ಭಾರತ ಪ್ರವಾಸಕ್ಕೆ ಬಾಣಸಿಗನೊಂದಿಗೆ ಬರಲಿದೆ ಇಂಗ್ಲೆಂಡ್​! ಹೀಗಿದೆ ಕಾರಣ...

eng chef web
Published on

ನವದೆಹಲಿ: ಇಂಗ್ಲೆಂಡ್​ ತಂಡ ಮುಂಬರುವ ಭಾರತ ಪ್ರವಾಸಕ್ಕೆ ತನ್ನದೇ ಆದ ಬಾಣಸಿಗನನ್ನು ಕರೆತರಲಿದೆ. 5 ಪಂದ್ಯಗಳ ಟೆಸ್ಟ್​ ಸರಣಿಯ ಸವಾಲಿನ 7 ವಾರಗಳ ಪ್ರವಾಸದ ವೇಳೆ ಆಟಗಾರರು, ಅನಾರೋಗ್ಯಕ್ಕೀಡಾಗುವುದನ್ನು ತಪ್ಪಿಸುವ ಸಲುವಾಗಿ ಇಂಗ್ಲೆಂಡ್​ ತಂಡ ಈ ವಿಶೇಷ ಯೋಜನೆಯನ್ನು ರೂಪಿಸಿದೆ.

ಭಾರತದಲ್ಲಿನ ಹೋಟೆಲ್​ ವ್ಯವಸ್ಥೆಗಳ ನೈರ್ಮಲ್ಯದ ಬಗ್ಗೆ ಯಾವುದೇ ತಕರಾರು ಇಲ್ಲ. ಬದಲಾಗಿ, ತಂಡದ ಎಲ್ಲ ಆಟಗಾರರು ಪೌಷ್ಠಿಕ ಮತ್ತು ತಮ್ಮ ನೆಚ್ಚಿನ ಆಹಾರಗಳನ್ನೇ ಸೇವಿಸುವಂತಾಗಲು ಈ ಕ್ರಮ ಕೈಗೊಂಡಿರುವುದಾಗಿ ಇಂಗ್ಲೆಂಡ್​ ತಂಡ ಸ್ಪಷ್ಟಪಡಿಸಿದೆ. ಜತೆಗೆ ಮಸಾಲೆಯುಕ್ತ ಆಹಾರ ಸೇವಿಸಲು ನಿರಾಕರಿಸುವ ಕೆಲ ಆಟಗಾರರು, ಹಸಿವು ನೀಗಿಸಲು ಪಿಜ್ಜಾ ಮತ್ತು ಎನರ್ಜಿ ಪಾನೀಯಗಳನ್ನು ಸೇವಿಸುವುದನ್ನು ತಪ್ಪಿಸುವ ಸಲುವಾಗಿ, ಅವರಿಗೆ ಪೌಷ್ಠಿಕಾಂಶಗಳಿಂದ ಕೂಡಿದ ಆಹಾರವನ್ನು ಒದಗಿಸಲು ಈ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೆ "ಬಜ್​ಬಾಲ್​' ಎಂಬ ಆಕ್ರಮಣಕಾರಿ ಟೆಸ್ಟ್​ ಕ್ರಿಕೆಟ್​ನಿಂದ ಗಮನಸೆಳೆದಿರುವ ಇಂಗ್ಲೆಂಡ್​ ಟೆಸ್ಟ್​ ತಂಡದ ಕೋಚ್​ ಬ್ರೆಂಡನ್​ ಮೆಕ್ಕಲಂ ಅವರ ಹೊಸ ಕಾರ್ಯತಂತ್ರವೂ ಇದಾಗಿದೆ.

ಇಂಗ್ಲೆಂಡ್​ ತಂಡ ಜನವರಿ 25ರಿಂದ ಹೈದರಾಬಾದ್​ನಲ್ಲಿ ಮೊದಲ ಟೆಸ್ಟ್​ ಆಡಲಿದೆ. ನಂತರದ 4 ಟೆಸ್ಟ್​ಗಳನ್ನು ಕ್ರಮವಾಗಿ ವಿಶಾಖಪಟ್ಟಣ (ಫೆ.2-6), ರಾಜ್​ಕೋಟ್​ (ಫೆ.15-19), ರಾಂಚಿ (ಫೆ. 23-27) ಮತ್ತು ಧರ್ಮಶಾಲಾದಲ್ಲಿ (ಮಾ.7-11) ಆಡಲಿದೆ.

ಪಾಕ್​ಗೂ ಕರೆದೊಯ್ದಿತ್ತು: ಇಂಗ್ಲೆಂಡ್​ ತಂಡ ವಿದೇಶಿ ಪ್ರವಾಸದ ವೇಳೆ ಬಾಣಸಿಗನನ್ನು ಕರೆದೊಯ್ಯುವುದು ಇದೇ ಮೊದಲಲ್ಲ. ಕಳೆದ ವರ್ಷ ಪಾಕಿಸ್ತಾನ ಪ್ರವಾಸದ ವೇಳೆಯೂ ಇದೇ ತನ್ನ ಬಾಣಸಿಗನನ್ನು ಕರೆದೊಯ್ದಿತ್ತು. ಆದರೆ ಇಸ್ಲಾಮಾಬಾದ್​ನ ಮೊದಲ ಟೆಸ್ಟ್​ಗೆ ಮುನ್ನ ತಂಡದ ಕೆಲ ಆಟಗಾರರು ಮಾತ್ರವಲ್ಲದೆ, ಸ್ವತಃ ಬಾಣಸಿಗ ಕೂಡ ಕಲುಷಿತ ಆಹಾರ ಸೇವನೆಯಿಂದ ಅನಾರೋಗ್ಯಕ್ಕೀಡಾಗಿದ್ದರು. ಅಂತಿಮವಾಗಿ ಇಂಗ್ಲೆಂಡ್​ ತಂಡ 3&0ಯಿಂದ ಸರಣಿ ಗೆದ್ದಿದ್ದರಿಂದ ಈ ಯೋಜನೆಯನ್ನು ಯಶಸ್ಸಾಗಿದೆ ಎಂದೇ ಪರಿಗಣಿಸಲಾಗಿದೆ.

ಇಂಗ್ಲೆಂಡ್​ನ ಜನಪ್ರಿಯ ಬಾಣಸಿಗ ಒಮರ್​ ಮೆಜಿಯಾನ್​ ಪಾಕ್​ ಪ್ರವಾಸಕ್ಕೆ ತಂಡದೊಂದಿಗೆ ತೆರಳಿದ್ದರು. ಮ್ಯಾಂಚೆಸ್ಟರ್​ ಯುನೈಟೆಡ್​ ಕ್ಲಬ್​ ಪರವೂ ಕಾರ್ಯನಿರ್ವಹಿಸುವ ಅವರೇ, ಭಾರತಕ್ಕೂ ಆಗಮಿಸಲಿದ್ದಾರೆ ಎನ್ನಲಾಗಿದೆ.

ಫುಟ್​​ಬಾಲ್​, ರಗ್ಬಿಯಲ್ಲಿ ಸಾಮಾನ್ಯವಾಗಿರುವ ಕ್ರಮ

ಪ್ರವಾಸದ ವೇಳೆ ಬಾಣಸಿಗನನ್ನು ತಂಡದ ಜತೆ ಕರೆದೊಯ್ಯುವುದು ಕ್ರಿಕೆಟ್​ನಲ್ಲಿ ಹೊಸದಾಗಿರಬಹುದು. ಆದರೆ ಕ್ಲಬ್​ ಫುಟ್​ಬಾಲ್​ ಮತ್ತು ಅಂತಾರಾಷ್ಟ್ರೀಯ ರಗ್ಬಿಯಲ್ಲಿ ಇದು ಸಾಮಾನ್ಯವಾಗಿರುವ ಕ್ರಮವಾಗಿದೆ. ಕ್ರಿಕೆಟ್​ನಲ್ಲಿ ಇಂಗ್ಲೆಂಡ್​ ಈ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಿರುವ ಮೊದಲ ತಂಡವಾಗಿದೆ.

ಬಿಸಿಸಿಐ ತಕರಾರು ಎತ್ತಲ್ಲ

ವಿಶ್ವಪ್ರಸಿದ್ಧವಾದ ರುಚಿಕರ ಆಹಾರ ಪದ್ಧತಿ, ಅತ್ಯುತ್ತಮ ಬಾಣಸಿಗರು ಮತ್ತು ಶುದ್ಧ&ಸುಸಜ್ಜಿತವಾದ ಹೋಟೆಲ್​ಗಳನ್ನು ಹೊಂದಿರುವ ಭಾರತಕ್ಕೆ ತನ್ನದೇ ಬಾಣಸಿಗನೊಂದಿಗೆ ಇಂಗ್ಲೆಂಡ್​ ತಂಡ ಆಗಮಿಸುತ್ತಿರುವುದು ಆತಿಥೇಯರಿಗೆ ಮಾಡುವ ಅವಮಾನ ಎನಿಸಿದರೂ, ಬಿಸಿಸಿಐ ಈ ಬಗ್ಗೆ ತಕರಾರು ಎತ್ತುವ ಸಾಧ್ಯತೆ ಇಲ್ಲ. ಯಾಕೆಂದರೆ ಬಾಣಸಿಗ ಮತ್ತು ಆಹಾರ ವಸ್ತುಗಳ ಖರ್ಚುವೆಚ್ಚವನ್ನು ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿಯೇ (ಇಸಿಬಿ) ಭರಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net