಹಲವು ಹೊಸ ಆಟಗಾರರನ್ನು ಒಳಗೊಂಡಿದೆ.

ಪದಾರ್ಪಣೆ ನಿರೀಕ್ಷೆಯಲ್ಲಿ ಅಭಿಷೇಕ್​, ಪರಾಗ್​

ಐಪಿಎಲ್​ನಲ್ಲಿ ಕ್ರಮವಾಗಿ ಸನ್​ರೈಸರ್ಸ್​ ಮತ್ತು ರಾಜಸ್ಥಾನ ರಾಯಲ್ಸ್​ ಪರ ಮಿಂಚಿ ಭಾರತ ತಂಡಕ್ಕೆ ಎಂಟ್ರಿಕೊಟ್ಟಿರುವ ಯುವ ಆಲ್ರೌಂಡರ್​ಗಳಾದ ಅಭಿಷೇಕ್​ ಶರ್ಮ ಮತ್ತು ರಿಯಾನ್​ ಪರಾಗ್​ ಮೊದಲ ಪಂದ್ಯದಲ್ಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ನಿರೀೆ ಇದೆ. ವಿಕೆಟ್​ ಕೀಪರ್​ ಸ್ಥಾನಕ್ಕೆ ಧ್ರುವ ಜುರೆಲ್​ ಪೈಪೋಟಿಯಲ್ಲಿದ್ದಾರೆ. ಈಗಾಗಲೆ ಭಾರತ ಪರ ಟೆಸ್ಟ್​ ಆಡಿರುವ ಜುರೆಲ್​ ಟಿ20 ಪದಾರ್ಪಣೆ ನಿರೀೆಯಲ್ಲಿದ್ದಾರೆ. ಜಡೇಜಾ, ಅಕ್ಷರ್​ ಗೈರಿನಲ್ಲಿ ವಾಷಿಂಗ್ಟನ್​ ಸುಂದರ್​ ಆಲ್ರೌಂಡರ್​ ಪಾತ್ರ ನಿಭಾಯಿಸಲಿದ್ದರೆ, ಲೆಗ್​ ಸ್ಪಿನ್ನರ್​ ರವಿ ಬಿಷ್ಣೋಯಿ ಪ್ರಮುಖ ಸ್ಪಿನ್ನರ್​ ಎನಿಸಿದ್ದಾರೆ. ವೇಗದ ಬೌಲಿಂಗ್​ ವಿಭಾಗವನ್ನು ಮುಕೇಶ್​ ಕುಮಾರ್​ ಮುನ್ನಡೆಸಲಿದ್ದಾರೆ. ಐಪಿಎಲ್​ನಲ್ಲಿ ಮಂಕಾಗಿದ್ದ ರಿಂಕು ಸಿಂಗ್​ ಮತ್ತೆ ಫಿನಿಷರ್​ ಪಾತ್ರದಲ್ಲಿ ಮಿಂಚಬೇಕಾಗಿದೆ.

ಟೀಮ್​ ನ್ಯೂಸ್​:

ಭಾರತ: ಟಿ20 ವಿಶ್ವಕಪ್​ ತಂಡದ ಸದಸ್ಯರಾದ ಯಶಸ್ವಿ ಜೈಸ್ವಾಲ್​, ಸಂಜು ಸ್ಯಾಮ್ಸನ್​ ಮತ್ತು ಶಿವಂ ದುಬೆ ಮೊದಲ 2 ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಜೈಸ್ವಾಲ್​ ಗೈರಿನಲ್ಲಿ ಅಭಿಷೇಕ್​ ಶರ್ಮ, ನಾಯಕ ಗಿಲ್​ ಜತೆ ಇನಿಂಗ್ಸ್​ ಆರಂಭಿಸಲಿದ್ದಾರೆ. ಬಾಲ್ಯದ ಗೆಳೆಯ ಅಭಿಷೇಕ್​ ಜತೆ ಗಿಲ್​ ಭದ್ರ ಬುನಾದಿ ಹಾಕುವ ನಿರೀಕ್ಷೆ ಇದೆ. ಸ್ಯಾಮ್ಸನ್​ ಗೈರಲ್ಲಿ ಕೀಪಿಂಗ್​ಗೆ ಧ್ರುವ ಜುರೆಲ್​-ಜಿತೇಶ್​ ಶರ್ಮ ನಡುವೆ ಸ್ಪರ್ಧೆ ಇದೆ.

ಸಂಭಾವ್ಯ ತಂಡ: ಶುಭಮಾನ್​ ಗಿಲ್​ (ನಾಯಕ), ಅಭಿಷೇಕ್​ ಶರ್ಮ, ಋತುರಾಜ್​ ಗಾಯಕ್ವಾಡ್​, ರಿಯಾನ್​ ಪರಾಗ್​, ರಿಂಕು ಸಿಂಗ್​, ಧ್ರುವ ಜುರೆಲ್​/ಜಿತೇಶ್​ ಶರ್ಮ (ವಿ.ಕೀ), ವಾಷಿಂಗ್ಟನ್​ ಸುಂದರ್​, ರವಿ ಬಿಷ್ಣೋಯಿ, ಆವೇಶ್​ ಖಾನ್​/ಹರ್ಷಿತ್​ ರಾಣಾ, ಖಲೀಲ್​ ಅಹ್ಮದ್​, ಮುಕೇಶ್​ ಕುಮಾರ್​.

ಜಿಂಬಾಬ್ವೆ: ಅನನುಭವಿ ತಂಡಕ್ಕೆ ಅನುಭವಿ ಸಿಕಂದರ್​ ರಾಜಾ ನಾಯಕತ್ವದ ಬಲವಿದೆ. ಜಿಂಬಾಬ್ವೆ ಕೂಡ ಭವಿಷ್ಯದ ತಂಡ ಕಟ್ಟುವ ಜತೆಗೆ 2026ರ ಟಿ20 ವಿಶ್ವಕಪ್​ಗೆ ಅರ್ಹತೆ ಸಂಪಾದಿಸುವ ಹಂಬಲದಲ್ಲಿದೆ. ಬೆಲ್ಜಿಯಂ ಮೂಲದ ಅಂತುಮ್​ ನಖ್ವಿ ಪದಾರ್ಪಣೆ ನಿರೀಕ್ಷೆಯಲ್ಲಿದ್ದಾರೆ.

ಸಂಭಾವ್ಯ ತಂಡ: ಜೊನಾಥನ್​ ಕ್ಯಾಂಪ್​ಬೆಲ್​, ಮಿಲ್ಟನ್​ ಶುಂಬ, ಡಿಯೋನ್​ ಮೈಯರ್ಸ್​, ಸಿಕಂದರ್​ ರಾಜಾ (ನಾಯಕ), ಇನ್ನೋಸೆಂಟ್​ ಕೈಯಾ, ಕ್ಲೆವ್​ ಮಡಂಡೆ (ವಿ.ಕೀ), ಅಂತುಮ್​ ನಖ್ವಿ, ಬ್ಲೆಸ್ಸಿಂಗ್​ ಮುಜರಬಾನಿ, ರಿಚರ್ಡ್​ ನಾಗವರ, ತೆಂಡೈ ಚಟಾರ, ಬ್ರೆಂಡನ್​ ಮವುಟ.

ಟಿ20 ಸರಣಿ ವೇಳಾಪಟ್ಟಿ

ಪಂದ್ಯ ದಿನಾಂಕ

1 ಜುಲೈ 6

2 ಜುಲೈ 7

3 ಜುಲೈ 10

4 ಜುಲೈ 13

5 ಜುಲೈ 14

ಆರಂಭ: ಸಂಜೆ 4.30

ಎಲ್ಲಿ: ಹರಾರೆ

ನೇರಪ್ರಸಾರ: ಸೋನಿ ಸ್ಪೋರ್ಟ್ಸ್​ ನೆಟ್​ವರ್ಕ್​

ಮುಖಾಮುಖಿ: 8

ಭಾರತ: 6

ಜಿಂಬಾಬ್ವೆ: 2

*14: ಶುಭಮಾನ್​ ಗಿಲ್​ ಟಿ20 ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ 14ನೇ ನಾಯಕ ಎನಿಸಲಿದ್ದಾರೆ.

ಪಿಚ್​ ರಿಪೋರ್ಟ್​

ಹರಾರೆ ಸ್ಪೋರ್ಟ್ಸ್​ ಕ್ಲಬ್​ ಪಿಚ್​ ಸಾಮಾನ್ಯವಾಗಿ ಸ್ಪರ್ಧಾತ್ಮಕವೆನಿಸಿದೆ. ಬ್ಯಾಟರ್​ಗಳ ಜತೆಗೆ ವೇಗಿ&ಸ್ಪಿನ್ನರ್​ಗಳಿಗೂ ಇದು ಸಹಕರಿಸುತ್ತದೆ. ಇಲ್ಲಿ ಇದುವರೆಗೆ ನಡೆದಿರುವ 41 ಟಿ20 ಪಂದ್ಯಗಳಲ್ಲಿ ಸರಾಸರಿ ಮೊದಲ ಇನಿಂಗ್ಸ್​ ಸ್ಕೋರ್​ 156 ರನ್​. 23 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್​ ತಂಡ ಗೆದ್ದಿದ್ದರೆ, 18ರಲ್ಲಿ ಚೇಸಿಂಗ್​ ತಂಡ ಜಯಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net