

ನವದೆಹಲಿ: ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್, ಭಾರತ ಎ ತಂಡ ಹಾಗೂ 19 ವಯೋಮಿತಿ ತಂಡದ ಮುಖ್ಯ ಕೋಚ್ ಆಗಿ ಯಶಸ್ವಿಯಾಗಿದ್ದರು. ಯುವ ಆಟಗಾರರ ಪಾಲಿಗೆ ಸ್ಫೂತಿರ್ಯಾಗಿರುವ ದ್ರಾವಿಡ್ ಮನಸು ಮಾಡಿದ್ದರೆ ರಾಷ್ಟ್ರೀಯ ತಂಡದ ಕೋಚ್ ಆಗಬಹುದಿತ್ತು. ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯುವ ದೃಷ್ಟಿಯಿಂದ ದ್ರಾವಿಡ್ ಈ ಹುದ್ದೆಯಿಂದ ದೂರ ಉಳಿದರು. ಆದರೆ, ಭಾರತ ಎ ಹಾಗೂ 19 ವಯೋಮಿತಿ ತಂಡಗಳಿಗೆ ಕೋಚ್ ಆಗುವುದಾಗಿ ಒಪ್ಪಿಕೊಳ್ಳುವುದರ ಹಿಂದೆ ದಿಗ್ಗಜ ಕಪಿಲ್ ದೇವ್ ಸಲಹೆ ಪ್ರಮುಖ ಕಾರಣ ಎಂದು ದ್ರಾವಿಡ್ ಹೇಳಿಕೊಂಡಿದ್ದಾರೆ. ವೃತ್ತಿ ಜೀವನದ ಅಂತ್ಯದ ವೇಳೆ ರಾಹುಲ್ ದ್ರಾವಿಡ್ ಐಪಿಎಲ್ ಫ್ರಾಂಚೈಸಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ನಾಯಕ ಕಮ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಇದನ್ನೂ ಓದಿ: ಗಾವಸ್ಕರ್ ಗಳಿಸಿದ 10 ಸಾವಿರ ರನ್ ಈಗಿನ 16 ಸಾವಿರ ರನ್ಗಳಿಗೆ ಸಮ!
ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ ಬಳಿಕ ರಾಹುಲ್ ದ್ರಾವಿಡ್, ವೀಕ್ಷಕ ವಿವರಣೆಗಾರರಾಗಿಯೂ ಕಾರ್ಯನಿರ್ವಹಿಸಿದ್ದರು. ಮತ್ತೆ ಮೈದಾನಕ್ಕೆ ಆಗಮಿಸಬೇಕೆಂದು ಅನಿಸಿತು. ಬಳಿಕ ಕೋಚಿಂಗ್ ಹುದ್ದೆ ಆಯ್ದುಕೊಂಡೆ, ಬಳಿ ಭಾರತ ಎ ಹಾಗೂ 19 ವಯೋಮಿತಿ ತಂಡಗಳಿಗೆ ಮಾರ್ಗದರ್ಶನ ನೀಡುವ ಅವಕಾಶ ದಕ್ಕಿತು ಎಂದು ದ್ರಾವಿಡ್ ಹೇಳಿಕೊಂಡಿದ್ದಾರೆ. ಭಾರತ ಎ ಹಾಗೂ 19 ವಯೋಮಿತಿ ತಂಡದಲ್ಲಿ ದ್ರಾವಿಡ್ ಹಲವು ಬದಲಾವಣೆ ತಂದರು. ಒಬ್ಬ ಆಟಗಾರ ಒಮ್ಮೆ ಮಾತ್ರ 19 ವಯೋಮಿತಿ ವಿಶ್ವಕಪ್ ಆಡಬೇಕು ಎಂಬ ನಿಯಮ ತಂದರು. ಕೇವಲ 15-20 ಆಟಗಾರರಿಗಷ್ಟೇ ಮೀಸಲಾಗಿದ್ದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ವ್ಯವಸ್ಥೆಯನ್ನು 45 ರಿಂದ 50 ಆಟಗಾರರಿಗೆ ವಿಸ್ತರಿಸಿದರು. ಇದರಿಂದ ಹೆಚ್ಚು ಆಟಗಾರರಿಗೆ ಎ ತಂಡದಲ್ಲಿ ಆಡುವ ಅವಕಾಶ ಲಭಿಸಿತು. ದ್ರಾವಿಡ್ ಸದ್ಯ ಬೆಂಗಳೂರಿನಲ್ಲಿ ಎನ್ಸಿಎ ಮುಖ್ಯಸ್ಥರಾಗಿದ್ದಾರೆ. ದ್ರಾವಿಡ್ ಮಾರ್ಗದರ್ಶನದ ಭಾರತ 19 ವಯೋಮಿತಿ ತಂಡ 2018ರಲ್ಲಿ ವಿಶ್ವಕಪ್ ಜಯಿಸಿತ್ತು.