2ನೇ ಟೆಸ್ಟ್​ ಪಂದ್ಯದಲ್ಲಿ ಸೋಲು ಕಂಡ ವೆಸ್ಟ್​ ಇಂಡೀಸ್​, ಸರಣಿ ಸಮಬಲ ಸಾಧಿಸಿದ ಇಂಗ್ಲೆಂಡ್​

England vs West Indies, test match
Manchester: England's Stuart Broad, center, and teammates celebrate the dismissal of West Indies' John Campbell during the last day of the second cricket Test match between England and West Indies at Old Trafford in Manchester, England, Monday, July 20, 2020. AP/PTI(AP20-07-2020_000117A)
Published on

ಮ್ಯಾಂಚೆಸ್ಟರ್: ಆತಿಥೇಯ ಇಂಗ್ಲೆಂಡ್ ತಂಡ ವಿಸ್ಡನ್ ಟ್ರೋಫಿಯ 2ನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡವನ್ನು 113 ರನ್​ಗಳಿಂದ ಮಣಿಸಿದೆ. 312 ರನ್​ಗಳ ಸವಾಲೊಡ್ಡಿದ ಇಂಗ್ಲೆಂಡ್​ ತಂಡ, ವೆಸ್ಟ್​ ಇಂಡೀಸ್​ ತಂಡವನ್ನು 2ನೇ ಇನಿಂಗ್ಸ್​ನಲ್ಲಿ 70.1 ಓವರ್​ಗಳಲ್ಲಿ 198 ರನ್​ಗಳಿಗೆ ನಿಯಂತ್ರಿಸಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್​ 1-1 ಸಮಬಲ ಸಾಧಿಸಿದೆ. ಸರಣಿಯ ನಿರ್ಣಾಯಕ ಟೆಸ್ಟ್​ ಶುಕ್ರವಾರದಿಂದ ಓಲ್ಡ್​ ಟ್ರಾಫೋರ್ಡ್​ ಮೈದಾನದಲ್ಲೇ ನಡೆಯಲಿದೆ.

ಸೋಮವಾರ 2 ವಿಕೆಟ್‌ಗೆ 37 ರನ್‌ಗಳಿಂದ 2ನೇ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ತಂಡ 3 ವಿಕೆಟ್‌ಗೆ 129 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಬೆನ್ ಸ್ಟೋಕ್ಸ್ ಬಿರುಸಿನ ಅಜೇಯ 78 ರನ್ (57 ಎಸೆತ, 4 ಬೌಂಡರಿ, 3 ಸಿಕ್ಸರ್) ಸಿಡಿಸಿದರು. ಅವರಿಗೆ ನಾಯಕ ಜೋ ರೂಟ್ (22) ಮತ್ತು ಒಲಿವರ್ ಪೋಪ್ (12*) ಸೂಕ್ತ ಬೆಂಬಲ ಒದಗಿಸಿದರು. ಸ್ಟೋಕ್ಸ್ 36 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಆರಂಭಿಕನ ಅತಿವೇಗದ ಅರ್ಧಶತಕವಾಗಿದೆ.

ವೆಸ್ಟ್​ ಇಂಡೀಸ್​ ತಂಡ 2ನೇ ಇನಿಂಗ್ಸ್​ನ ಮೊದಲ ಓವರ್​ನಲ್ಲೇ ಆರಂಭಿಕ ಜಾನ್​ ಕ್ಯಾಂಪ್​ಬೆಲ್ (4)​ ವಿಕೆಟ್​ ಕಳೆದುಕೊಂಡು ಆಘಾತ ಎದುರಿಸಿದೆ. ಸ್ಟುವರ್ಟ್​ ಬ್ರಾಡ್​ ಎಸೆತದಲ್ಲಿ ಕೀಪರ್​ ಬಟ್ಲರ್​ಗೆ ಕ್ಯಾಚ್​ ನೀಡಿ ಅವರು ನಿರ್ಗಮಿಸಿದರು. ಬಳಿಕ ಕ್ರೇಗ್​ ಬ್ರಾಥ್​ವೇಟ್​ (12) ವೋಕ್ಸ್​ಗೆ ವಿಕೆಟ್​ ಒಪ್ಪಿಸಿದರೆ, ಶೈ ಹೋಪ್ (7) ಬ್ರಾಡ್​ ಎಸೆತದಲ್ಲಿ ಬೌಲ್ಡ್​ ಆದರು. ಬಳಿಕ ಶಮರಾಹ್​ ಬ್ರೂಕ್ಸ್ (62) ಮತ್ತು ಕಳೆದ ಪಂದ್ಯದ ಹೀರೋ ಜರ್ಮೈನ್​ ಬ್ಲ್ಯಾಕ್​ವುಡ್ (55) ಕೆಲಕಾಲ ಪ್ರತಿರೋಧ ಒಡ್ಡಿದರು. ಬ್ಲ್ಯಾಕ್​ವುಡ್​ ವಿಕೆಟ್​ ಕಬಳಿಸಿದ ಸ್ಟೋಕ್ಸ್​ ಆಂಗ್ಲರ ಗೆಲುವಿನ ಆಸೆಗೆ ಬಲ ತುಂಬಿದರು. ಬ್ರೂಕ್ಸ್ ಕೂಡ ನಿರ್ಗಮಿಸಿದ ಬಳಿಕ ಕೊನೆಯಲ್ಲಿ ನಾಯಕ ಜೇಸನ್​ ಹೋಲ್ಡರ್​ (35) ತಂಡದ ಸೋಲಿನ ಅಂತರ ತಗ್ಗಿಸಲು ಹೋರಾಡಿದರು. ಕೊನೆಯಲ್ಲಿ ಕೇಮಾರ್​ ರೋಚ್​ (5) ವಿಕೆಟ್​ ಕಬಳಿಸುವ ಮೂಲಕ ಸ್ಪಿನ್ನರ್​ ಡೊಮಿನಿಕ್ ಬೆಸ್​ ಇಂಗ್ಲೆಂಡ್​ ತಂಡದ ಗೆಲುವನ್ನು ಸಾರಿದರು. ಕರೊನಾ ಹಾವಳಿಯ ನಡುವೆ ಕ್ರಿಕೆಟ್​ ಪುನರಾರಂಭಗೊಂಡ ಬಳಿಕ ಮೊದಲ ಟೆಸ್ಟ್​ನಲ್ಲಿ ಗೆಲುವು ದಾಖಲಿಸಿದ್ದ ವಿಂಡೀಸ್​ ತಂಡ 2ನೇ ಟೆಸ್ಟ್​ನಲ್ಲಿ ನೀರಸ ನಿರ್ವಹಣೆ ತೋರಿತು. ಪಂದ್ಯದ 3ನೇ ದಿನದಾಟ ಮಳೆಯಿಂದಾಗಿ ಸಂಪೂರ್ಣವಾಗಿ ರದ್ದುಗೊಂಡ ನಡುವೆಯೂ ಇಂಗ್ಲೆಂಡ್​ ಗೆಲುವು ದಾಖಲಿಸಿದ್ದು ಗಮನಾರ್ಹ.

ಇಂಗ್ಲೆಂಡ್: 9 ವಿಕೆಟ್‌ಗೆ 469 ಡಿಕ್ಲೇರ್ ಮತ್ತು 19 ಓವರ್‌ಗಳಲ್ಲಿ 3 ವಿಕೆಟ್‌ಗೆ 129 ಡಿಕ್ಲೇರ್ (ಸ್ಟೋಕ್ಸ್ 78*, ಕ್ರೌಲಿ 11, ರೂಟ್ 22, ಒಲಿವರ್ ಪೋಪ್ 12*, ರೋಚ್ 37ಕ್ಕೆ 2), ವೆಸ್ಟ್ ಇಂಡೀಸ್: 287 ಮತ್ತು 70.1 ಓವರ್​ಗಳಲ್ಲಿ 198 (ಜಾನ್​ ಕ್ಯಾಂಪ್​ಬೆಲ್​ 4, ಬ್ರಾಥ್​ವೇಟ್​ 12, ಶೈ ಹೋಪ್​ 7, ಬ್ರೂಕ್ಸ್​ 62, ಬ್ಲ್ಯಾಕ್​ವುಡ್​ 55, ಹೋಲ್ಡರ್ 35, ಬ್ರಾಡ್​ 42ಕ್ಕೆ 3, ವೋಕ್ಸ್​ 34ಕ್ಕೆ 2, ಕರ್ರನ್​ 30ಕ್ಕೆ 1, ಬೆಸ್​ 59ಕ್ಕೆ 2, ಸ್ಟೋಕ್ಸ್​ 30ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net