AUDIO: ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಕನಸಿನಲ್ಲಿ ರಾಬಿನ್​ ಉತ್ತಪ್ಪ..!

robin and royals for web
Published on

ಬೆಂಗಳೂರು: ಮುಂಬರುವ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ (ಐಪಿಎಲ್​) ಉತ್ತಮ ನಿರ್ವಹಣೆ ತೋರುವುದಷ್ಟೇ ನನ್ನ ಗುರಿ. ರಾಷ್ಟ್ರೀಯ ತಂಡಕ್ಕೆ ವಾಪಸಾಗುವ ನನ್ನ ಕನಸು ಜೀವಂತವಾಗಿದೆ ಎಂದು ಕರ್ನಾಟಕದ ಕ್ರಿಕೆಟಿಗ ರಾಬಿನ್​ ಉತ್ತಪ್ಪ ಹೇಳಿದ್ದಾರೆ. ಉತ್ತಪ್ಪ ಪ್ರಸಕ್ತ ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್​ ತಂಡ ಪ್ರತಿನಿಧಿಸಲಿದ್ದಾರೆ. ಸೆ.19 ರಿಂದ ನ.10ರವರೆಗೆ ಐಪಿಎಲ್​ ಯುಎಇಯ 3 ನಗರಗಳಲ್ಲಿ ನಡೆಯಲಿದೆ. ರಾಜಸ್ಥಾನ ರಾಯಲ್ಸ್​ ತಂಡದ ವೆಬ್​ಸೈಟ್​ಗೆ ನೀಡಿರುವ ಸಂದರ್ಶನದಲ್ಲಿ ಉತ್ತಪ್ಪ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.

ಐಪಿಎಲ್​ನಲ್ಲಿ ಉತ್ತಮ ನಿರ್ವಹಣೆ ತೋರಿದರೆ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶವಿದೆಯೇ ಎಂದು ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಉತ್ತಪ್ಪ, ಐಪಿಎಲ್​ನಲ್ಲಿ ಉತ್ತಮ ನಿರ್ವಹಣೆ ತೋರಬೇಕು ಎಂಬುದೇ ನನ್ನ ಉದ್ದೇಶ. ರಾಷ್ಟ್ರೀಯ ತಂಡದಲ್ಲಿ ಆಡಬೇಕೆಂಬ ನನ್ನ ಕನಸು ಈಗಲೂ ಜೀವಂತವಾಗಿದೆ. ಈ ಕುರಿತು ಸಕರಾತ್ಮಕವಾಗಿಯೇ ಯೋಚಿಸುತ್ತಿದ್ದೇನೆ ಎಂದರು. ದೇವರ ಆಶೀರ್ವಾದಿಂದಾಗಿ ರಾಷ್ಟ್ರೀಯ ತಂಡ ಪ್ರತನಿಧಿಸಿದೆ. ಸ್ಪರ್ಧಾತ್ಮಕ ಕ್ರಿಕೆಟ್​ನಲ್ಲಿ ಆಡುವವರು ಉತ್ತಮ ನಿರ್ವಹಣೆ ತೋರಿದರೆ, ರಾಷ್ಟ್ರೀಯ ತಂಡ ಪ್ರತಿನಿಧಿಸುವ ಅವಕಾಶ ಹೊಂದಿರುತ್ತಾರೆ ಎಂದರು. ರಾಬಿನ್​ ಉತ್ತಪ್ಪ 2015ರಲ್ಲಿ ಕಡೇ ಬಾರಿಗೆ ರಾಷ್ಟ್ರೀಯ ತಂಡ ಪ್ರತಿನಿಧಿಸಿದ್ದರು.

ರಾಬಿನ್​ ಉತ್ತಪ್ಪ ರಾಷ್ಟ್ರೀಯ ತಂಡದ ಪರ 46 ಏಕದಿನ ಪಂದ್ಯಗಳಿಂದ 934 ರನ್​ ಗಳಿಸಿದರೆ, 13 ಟಿ20 ಪಂದ್ಯಗಳಿಂದ 249 ರನ್​ ಗಳಿಸಿದ್ದಾರೆ. ದೇಶೀಯ ಕ್ರಿಕೆಟ್​ನಲ್ಲಿ ಕರ್ನಾಟಕ, ಸೌರಾಷ್ಟ್ರ ಹಾಗೂ ಕೇರಳ ತಂಡ ಪ್ರತಿನಿಧಿಸಿದ್ದಾರೆ. 2013&14, 2014&15ನೇ ಸಾಲಿನಲ್ಲಿ ಕರ್ನಾಟಕ ಜಯಿಸಿದ ಹ್ಯಾಟ್ರಿಕ್​ (ರಣಜಿ, ಇರಾನಿ, ವಿಜಯ್​ ಹಜಾರೆ) ಪ್ರಶಸ್ತಿ ವಿಜೇತ ತಂಡದ ಸದಸ್ಯರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net