199 ರನ್‌ಗೆ ಔಟಾಗಿ ಚೊಚ್ಚಲ ದ್ವಿಶತಕದಿಂದ ವಂಚಿತರಾದ ಫಾಫ್​ ಡು ಪ್ಲೆಸಿಸ್

plessis web
Published on

ಸೆಂಚುರಿಯನ್: ಮಾಜಿ ನಾಯಕ ಫಾಫ್​ ಡು ಪ್ಲೆಸಿಸ್ (199 ರನ್, 276 ಎಸೆತ, 24 ಬೌಂಡರಿ) ದ್ವಿಶತಕ ವಂಚಿತ ಬ್ಯಾಟಿಂಗ್ ಸಾಹಸದಿಂದ ದಕ್ಷಿಣ ಆಫ್ರಿಕಾ ತಂಡ ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮುನ್ನಡೆ ಸಾಧಿಸಿದೆ.

ಸೋಮವಾರ 4 ವಿಕೆಟ್‌ಗೆ 317 ರನ್‌ಗಳಿಂದ 3ನೇ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ, ಚಹಾ ವಿರಾಮದ ಬಳಿಕ 621 ರನ್‌ಗೆ ಆಲೌಟ್ ಆಯಿತು. ಈ ಮೂಲಕ 225 ರನ್ ಮುನ್ನಡೆ ಸಾಧಿಸಿತು. ಪ್ರತಿಯಾಗಿ ಲಂಕಾ ದಿನದಂತ್ಯಕ್ಕೆ ತನ್ನ 2ನೇ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 65 ರನ್ ಗಳಿಸಿದೆ.

55 ರನ್‌ನಿಂದ ದಿನದಾಟ ಮುಂದುವರಿಸಿದ ಪ್ಲೆಸಿಸ್, ಭೋಜನ ವಿರಾಮಕ್ಕೂ ಮೊದಲೇ 10ನೇ ಟೆಸ್ಟ್ ಶತಕ ಪೂರೈಸಿದರು. ಬಳಿಕ ಅದನ್ನು ಚೊಚ್ಚಲ ದ್ವಿಶತಕವಾಗಿ ಪರಿವರ್ತಿಸುವುದರಿಂದ 1 ರನ್ ದೂರವಿದ್ದಾಗ ಹಸರಂಗ ಎಸೆತದಲ್ಲಿ ಎದುರಾಳಿ ನಾಯಕ ದಿಮುತ್ ಕರುಣರತ್ನೆಗೆ ಕ್ಯಾಚ್ ನೀಡಿ ನಿರಾಸೆ ಅನುಭವಿಸಿದರು.

ಶ್ರೀಲಂಕಾ: 396 ಮತ್ತು 12 ಓವರ್‌ಗಳಲ್ಲಿ 2 ವಿಕೆಟ್‌ಗೆ 65 (ಕುಸಲ್ ಪೆರೇರ 33*, ದಿನೇಶ್ ಚಾಂಡಿಮಲ್ 21*, ಎನ್‌ಗಿಡಿ 28ಕ್ಕೆ 2), ದಕ್ಷಿಣ ಆಫ್ರಿಕಾ: 142.1 ಓವರ್‌ಗಳಲ್ಲಿ 621 (ಪ್ಲೆಸಿಸ್ 199, ಬವುಮಾ 71, ಮುಲ್ಡರ್ 36, ಮಹಾರಾಜ್ 73, ಹಸರಂಗ 171ಕ್ಕೆ 4, ಫೆರ್ನಾಂಡೊ 129ಕ್ಕೆ 3, ಶನಕ 98ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net