IND vs NZ: ಕಿವೀಸ್​ ವಿರುದ್ಧದ​ ಪಂದ್ಯದಿಂದ ಈತನನ್ನು ಕೈಬಿಡಿ! ಮ್ಯಾನೇಜ್​ಮೆಂಟ್​ಗೆ ಪಿಯೂಷ್​ ಚಾವ್ಲಾ ಸಲಹೆ

ವಿಜಯವಾಣಿ - 2025-03-01T171052.520
Published on

IND vs NZ: ಪ್ರಸಕ್ತ ದುಬೈ ಮತ್ತು ಪಾಕಿಸ್ತಾನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಭಾರತ ಗೆದ್ದು ಬೀಗಿದೆ. ಈ ಗೆಲುವಿನ ಮೂಲಕ ಸೆಮಿಫೈನಲ್​ಗೆ ನೇರವಾಗಿ ಲಗ್ಗೆಯಿಟ್ಟಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಗೆದ್ದು ಬೀಗಿದ ರೋಹಿತ್ ಶರ್ಮ ಪಡೆ, ಎರಡನೇ ಮ್ಯಾಚ್​ನಲ್ಲಿ ಆತಿಥೇಯರ ವಿರುದ್ಧ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈಗ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್​ ಎದುರು ಸೆಣಸಾಡಲು ಸಜ್ಜಾಗಿದೆ.

ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಳ್ಳಲು ಐದು ಪಂದ್ಯಗಳ ಗೆಲುವು ಅಗತ್ಯ. ಈ ಹಾದಿಯಲ್ಲಿ ಸಾಗುತ್ತಿರುವ ರೋಹಿತ್ ಶರ್ಮ ಪಡೆಗೆ ಮೂರನೇ ಪಂದ್ಯವನ್ನು ವಶಪಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಕಳೆದ ಪಂದ್ಯದಲ್ಲಿ ದಾಖಲೆಗಳ ಸರದಾರ, ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಆಕರ್ಷಕ ಶತಕ ಬಾರಿಸಿದರು. ಈ ಮೂಲಕ ಫಾರ್ಮ್​ಗೆ ಮರಳಿದ್ದಾರೆ. ಇದು ತಂಡದ ಗೆಲುವಿನ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಕಿವೀಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ನಮ್ಮದೇ ಎಂಬ ಭರವಸೆಯಲ್ಲಿರುವ ಭಾರತ ತಂಡದಲ್ಲಿ ಒಂದೇ ಒಂದು ಬದಲಾವಣೆ ಬೇಕಿದೆ ಎಂದು ಮಾಜಿ ಕ್ರಿಕೆಟಿಗ ಪಿಯೂಷ್​ ಚಾವ್ಲಾ ಅಭಿಪ್ರಾಯಿಸಿದ್ದಾರೆ.

"ಎರಡೂ ಉಭಯ ತಂಡಗಳು ಈಗಾಗಲೇ ಸೆಮಿಫೈನಲ್ ಲಗ್ಗೆಯಿಟ್ಟಿರುವ ಹಿನ್ನೆಲೆ ಅಂತಿಮ ಸ್ಪರ್ಧೆ ಮತ್ತಷ್ಟು ಜಟಿಲವಾಗಿದೆ. ಹೀಗಿರುವಾಗ ತಂಡದಲ್ಲಿ ರೋಹಿತ್ ಶರ್ಮಗೆ ಕೆಲವು ರನ್‌ಗಳ ಅಗತ್ಯವಿರುವುದರಿಂದ ಬ್ಯಾಟಿಂಗ್ ಲೈನ್‌ಅಪ್ ಬದಲಾಯಿಸಲು ಸಾಧ್ಯವಿಲ್ಲ. ಇನ್ನು ವಿರಾಟ್ ಕೊಹ್ಲಿ ಇದೀಗ ಫಾರ್ಮ್‌ಗೆ ಮರಳಿದ್ದಾರೆ. ಶುಭಮನ್ ಗಿಲ್ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇವರ ನಂತರದಲ್ಲಿ ಶ್ರೇಯಸ್ ಅಯ್ಯರ್ ತಮ್ಮ 4ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ" ಎಂದರು.

"ಈಗ ಒಂದೇ ಒಂದು ಸಾಧ್ಯತೆ ಇದೆ. ಸೆಮಿಫೈನಲ್‌ ಪಂದ್ಯಕ್ಕೂ ಲಗ್ಗೆಯಿಡುವ ಮುನ್ನ ವೇಗಿ ಮೊಹಮ್ಮದ್ ಶಮಿ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ಕೈಬಿಡುವುದು ಒಳಿತು. ಅವರಿಗೆ ವಿಶ್ರಾಂತಿ ಕೊಡುವುದು ಉತ್ತಮ ನಿರ್ಧಾರ ”ಎಂದು ಚಾವ್ಲಾ ಸಲಹೆ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net