

ಬೆಂಗಳೂರು: ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಕೂಡ ಮ್ಯಾಥ್ಯೂಸ್ ವಿರುದ್ಧ ಟೈಮ್ಡ್ ಔಟ್ ತೀರ್ಪು ನೀಡಿದ ಪರವಾಗಿ ಮಾತನಾಡಿದ್ದು, ಇದರಲ್ಲಿ ಕ್ರೀಡಾಸ್ಫೂರ್ತಿಯ ಪ್ರಶ್ನೆಯನ್ನು ತಳ್ಳಿಹಾಕಿದ್ದಾರೆ. ಪ್ರತಿ ಆಟಗಾರ ಕೂಡ ನಿಯಮ ಪಾಲನೆ ಮಾಡುವುದು ಅಗತ್ಯ. ನಿಯಮ ಪಾಲಿಸಿದ್ದಕ್ಕಾಗಿ ಯಾರನ್ನೂ ದೂರಬಾರದು ಎಂದು ಹೇಳಿದ್ದಾರೆ. ಈ ಮೂಲಕ ಟೈಮ್ಡ್ ಔಟ್ ತೀರ್ಪಿಗೆ ಮನವಿ ಸಲ್ಲಿಸಿದ ಬಾಂಗ್ಲಾ ನಾಯಕ ಶಕೀಬ್ ನಿರ್ಧಾರವನ್ನು ಪರೋಕ್ಷವಾಗಿ ಬೆಂಬಲಿಸಿದ್ದಾರೆ.
"ಎಲ್ಲರೂ ಭಿನ್ನ ಯೋಚನೆ ಹೊಂದಿರುತ್ತಾರೆ. ನಾವೆಲ್ಲರೂ ವಿಚಿತ್ರ ಪ್ರಾಣಿಗಳು. ನಾವೆಲ್ಲರೂ ನಮ್ಮದೇ ಆದ ರೀತಿಯಲ್ಲಿ ಯೋಚಿಸುತ್ತೇವೆ. ನಿಜವಾದ ರೀತಿಯಲ್ಲಿ ಸರಿ ಅಥವಾ ತಪು$್ಪ ಎಂಬುದು ಯಾವುದೂ ಇರುವುದಿಲ್ಲ. ಭಿನ್ನ ಯೋಚನೆ ಹೊಂದಿರುವುದು ಕೂಡ ತಪ್ಪಲ್ಲ. ಯಾರಾದರೂ ನಿಯಮ ಪ್ರಕಾರ ನಡೆದುಕೊಳ್ಳಲು ಬಯಸಿದರೆ ಅದನ್ನು ದೂರುವಂತಿಲ್ಲ. ನೀವು ಬೇಕಿದ್ದರೆ ಅದರಂತೆ ನಡೆದುಕೊಳ್ಳಬೇಕಾಗಿಲ್ಲ. ಆದರೆ ಅದಕ್ಕಾಗಿ ಬೇರೆಯವರನ್ನು ದೂರುವುದು ಸರಿಯಲ್ಲ' ಎಂದು ದ್ರಾವಿಡ್ ಶನಿವಾರ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.