14ನೇ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಕಣಕ್ಕಿಳಿಯಲ್ಲ ಈ ಸ್ಟಾರ್ ವೇಗಿ..!

virat kohli and rcb for web
Published on

ಜೋಹಾನ್ಸ್‌ಬರ್ಗ್: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ 14ನೇ ಐಪಿಎಲ್ ಆರಂಭಕ್ಕೂ ಮುನ್ನವೇ ಸ್ಟಾರ್ ವೇಗಿಯೊಬ್ಬರನ್ನು ಕಳೆದುಕೊಂಡಿದೆ. ವಿಶ್ವದ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರೆನಿಸಿರುವ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ 14ನೇ ಐಪಿಎಲ್‌ಗೆ 3 ತಿಂಗಳು ಬಾಕಿ ಇರುವಾಗಲೇ ದೂರ ಸರಿಯುವುದಾಗಿ ಘೋಷಿಸಿದ್ದಾರೆ. ಆದರೆ, ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ನಿವೃತ್ತಿ ನಿರ್ಧಾರವನ್ನು ತಳ್ಳಿಹಾಕಿದ್ದಾರೆ. 2020ರ ಐಪಿಎಲ್‌ನಲ್ಲಿ ಸ್ಟೇನ್ ಆರ್‌ಸಿಬಿ ಪರ ಕೇವಲ 3 ಪಂದ್ಯಗಳನ್ನಷ್ಟೆ ಆಡಿದ್ದರು.

‘ಈ ವರ್ಷದ ಐಪಿಎಲ್‌ಗೆ ನಾನು ಲಭ್ಯವಾಗುತ್ತಿಲ್ಲ. ಕ್ರಿಕೆಟ್‌ನಿಂದ ಅಲ್ಪ ವಿರಾಮ ತೆಗೆದುಕೊಳ್ಳುತ್ತೇನೆ’ ಎಂದು 37 ವರ್ಷದ ಸ್ಟೇನ್ ಟ್ವೀಟ್ ಮಾಡಿದ್ದಾರೆ. ವಿಶ್ವ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರೆನಿಸಿರುವ ಸ್ಟೇನ್, ಕ್ರಿಕೆಟ್‌ನಿಂದ ದೂರ ಉಳಿಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದು, ಐಪಿಎಲ್‌ನಿಂದ ವಿರಾಮ ಪಡೆಯುವುದಾಗಿ ಹೇಳಿದ್ದಾರೆ. ಸ್ಟೇನ್ ಕಳೆದ 16 ವರ್ಷಗಳಿಂದ ದಕ್ಷಿಣ ಆಫ್ರಿಕಾ ತಂಡ ಪ್ರತಿನಿಧಿಸುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ಪರ ಅತಿ ಹೆಚ್ಚು ವಿಕೆಟ್ ಕಬಳಿಸಿರುವ ಬೌಲರ್ ಎನಿಸಿರುವ ಸ್ಟೇನ್ 2019ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. 93 ಟೆಸ್ಟ್ ಪಂದ್ಯಗಳಿಂದ 439 ವಿಕೆಟ್ ಕಬಳಿಸಿದ್ದು 125 ಏಕದಿನ ಪಂದ್ಯಗಳಿಂದ 195 ವಿಕೆಟ್ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net