

ಮೆಲ್ಬೋರ್ನ್: ಟಿ-20 ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಳ್ಳಲು ಪಾಕಿಸ್ತಾನ ಮತ್ತು ಇಂಗ್ಲೆಂಡ್ ಉಭಯ ತಂಡಗಳ ನಡುವೆ ಕದನ ಏರ್ಪಟ್ಟಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್ಗಳಲ್ಲಿ 137 ರನ್ ಗಳಿಸಲು ಸಾಧ್ಯವಾಗಿದೆ. ಈ ಮೂಲಕ ಇಂಗ್ಲೆಂಡ್ಗೆ 138 ರನ್ಗಳ ಸಾಧಾರಣ ಮೊತ್ತದ ಗುರಿ ನೀಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಆರಂಭದಲ್ಲಿ ಉತ್ತಮ ಜತೆಯಾಟ ಕಾಣುವ ನಿರೀಕ್ಷೆ ಇತ್ತು. ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಝ್ವಾನ್ ಉತ್ತಮ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದರು. ಆದರೆ ಇಂಗ್ಲೆಂಡ್ ಬೌಲರ್ಗಳು ಮಾತ್ರ ಇದಕ್ಕೆ ಅವಕಾಶ ನೀಡಲಿಲ್ಲ.ಸ್ಯಾಮ್ ಕರ್ರನ್ ಮೊಹಮ್ಮದ್ ರಿಝ್ವಾನ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. 15 ರನ್ ಗಳಿಸಿದ್ದ ವೇಳೆ ರಿಝ್ವಾನ್ ಔಟ್ ಆದರು.
ಎರಡನೇ ವಿಕೆಟ್ಗೆ ಬಂದ ಹ್ಯಾರಿಸ್ ಕೇವಲ 8ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಹ್ಯಾರಿಸ್ ಬೆನ್ನಿಗೇ ನಾಯಕ
ಬಾಬರ್ 32 ರನ್ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ನಂತರ ಶಾನ್ ಮಸೂದ್ ಬಿರುಸಿನ ಆಟಕ್ಕೆ ಮುಂದಾದರು. 38 ರನ್ ಗಳಿಸಿ ತಂಡದ ಮೊತ್ತ ಹಿಗ್ಗಿಸುವಲ್ಲಿ ನೆರವಾದರು. ಮಸೂದ್ ಔಟ್ ಆಗುತ್ತಿದ್ದಂತೆ, ಪಾಕಿಸ್ತಾನದ ಉಳಿದ ಎಲ್ಲಾ ಬ್ಯಾಟ್ಸ್ಮನ್ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ನತ್ತ ಸಾಗಿದರು.
ಸಂಘಟಿತ ಬೌಲಿಂಗ್ ಪ್ರದರ್ಶನ ಮಾಡಿದ ಇಂಗ್ಲೆಂಡ್ ಬೌಲರ್ಗಳು ಪಾಕಿಸ್ತಾನದ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಯಾವೊಬ್ಬ ಬೌಲರ್ ಕೂಡ ಹೆಚ್ಚಿನ ರನ್ ಬಿಟ್ಟುಕೊಡಲು ಅವಕಾಶ ನೀಡಲ್ಲ. ಇಂಗ್ಲೆಂಡ್ ತಂಡದ ಪರ ಸ್ಯಾಮ್ ಕರ್ರನ್ 3 ವಿಕೆಟ್ ಪಡೆದು ಮಿಂಚಿದರು. ಆದಿಲ್ ರಶೀದ್ ಮತ್ತು ಕ್ರಿಸ್ ಜೋರ್ಡಾನ್ ತಲಾ 2 ವಿಕೆಟ್ ಪಡೆದುಕೊಂಡರು.(ಏಜೆನ್ಸೀಸ್)