

ಜೊಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧ ಡಿಸೆಂಬರ್ 26ರಿಂದ ನಡೆಯಲಿರುವ ಟೆಸ್ಟ್ ಸರಣಿಯ ಸಿದ್ಧತೆಯತ್ತ ಗಮನ ಹರಿಸಿರುವ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಭಾನುವಾರ ಆರಂಭವಾಗಲಿರುವ ಏಕದಿನ ಸರಣಿಯ ವೇಳೆ ಭಾರತ ತಂಡಕ್ಕೆ ತರಬೇತಿ ನೀಡಲು ಅಲಭ್ಯರಾಗಿದ್ದಾರೆ. ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಬೌಲಿಂಗ್ ಕೋಚ್ ಪರಾಸ್ ಮಹಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಕೂಡ ಟೆಸ್ಟ್ ತಂಡಕ್ಕೆ ಮಾತ್ರ ಆಯ್ಕೆಯಾಗಿರುವ ಪ್ರಮುಖ ಆಟಗಾರರ ಸಿದ್ಧತೆಗೆ ಸಹಕರಿಸಲಿದ್ದಾರೆ. ಇವರ ಗೈರಿನಲ್ಲಿ ಭಾರತ ಎ ತಂಡದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್, ಬೌಲಿಂಗ್ ರಜಿಬ್ ದತ್ತ ಮತ್ತು ಫೀಲ್ಡಿಂಗ್ ಕೋಚ್ ಅಜಯ್ ರಾತ್ರಾ ಏಕದಿನ ಸರಣಿಯ ವೇಳೆ ಕೆಎಲ್ ರಾಹುಲ್ ಬಳಗದ ಮೇಲ್ವಿಚಾರಣೆ ವಹಿಸಿಕೊಳ್ಳಲಿದ್ದಾರೆ.
ಟೆಸ್ಟ್ಗೆ ಶಮಿ, ಏಕದಿನಕ್ಕೆ ದೀಪಕ್ ಅಲಭ್ಯ
ಏಕದಿನ ವಿಶ್ವಕಪ್ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿ ಮಿಂಚಿದ್ದ ವೇಗಿ ಮೊಹಮದ್ ಶಮಿ ಮೊಣಕಾಲು ಗಾಯದಿಂದ ಸಂಪೂರ್ಣ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿಯಿಂದ ಹೊರಗುಳಿಯಲಿದ್ದಾರೆ. ಬಿಸಿಸಿಐ ವೈದ್ಯಕಿಯ ತಂಡ ಹಸಿರು ನಿಶಾನೆ ತೋರಿಸದ ಕಾರಣ ಶಮಿ ದಣ ಆಫ್ರಿಕಾಕ್ಕೆ ವಿಮಾನ ಏರಿಲ್ಲ. ಇದೇ ವೇಳೆ ತಂದೆಯ ಅನಾರೋಗ್ಯದಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸದ ಟಿ20 ಸರಣಿ ತಪ್ಪಿಸಿಕೊಂಡಿದ್ದ ಮತ್ತೋರ್ವ ವೇಗಿ ದೀಪಕ್ ಚಹರ್, ಏಕದಿನ ಸರಣಿಯನ್ನೂ ತಪ್ಪಿಸಿಕೊಳ್ಳಲಿದ್ದಾರೆ. ತಂದೆಯ ಆರೋಗ್ಯ ಇನ್ನೂ ಸುಧಾರಿಸದಿರುವ ಕಾರಣ ಚಹರ್ ಪ್ರವಾಸಕ್ಕೆ ತೆರಳುತ್ತಿಲ್ಲ ಎಂದು ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ. ದೀಪಕ್ ಚಹರ್ ಬದಲಿಗೆ ಬಂಗಾಳದ ವೇಗಿ ಆಕಾಶ್ ದೀಪ್ರನ್ನು ಏಕದಿನ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.
ಟೆಸ್ಟ್ ತಂಡದಲ್ಲಿ ಈಗಾಗಲೆ ಐವರು ವೇಗಿಗಳು (ಜಸ್ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್, ಪ್ರಸಿದ್ಧಕೃಷ್ಣ, ಮುಕೇಶ್ ಕುಮಾರ್, ಶಾರ್ದೂಲ್ ಠಾಕೂರ್) ಇರುವುದರಿಂದ ಶಮಿ ಬದಲಿಗೆ ಬೇರೆ ವೇಗಿಯನ್ನು ಹೆಸರಿಸಲಾಗಿಲ್ಲ.
ಶ್ರೇಯಸ್ ಮೊದಲ ಏಕದಿನಕ್ಕೆ ಮಾತ್ರ
ಬ್ಯಾಟರ್ ಶ್ರೇಯಸ್ ಅಯ್ಯರ್ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಮಾತ್ರ ಆಡಲಿದ್ದು, ನಂತರ ಟೆಸ್ಟ್ ಸರಣಿಯ ಸಿದ್ಧತೆಗೆ ತೆರಳಲಿದ್ದಾರೆ. ಇದರಿಂದಾಗಿ 2 ಮತ್ತು 3ನೇ ಏಕದಿನ ಪಂದ್ಯಗಳಿಗೆ ಅವರು ಅಲಭ್ಯರಾಗಿದ್ದಾರೆ.