

ಚೆನ್ನೈ: 18ನೇ ಆವೃತ್ತಿಯ ಐಪಿಎಲ್ (IPL) ಶುರುವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಅದಕ್ಕೆ ಸಂಬಂಧಿಸಿದ ತಯಾರಿಗಳು ಭರ್ಜರಿಯಾಗಿ ನಡೆಯುತ್ತಿವೆ. ಇಗಾಗಲೇ ರಿಟೇನ್ಗೆ ಸಂಬಂಧಿಸಿದಂತೆ ಬಿಸಿಸಿಐ ಈಗಾಗಲೇ ನಿಯಮಗಳನ್ನು ಜಾರಿ ಮಾಡಿದ್ದು, ಈ ವರ್ಷಾಂತ್ಯದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಆದರೆ ರಿಟೇನ್ಗೆ ಸಂಬಂಧಿಸಿದ ವಿಚಾರ ಒಂದು ಕ್ರೀಡಾವಲಯದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಈ ವಿಚಾರಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ.
ಅದೇನೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಐದು ವರ್ಷಗಳಾಗಿರುವ ಆಟಗಾರನನ್ನು ಅನ್ಕ್ಯಾಪ್ಡ್ ಪ್ಲೇಯರ್ ನಿಯಮದಡಿ ರಿಟೇನ್ ಮಾಡಿಕೊಳ್ಳಲು ಈ ಬಾರಿ ಐಪಿಎಲ್ ಆಡಳಿತ ಮಂಡಳಿ ಫ್ರಾಂಚೈಸಿಗಳಿಗೆ ಅವಕಾಶ ನೀಡಿದೆ. ಈ ವಿಚಾರವಾಗಿ ಹೆಚ್ಚು ಸದ್ದು ಮಾಡುತ್ತಿರುವವರು ಎಂದರೆ ಅದು ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ (MS Dhoni) ಎಂದರೆ ತಪ್ಪಾಗಲಾರದು. ಅನ್ಕ್ಯಾಪ್ಡ್ ಪ್ಲೇಯರ್ ನಿಯಮದಡಿ ಸಿಎಸ್ಕೆ ಧೋನಿ ಅವರನ್ನು ರಿಟೇನ್ (retain) ಮಾಡಿಕೊಳ್ಳಲಿದೆ ಎಂದು ಹೇಳಲಾಗಿದೆಯಾದರೂ ಈ ಬಗ್ಗೆ ತಂಡದ CEO ಕಾಶಿ ವಿಶ್ವನಾಥನ್ ನೀಡಿರುವ ಹೇಳಿಕೆ ಕ್ರೀಡಾ ವಲಯದಲ್ಲಿ ಹೊಸ ಚರ್ಚೆಯನ್ನೇ ಹುಟ್ಟು ಹಾಕಿದೆ.
ಧೋನಿ ಅವರನ್ನು ರಿಟೇನ್ ಮಾಡುವ ಬಗ್ಗೆ ಈಗಲೇ ಏನು ಹೇಳಲು ಸಾಧ್ಯವಿಲ್ಲ. ಈ ವಿಚಾರವಾಗಿ ನಾವು ಅವರೊಂದಿಗೆ ಇನ್ನೂ ಚರ್ಚಿಸಿಲ್ಲ. ಪ್ರಸ್ತುತ ಧೋನಿ ಅಮೆರಿಕಾದಲ್ಲಿದ್ದು, ನಾವು ಈ ವಾರ ಪ್ರಯಾಣಿಸುತ್ತಿದ್ದೇವೆ. ಆದ್ದರಿಂದ ಮುಂಬರುವ ವಾರದಲ್ಲಿ ಕೆಲವು ಚರ್ಚೆಗಳ ಸಾಧ್ಯತೆಯಿದೆ. ಹಾಗಾಗಿ ಸ್ವಲ್ಪ ಸ್ಪಷ್ಟತೆ ಸಿಗಬಹುದು. ಅವರು ಆಡುವ ಬಗ್ಗೆ ನಮಗೆ ಭರವಸೆ ಇದೆ ಆದರೆ ಇದು ಧೋನಿ ಅವರ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದು ಸಿಎಸ್ಕೆ CEO ಕಾಶಿ ವಿಶ್ವನಾಥನ್ ಹೇಳಿದ್ದಾರೆ.
ಐಪಿಎಲ್ 2008ರ ನಿಯಮದ ಪ್ರಕಾರ ಯಾವುದಾದರೂ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾದ 5 ವರ್ಷಗಳ ಬಳಿಕ ಆತನನ್ನು ಅನ್ಕ್ಯಾಪ್ಡ್ ಪ್ಲೇಯರ್ಸ್ ಪಟ್ಟಿಗೆ ಪರಿಗಣಿಸಬಹುದಾಗಿತ್ತು. ಆದರೆ ಈ ನಿಯಮವು ಬಳಕೆಗೆ ಬಾರದ ಕಾರಣ 2021 ರಲ್ಲಿ ರದ್ದುಗೊಳಿಸಲಾಗಿತ್ತು. ಆದರೆ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಈ ನಿಯಮವನ್ನು ಮತ್ತೆ ಜಾರಿಗೊಳಿಸುವಂತೆ ಸಿಎಸ್ಕೆ ಫ್ರಾಂಚೈಸಿ ಧೋನಿ ಸಲುವಾಗಿ ಬಿಸಿಸಿಐಗೆ ಮನವಿ ಸಲ್ಲಿಸಿತ್ತು. ಏಕೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಐದು ವರ್ಷಗಳಾಗುತ್ತ ಬಂದಿದ್ದು, ಹೀಗಾಗಿ ಅವರನ್ನು ಅನ್ಕ್ಯಾಪ್ಡ್ ಪ್ಲೇಯರ್ಸ್ ಎಂದು ಪರಿಗಣಿಸಲಾಗುತ್ತದೆ.