

ನವದೆಹಲಿ: ಬಿಸಿಸಿಐಗೆ ಲೋಕಸಭಾ ಚುನಾವಣೆಯ ನಡುವೆ ಲಖನೌದಲ್ಲಿ ಲಖನೌ ಸೂಪರ್ಜೈಂಟ್ಸ್ ಮತ್ತು ಕೋಲ್ಕತದಲ್ಲಿ ಕೋಲ್ಕತ ನೈಟ್ರೈಡರ್ಸ್ ತಂಡಗಳ ಪಂದ್ಯಗಳನ್ನು ಆಯೋಜಿಸುವುದು ಕಠಿಣ ಸವಾಲೆನಿಸಿದೆ. ಯಾಕೆಂದರೆ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಎಲ್ಲ 7 ಹಂತಗಳಲ್ಲೂ (ಏಪಿಲ್ 19, 26, ಮೇ 7, 13, 20, 25, ಜೂನ್ 1) ಮತದಾನ ನಡೆಯಲಿದೆ. ಈ ದಿನಾಂಕಗಳ ಜತೆ ಸಂರ್ಷ ಏರ್ಪಡದಂತೆ ಬಿಸಿಸಿಐ, ಲಖನೌ&ಕೋಲ್ಕತದಲ್ಲಿ ಪಂದ್ಯಗಳನ್ನು ನಿಗದಿಪಡಿಸಬೇಕಿದೆ.
ಇನ್ನು ಮುಂಬೈ ಇಂಡಿಯನ್ಸ್ ಪಂದ್ಯ ನಡೆಯಲಿರುವ ಮಹಾರಾಷ್ಟ್ರದಲ್ಲಿ (ಮುಂಬೈ) 5 ಹಂತಗಳಲ್ಲಿ (ಏಪ್ರಿಲ್ 19, 26, ಮೇ 7, 13, 20) ಮತದಾನ ನಡೆಯಲಿದೆ. ಆರ್ಸಿಬಿ ಪಂದ್ಯ ನಡೆಯುವ ಕರ್ನಾಟಕದಲ್ಲಿ (ಬೆಂಗಳೂರು) ಮತ್ತು ರಾಜಸ್ಥಾನ ರಾಯಲ್ಸ್ನ ಪಂದ್ಯ ನಡೆಯಲಿರುವ ರಾಜಸ್ಥಾನದಲ್ಲಿ (ಜೈಪುರ) 2 ಹಂತಗಳಲ್ಲಿ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ ಏಪ್ರಿಲ್ 26, ಮೇ 7ರಂದು ಮತದಾನ ನಡೆದರೆ, ರಾಜಸ್ಥಾನದಲ್ಲಿ ಏಪ್ರಿಲ್ 19, 26ರಂದು ನಡೆಯಲಿದೆ.
ಇನ್ನು ಚೆನ್ನೈ ಸೂಪರ್ಕಿಂಗ್ಸ್ (ತಮಿಳುನಾಡು-ಚೆನ್ನೈ), ಗುಜರಾತ್ ಟೈಟಾನ್ಸ್ (ಗುಜರಾತ್-ಅಹಮದಾಬಾದ್), ಡೆಲ್ಲಿ ಕ್ಯಾಪಿಟಲ್ಸ್ (ದೆಹಲಿ), ಪಂಜಾಬ್ ಕಿಂಗ್ಸ್ (ಪಂಜಾಬ್-ಮೊಹಾಲಿ) ಮತ್ತು ಸನ್ರೈಸರ್ಸ್ ಹೈದರಾಬಾದ್ (ತೆಲಂಗಾಣ-ಆಂಧ್ರ) ತಂಡಗಳ ಪಂದ್ಯ ಆಯೋಜನೆ ಕಠಿಣವಲ್ಲ. ಯಾಕೆಂದರೆ ಈ ರಾಜ್ಯಗಳಲ್ಲಿ ಏಪ್ರಿಲ್ 19ರಂದು ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ಮುಗಿದುಹೋಗಲಿದೆ.
ಮುಂದಿನ ವಾರ ಎರಡನೇ ಚರಣದ ವೇಳಾಪಟ್ಟಿ ಪ್ರಕಟ?
ಏಪ್ರಿಲ್ 8ರಿಂದ ನಡೆಯಲಿರುವ ಐಪಿಎಲ್ 2ನೇ ಚರಣದ ಉಳಿದ 53 ಪಂದ್ಯಗಳ ವೇಳಾಪಟ್ಟಿ ಮುಂದಿನ ವಾರ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಮೇ 26ರಂದು ಫೈನಲ್ ಪಂದ್ಯ ನಿಗದಿಯಾಗುವ ನಿರೀಕ್ಷೆ ಇದೆ. ಇದರಿಂದ ಈ ಸಲವೂ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಕ್ಕೆ (ಜೂನ್ 4) ಮುನ್ನವೇ ಐಪಿಎಲ್ ಮುಗಿಯಲಿದೆ. 2019ರಲ್ಲೂ ಲೋಕಸಭಾ ಚುನಾವಣಾ ಫಲಿತಾಂಶ (ಮೇ 19) ಪ್ರಕಟಕ್ಕೆ ಮುನ್ನವೇ ಐಪಿಎಲ್ (ಮೇ 12) ಮುಕ್ತಾಯ ಕಂಡಿತ್ತು. ಆಗ ಐಪಿಎಲ್ ಮಾರ್ಚ್ 23ಕ್ಕೆ ಶುರುವಾಗಿದ್ದರೆ, ಮೊದಲ ಹಂತದ ಮತದಾನ ಏಪ್ರಿಲ್ 11ಕ್ಕೆ ನಡೆದಿತ್ತು. ಈ ಬಾರಿ ಮೊದಲ ಹಂತದ ಚುನಾವಣೆ ಏಪ್ರಿಲ್ 19ಕ್ಕೆ ನಿಗದಿಯಾಗಿದೆ.