ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕಾರಕ್ಕೆ ಮುನ್ನಾದಿನವೇ ಇಹಲೋಕ ತ್ಯಜಿಸಿದ ಪುರುಷೋತ್ತಮ್ ರೈ

purushotham rai (2).jpg for web
Published on

ಬೆಂಗಳೂರು: ನನಗೆ 20 ವರ್ಷ ಮೊದಲೇ ಈ ಪ್ರಶಸ್ತಿ ಬರಬೇಕಿತ್ತು. ನನ್ನ ಪ್ರತಿಭೆಯನ್ನು ಗುರುತಿಸಲಿಲ್ಲ. ಕ್ರೀಡಾ ಸಚಿವಾಲಯದ ನೂತನ ನಿಯಮದಿಂದಾಗಿ ನಾನೇ ನನ್ನ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಿಕೊಂಡೆ. ಕಡೆಗೂ ನನಗೆ ಪ್ರತಿಫಲ ದೊರೆಯಿತು ಎಂದು ಪ್ರಶಸ್ತಿಗೆ ಭಾಜನರಾದ ಖುಷಿಯಲ್ಲಿ ಹಿರಿಯ ಅಥ್ಲೆಟಿಕ್ಸ್ ಕೋಚ್ ಪುರುಷೋತ್ತಮ್ ರೈ ‘ವಿಜಯವಾಣಿ’ಯೊಂದಿಗೆ ಹೇಳಿಕೊಂಡಿದ್ದ ಮಾತಿದು. ಆದರೆ, ವಿಧಿಯಾಟವೇ ಬೇರೆಯಾಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಪುರುಷೋತ್ತಮ್ ರೈ ಶನಿವಾರ, ಜೀವಮಾನ ಸಾಧನೆಗಾಗಿ ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕರಿಸಬೇಕಿತ್ತು. ಆದರೆ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಒಂದು ದಿನ ಮೊದಲೇ ಹೃದಯಾಘಾತದಿಂದ ಅವರು ಇಹಲೋಕ ತ್ಯಜಿಸಿದ್ದಾರೆ. ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸುವ ಕಡೇ ಹಂತದಲ್ಲಿ ರೈ ಸಾವನ್ನಪ್ಪಿರುವುದು ಕುಟುಂಬ ಸದಸ್ಯರನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ. ಮೃತರಿಗೆ 79 ವರ್ಷ ವಯಸ್ಸಾಗಿತ್ತು.

ಕಳೆದ 35 ವರ್ಷಗಳ ಕಾಲ ರಾಜ್ಯದ ಅಥ್ಲೀಟ್‌ಗಳಿಗೆ ತರಬೇತಿ ನೀಡಿದ್ದ ಪುರುಷೋತ್ತಮ್ ರೈ, ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಶನಿವಾರ ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ವರ್ಚುವಲ್ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಾರಂಭದಲ್ಲಿ ಅವರು ಜೀವಮಾನ ಸಾಧನೆಗಾಗಿ ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕರಿಸಬೇಕಿತ್ತು. ದಿನಪೂರ್ತಿ ಎಂದಿನಂತೆ ಲವವಿಕೆಯಿಂದಲೇ ಇದ್ದ ಪುರುಷೋತ್ತಮ್ ರೈ ಅವರಿಗೆ ಸಂಜೆ ವೇಳೆಗೆ ದಿಢೀರನೇ ಎದೆ ನೋವು ಕಾಣಿಸಿಕೊಂಡಿತು. ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚೇತರಿಸಿಕೊಳ್ಳದೆ ಕೊನೆಯುಸಿರು ಎಳೆದಿದ್ದಾರೆ.

ಮೂಲತಃ ಪುತ್ತೂರಿನವರಾದ ಪುರುಷೋತ್ತಮ್ ರೈ, ಬೆಂಗಳೂರಿನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಸಾಯ್) ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ ಹಾಗೂ ಮಗ, ಸೊಸೆಯನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net