

ನವದೆಹಲಿ: ಪಾಕಿಸ್ತಾನ (Pakistan) ಕ್ರಿಕೆಟ್ ತಂಡದ ನಾಯಕತ್ವದಿಂದ ಬಾಬರ್ ಅಜಂ (Babar Azam) ಕೆಳಗಿಳಿದಿದ್ದಾರೆ. ಈ ಹಿಂದೆ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದ ಬಾಬರ್ ಇದೀಗ ಏಕದಿನ ಹಾಗೂ ಟಿ20 ಮಾದರಿಗೆ ರಾಜೀನಾಮೆ ನೀಡಿದ್ದಾರೆ.
2023ರಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ತಂಡದ ನೀರಸ ಪ್ರದರ್ಶನದ ನಂತರ ಬಾಬರ್ ಅಜಂರನ್ನು ವೈಟ್ ಬಾಲ್ ನಾಯಕತ್ವದಿಂದ ಪಿಸಿಬಿ ತೆಗೆದು ಹಾಕಿತ್ತು. ಇದಾದ ಬಳಿಕ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಈ ವರ್ಷ ಮಾರ್ಚ್ ತಿಂಗಳಲ್ಲಿ ಬಾಬರ್ ಅಜಂರನ್ನು ವೈಟ್ಬಾಲ್ ಮಾದರಿಗೆ ನಾಯಕನನ್ನಾಗಿ ನೇಮಿಸಲಾಗಿತ್ತು.
ಟಿ20 ವಿಶ್ವಕಪ್ನಲ್ಲಿ ಬಾಬರ್ ಆಝಂ ಮುಂದಾಳತ್ವದಲ್ಲಿ ಕಣಕ್ಕಿಳಿದ ಪಾಕ್ ಪಡೆಯು ಯುಎಸ್ಎ ವಿರುದ್ದ ಪರಾಜಯಗೊಳ್ಳುವ ಮೂಲಕ ಭಾರೀ ಮುಖಭಂಗಕ್ಕೊಳಗಾಗಿತ್ತು. ಅಲ್ಲದೇ ಟೂರ್ನಿಯಲ್ಲಿ ಹೀನಾಯ ಪ್ರದರ್ಶನದಿಂದಾಗಿ ಮೊದಲ ಸುತ್ತಿನಲ್ಲೇ ತಂಡ ಹೊರಬಿದ್ದಿತ್ತು. ಭವಿಷ್ಯದ ದೃಷ್ಟಿಯಿಂದ ಬಾಬರ್ರನ್ನು ತೆಗೆದುಹಾಕಲಾಗುತ್ತದೆ ಎಂದು ಹೇಳಲಾಗಿತ್ತಾದರೂ ಇದೀಗ ಅವರೇ ನಾಯಕತ್ವದಿಂದ ಕೆಳಗಿಳಿದಿದ್ದಾರೆ.
ಮುಂದಿನ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಮುಂಬರುವ ಸರಣಿಗಳಲ್ಲಿ ತಂಡವನ್ನು ಮುನ್ನಡೆಸಲು ಸಮರ್ಥ ನಾಯಕನ ಅವಶ್ಯಕತೆಯಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿಕೆಟ್ ಕೀಪರ್, ಬ್ಯಾಟರ್ ಮೊಹಮ್ಮದ್ ರಿಜ್ವಾನ್ಗೆ ನಾಯಕತ್ವ ನೀಡುವ ಸಾಧ್ಯತೆಯಿದೆ.