

ಲಂಡನ್: 14ನೇ ಆವೃತ್ತಿಯ ಐಪಿಎಲ್‌ನ ಎರಡನೇ ಭಾಗಕ್ಕೆ ದಿನಗಣನೆ ಆರಂಭಗೊಂಡಿದೆ. ಲೀಗ್‌ನ 31 ಪಂದ್ಯಗಳಲ್ಲಿ ಆಡಲು ವಿದೇಶಿ ಆಟಗಾರರು ಅದರಲ್ಲೂ ಇಂಗ್ಲೆಂಡ್ ಆಟಗಾರರು ಆಗಮಿಸುವುದು ಅನುಮಾನ ಎನ್ನಲಾಗಿತ್ತು. ಸ್ವತಃ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯೇ ಐಪಿಎಲ್ ಭಾಗ-2ರಲ್ಲಿ ಆಟಗಾರರು ಆಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಈ ವೇಳೆ ದ್ವಿಪಕ್ಷೀಯ ಸರಣಿಗಳು ಇದ್ದ ಹಿನ್ನೆಲೆಯಲ್ಲಿ ಐಪಿಎಲ್‌ನಿಂದ ಹೊರಗುಳಿಯಲು ತೀರ್ಮಾನಿಸಲಾಗಿತ್ತು. ಇದೀಗ ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿರುವ ಬಾಂಗ್ಲಾದೇಶ ವಿರುದ್ಧದ ಸರಣಿ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಆಟಗಾರರು ಯುಎಇಯತ್ತ ಪ್ರಯಾಣ ಬೆಳೆಸಲಿದ್ದು, ಐಪಿಎಲ್ ಭಾಗ-2ರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ನಡುವಿನ ಸರಣಿ ಸೆಪ್ಟೆಂಬರ್ ಬದಲಿಗೆ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. ಇದರಿಂದಾಗಿ ಇಂಗ್ಲೆಂಡ್ ಆಟಗಾರರಾದ ಜೋಸ್ ಬಟ್ಲರ್, ಜೋಫ್ರಾ ಆರ್ಚರ್, ಲಿಯಾಮ್ ಲಿವಿಂಗ್‌ಸ್ಟೋನ್, ಏವೊಯಿನ್ ಮಾರ್ಗನ್, ಸ್ಯಾಮ್ ಕರ‌್ರನ್, ಮೊಯಿನ್ ಅಲಿ, ಜಾನಿ ಬೇರ್‌ಸ್ಟೋ, ಟಾಮ್ ಕರ‌್ರನ್, ಲೀಗ್‌ನಲ್ಲಿ ಆಡುತ್ತಿದ್ದಾರೆ. ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ಲೀಗ್ ಪುನರಾರಂಭಗೊಳ್ಳಲಿದೆ. ಬಾಂಗ್ಲಾದೇಶ ವಿರುದ್ಧದ ಸರಣಿ ಮುಂದೂಡಿಕೆಯಾಗಿದ್ದು, ಇಂಗ್ಲೆಂಡ್ ಆಟಗಾರರು ಐಪಿಎಲ್‌ಗೆ ಲಭ್ಯರಿರುವರು, ಈ ಕುರಿತು ಇಸಿಬಿ ಜತೆ ಮಾತನಾಡುತ್ತಿರುವುದಾಗಿ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತ ವಿರುದ್ಧದ ಟೆಸ್ಟ್ ಸರಣಿ ಸೆ.14ರಂದು ಮುಕ್ತಾಯಗೊಂಡ ಬೆನ್ನಲ್ಲೇ ಇಂಗ್ಲೆಂಡ್ ತಂಡ ಪ್ರವಾಸಿ ಬಾಂಗ್ಲಾದೇಶ ಎದುರು ತಲಾ 3 ಏಕದಿನ ಹಾಗೂ ಟಿ20 ಪಂದ್ಯಗಳ ಸರಣಿ ಆಡಲಿದೆ ಎಂದು ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ. ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಮುಕ್ತಾಯಗೊಂಡ ಬೆನ್ನಲ್ಲೇ ಭಾರತದ ಐಪಿಎಲ್ ಆಟಗಾರರು ಯುಇಎಯತ್ತ ಪ್ರಯಾಣ ಬೆಳೆಸಲಿದ್ದಾರೆ.