ಐಪಿಎಲ್ ಶೀರ್ಷಿಕೆ​ ಪ್ರಾಯೋಜಕತ್ವ ಒಲಿಸಿಕೊಂಡ ಡ್ರೀಮ್​11, ಒಪ್ಪಂದದ ಮೊತ್ತವೆಷ್ಟು ಗೊತ್ತೇ?

ipl dream 11
Published on

ನವದೆಹಲಿ: ಫ್ಯಾಂಟಸಿ ಸ್ಪೋರ್ಟ್ಸ್​​ ಆ್ಯಪ್​ ಡ್ರೀಮ್​11 ಯುಎಇಯಲ್ಲಿ ನಡೆಯಲಿರುವ ಐಪಿಎಲ್​ 13ನೇ ಆವೃತ್ತಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ಜಯಿಸಿದೆ. ಮಂಗಳವಾರ ನಡೆದ ಅಂತಿಮ ಹಂತದ ಬಿಡ್ಡಿಂಗ್​ ಪ್ರಕ್ರಿಯೆಯಲ್ಲಿ ಡ್ರೀಮ್​ 11 ಕಂಪನಿ ಗರಿಷ್ಠ 222 ಕೋಟಿ ರೂ. ಮೊತ್ತದ ಬಿಡ್​ ನಡೆಸುವ ಮೂಲಕ ಬಿಸಿಸಿಐನಿಂದ ಐಪಿಎಲ್​ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕು ಪಡೆದುಕೊಂಡಿತು. ಇದರಿಂದಾಗಿ 13ನೇ ಆವೃತ್ತಿಯ ಟೂರ್ನಿಯು 'ಡ್ರೀಮ್​11 ಐಪಿಎಲ್​' ಎಂದು ಕರೆಸಿಕೊಳ್ಳಲಿದೆ.

ಅಂತಿಮ ಹಂತದ ಬಿಡ್ಡಿಂಗ್​ ಪ್ರಕ್ರಿಯೆಯಲ್ಲಿ, ಬೆಂಗಳೂರು ಮೂಲದ ಆನ್​ಲೈನ್​ ಶಿಕ್ಷಣ ಆ್ಯಪ್​ ಮತ್ತು ಈಗಾಗಲೆ ಟೀಮ್​ ಇಂಡಿಯಾದ ಜೆರ್ಸಿ ಪ್ರಾಯೋಜಕತ್ವ ಹೊಂದಿರುವ ಬೈಜುಸ್​ ಸಂಸ್ಥೆ 201 ಕೋಟಿ ರೂ. ಮೊತ್ತದ ಬಿಡ್​ ಸಲ್ಲಿಸಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟರೆ, ಬೆಂಗಳೂರು ಮೂಲದ  ಮತ್ತೊಂದು ​ಲೈನ್​ ಶಿಕ್ಷಣ ಆ್ಯಪ್​ ಅನ್​ಅಕಾಡೆಮಿ 170 ಕೋಟಿ ರೂ. ಮೊತ್ತದ ಬಿಡ್​ ನಡೆಸಿ ಡ್ರೀಮ್​11ಗಿಂತ ಹಿಂದೆ ಉಳಿಯಿತು. ಟಾಟಾ ಗ್ರೂಪ್​ 180 ಕೋಟಿ ರೂ. ಮೊತ್ತದ ಆರಂಭಿಕ ಬಿಡ್​ ಸಲ್ಲಿಸಿದ್ದರೂ, ಅಂತಿಮ ಹಂತದ ಬಿಡ್​ ಪ್ರಕ್ರಿಯೆಯಿಂದ ಹೊರಗುಳಿದಿತ್ತು ಎನ್ನಲಾಗಿದೆ.

222 ಕೋಟಿ ರೂ. ಮೊತ್ತದ ಬಿಡ್​ ನಡೆಸಿದ ಡ್ರೀಮ್​11ಗೆ ಐಪಿಎಲ್​ ಶೀರ್ಷಿಕೆ ಪ್ರಾಯೋಕತ್ವ ನೀಡಿರುವುದನ್ನು ಐಪಿಎಲ್​ ಚೇರ್ಮನ್​ ಬ್ರಿಜೇಶ್​ ಪಟೇಲ್​ ಮಂಗಳವಾರ ಖಚಿತಪಡಿಸಿದ್ದಾರೆ. 4 ತಿಂಗಳು ಮತ್ತು 13 ದಿನಗಳ ಈ ಶೀರ್ಷಿಕೆ ಪ್ರಾಯೋಜಕತ್ವ 2020ರ ಡಿಸೆಂಬರ್​ 31ರವರೆಗೆ ಇರಲಿದೆ. ಈ ಮುನ್ನ ವಿವೋ ಕಂಪನಿ ವಾರ್ಷಿಕ 440 ಕೋಟಿ ರೂ. ಮೊತ್ತದ ಒಪ್ಪಂದ ಹೊಂದಿತ್ತು. ಆದರೆ ಇದೀಗ ಡ್ರೀಮ್​11 ಅದಕ್ಕಿಂತ ಅರ್ಧದಷ್ಟು ಮೊತ್ತಕ್ಕೆ ಒಪ್ಪಂದ ಪಡೆದುಕೊಂಡಿದೆ. ಇದರಿಂದಾಗಿ 300-400 ಕೋಟಿ ರೂ. ಮೊತ್ತದ ಒಪ್ಪಂದ ನಿರೀಕ್ಷೆಯಲ್ಲಿದ್ದ ಬಿಸಿಸಿಐ ನಿರಾಸೆ ಅನುಭವಿಸುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net