

ಸೌಥಾಂಪ್ಟನ್: ಆತಿಥೇಯ ಇಂಗ್ಲೆಂಡ್ ಮತ್ತು ಪ್ರವಾಸಿ ಪಾಕಿಸ್ತಾನ ನಡುವಿನ 2ನೇ ಟೆಸ್ಟ್ ಪಂದ್ಯ ಮಳೆ ಅಡಚಣೆಯಿಂದಾಗಿ ನಿರೀಕ್ಷೆಯಂತೆಯೇ ನೀರಸ ಡ್ರಾನಲ್ಲಿ ಅಂತ್ಯಗೊಂಡಿದೆ. ಇದರಿಂದ ಇಂಗ್ಲೆಂಡ್ ತಂಡ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.
ರೋಸ್‌ಬೌಲ್ ಕ್ರೀಡಾಂಗಣದಲ್ಲಿ ಸೋಮವಾರ ಪಂದ್ಯದ ಅಂತಿಮ ದಿನದಾಟವೂ ಮಳೆಯಿಂದಾಗಿ ಮೊದಲೆರಡು ಅವಧಿಯಲ್ಲಿ ಆಟ ನಡೆಯಲಿಲ್ಲ. ಅಂತಿಮ ಅವಧಿಯಲ್ಲಿ 1 ವಿಕೆಟ್‌ಗೆ 7 ರನ್‌ನಿಂದ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್, 4 ವಿಕೆಟ್‌ಗೆ 110 ರನ್ ಗಳಿಸಿ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ ಡ್ರಾ ಸಾಧಿಸಿತು. ನಾಯಕ ಜೋ ರೂಟ್ (9) ಮತ್ತು ಜೋಸ್ ಬಟ್ಲರ್ (0) ಕ್ರೀಸ್‌ನಲ್ಲಿದ್ದರು.
ಚಹಾ ವಿರಾಮದ ಬಳಿಕ ಆರಂಭಗೊಂಡ ಆಟದಲ್ಲಿ ಆರಂಭಿಕ ಡೊಮಿನಿಕ್ ಸಿಬ್ಲೆ (32) ಮತ್ತು ಜಾಕ್ ಕ್ರೌಲಿ (53) 2ನೇ ವಿಕೆಟ್‌ಗೆ 91 ರನ್ ಸೇರಿಸಿ ಪಾಕ್ ಬೌಲರ್‌ಗಳನ್ನು ಕಾಡಿದರು. ಕ್ರೌಲಿ ಅರ್ಧಶತಕ ಪೂರೈಸಿದ ಬಳಿಕ ವೇಗಿ ಮೊಹಮ್ಮದ್ ಅಬ್ಬಾಸ್ ಎಸೆತದಲ್ಲಿ ಔಟಾದರು. ಬೆನ್ನಲ್ಲೇ ಸಿಬ್ಲೆ ಕೂಡ ನಿರ್ಗಮಿಸಿದರು.
ಸರಣಿಯ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಆಗಸ್ಟ್ 21ರಿಂದ 25ರವರೆಗೆ ಸೌಥಾಂಪ್ಟನ್‌ನಲ್ಲೇ ನಡೆಯಲಿದೆ.
ಪಾಕಿಸ್ತಾನ: 236, ಇಂಗ್ಲೆಂಡ್: 17 ಓವರ್‌ಗಳಲ್ಲಿ 1 ವಿಕೆಟ್‌ಗೆ 38 (ಸಿಬ್ಲೆ 32, ಕ್ರೌಲಿ 53, ರೂಟ್ 9*, ಪೋಪ್ 9, ಬಟ್ಲರ್ 0*, ಅಬ್ಬಾಸ್ 28ಕ್ಕೆ 2, ಶಹೀನ್ ಷಾ ಅಫ್ರಿದಿ 25ಕ್ಕೆ 1, ಯಾಸಿರ್ ಷಾ 30ಕ್ಕೆ 1).