ಎರಡು ಟೆಸ್ಟ್ ಪಂದ್ಯಗಳ ಸರಣಿ ಆಡಲು ಶ್ರೀಲಂಕಾಗೆ ಬಂದಿಳಿದ ಇಂಗ್ಲೆಂಡ್ ತಂಡ

ENGLAND TEAM IN SL FOR WEB
Published on

ಕೊಲಂಬೊ: ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆಡಲು ಇಂಗ್ಲೆಂಡ್ ತಂಡ ಭಾನುವಾರ ಶ್ರೀಲಂಕಾಗೆ ಬಂದಿಳಿಯಿತು. ಕರೊನಾ ವೈರಸ್ ಭೀತಿಯಿಂದಾಗಿ ಕಳೆದ ಮಾರ್ಚ್ ತಿಂಗಳಲ್ಲಿ ಇಂಗ್ಲೆಂಡ್ ತಂಡ ತವರಿಗೆ ವಾಪಸಾಗಿತ್ತು. ಬ್ರಿಟಿಷ್ ಏರ್‌ವೇಸ್ ವಿಮಾನದಲ್ಲಿ ಇಂಗ್ಲೆಂಡ್ ತಂಡ ರಾಜಪಕ್ಸೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಲಂಕಾದ ಬಂದಿಳಿದ ಕೂಡಲೇ ಆಟಗಾರರು ಕೋವಿಡ್-19 ಪರೀಕ್ಷೆಗೆ ಒಳಗಾದರು.

ಆಟಗಾರರು ಹೋಟೆಲ್‌ನಲ್ಲೇ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ. ಸ್ಥಳೀಯ ಸರ್ಕಾರದ ನಿಯಮಗಳ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಈ ವೇಳೆ ಇಂಗ್ಲೆಂಡ್ ಆಟಗಾರರನ್ನು ಎರಡು ತಂಡಗಳನ್ನಾಗಿ ವಿಂಗಡಿಸಿ, ಪ್ರತ್ಯೇಕವಾಗಿ ಅಭ್ಯಾಸಕ್ಕೆ ಅನುವು ಮಾಡಿಕೊಡಲಾಗುವುದು. ಜತೆಗೆ ಸ್ಥಳೀಯರಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ. ಶ್ರೀಲಂಕಾದಲ್ಲಿ ಎಲ್ಲ ಅಂತಾರಾಷ್ಟ್ರೀಯ ವಿಮಾನ ಸೇವೆಗಳು ಸ್ಥಗಿತಗೊಂಡಿದ್ದರೂ ಬ್ರಿಟಿಷ್ ಏರ್ ಕ್ರಾಫ್ಟ್ ಗೆ ಮಾತ್ರ ಅನುಮತಿ ನೀಡಲಾಗಿತ್ತು.

ಸ್ಥಳೀಯ ನಿಯಮದಂತೆ ಆಟಗಾರರು, ಸಿಬ್ಬಂದಿ ವರ್ಗದವರನ್ನು ಈಗಾಗಲೇ ಒಂದು ಸುತ್ತು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ. ಕಳೆದ ಮಾರ್ಚ್‌ನಲ್ಲಿ ಕರೊನಾ ವೈರಸ್ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ಅಭ್ಯಾಸ ಪಂದ್ಯದ ಎರಡನೇ ದಿನದಾಟವನ್ನು ಮೊಟಕುಗೊಳಿಸಿ ಇಂಗ್ಲೆಂಡ್ ತಂಡ ತವರಿಗೆ ವಾಪಸಾಗಿತ್ತು. ಈ ವೇಳೆ ಶ್ರೀಲಂಕಾದಲ್ಲಿ ಕೇವಲ 6 ಕರೊನಾ ವೈರಸ್ ಪ್ರಕರಣಗಳು ಸಿಕ್ಕಿದ್ದವು. ಲಂಕಾದಲ್ಲಿ ಇದುವರೆಗೂ 44 ಸಾವಿರ ಕರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, 211 ಮಂದಿ ಸಾವನ್ನಪ್ಪಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net