ಕೊಹ್ಲಿ ಕಂಡ್ರೆ ಉರಿದು ಬೀಳ್ತಿದ್ದ ಗೌತಿ ಈಗ ವಿರಾಟ್​ ಬಗ್ಗೆ ಹೇಳಿದ್ದನ್ನು ಕೇಳಿದ್ರೆ ಹೆಮ್ಮೆ ಪಡ್ತೀರಾ..!

Kohli
Published on

ನವದೆಹಲಿ: ನಿನ್ನೆ ನಡೆದ ಐಪಿಎಲ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ವಿರಾಟ್​ ಕೊಹ್ಲಿಯ ನಿರ್ಧಾರ ಪಂದ್ಯದ ದಿಕ್ಕನೇ ಬದಲಿಸಿ, ಕೋಲ್ಕತ ನೈಟ್​ ರೈಡರ್ಸ್​ ವಿರುದ್ಧ ಸುಲಭ ಗೆಲುವಿಗೆ ಕಾರಣವಾಗಿದೆ. ಕೊಹ್ಲಿ ನಿರ್ಧಾರ ಸ್ವತಃ ಗೌತಮ್​ ಗಂಭೀರ್​ ಅವರಿಗೆ ಸರ್ಪ್ರೈಸ್​ ಆಗಿದ್ದು, ವಿರಾಟ್​ರನ್ನು ಮನಸಾರೆ ಕೊಂಡಾಡಿದ್ದಾರೆ.

ಕೊಹ್ಲಿ ಕಂಡರೆ ಸದಾ ಮೂಗು ಮುರಿಯುತ್ತಿದ್ದ ಗೌತಿ, ನಿನ್ನೆಯ ಪಂದ್ಯದಲ್ಲಿ ಕಾಮೆಂಟರಿ ವೇಳೆ ವಿರಾಟ್​ರನ್ನು ಹೊಗಳಿದರು. ಕೆಕೆಆರ್​ ಎದುರು ಹೊಸ ಬೌಲರ್​ ಮಹಮ್ಮದ್​ ಸಿರಾಜ್​ರನ್ನು ಕಣಕ್ಕಿಳಿಸಿದ್ದು ಕೊಹ್ಲಿಯ ಶ್ರೇಷ್ಠ ನಾಯಕತ್ವ ಕೌಶಲ್ಯವನ್ನು ತೋರುತ್ತದೆ. ಇದರ ಫಲಿತಾಂಶವೂ ಉತ್ತಮವಾಗಿತ್ತು ಮತ್ತು ಕೊಹ್ಲಿಯ ನಿರ್ಧಾರವೂ ಸರ್ಪ್ರೈಸ್​ ಆಗಿದೆ ಎಂದು ಗಂಭೀರ್​ ಹೇಳಿದ್ದಾರೆ.

ಮುಂದುವರಿದು ಪಂದ್ಯದ ಮೂರನೇ ಓವರ್​ನಲ್ಲಿ ಕೊಹ್ಲಿ ಹೊಸ ಬೌಲರ್​ ಅನ್ನು ಏಕೆ ಆಯ್ಕೆ ಮಾಡಿದರು ಎಂಬುದರ ಕಾರಣ ಗೊತ್ತಿಲ್ಲ. ಆದರೆ, ಅವರ ನಿರ್ಧಾರ ಮಾತ್ರ ನಿಜಕ್ಕೂ ಅಚ್ಚರಿಯಾಗಿತ್ತು ಎಂದು ಗೌತಿ ಕೊಹ್ಲಿಯನ್ನು ಮೆಚ್ಚಿದ್ದಾರೆ.

ಇನ್ನು ಈ ಹಿಂದೆ ದುಬಾರಿ ಬೌಲಿಂಗ್ ದಾಳಿಯಿಂದಾಗಿ ಟ್ರೋಲ್‌ಗಳಿಗೆ ಗುರಿಯಾಗುತ್ತಿದ್ದ ವೇಗಿ ಮೊಹಮದ್ ಸಿರಾಜ್ ಬುಧವಾರ ಕೆಕೆಆರ್ ವಿರುದ್ಧ ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಬಹಳ ಭಿನ್ನ ಬೌಲರ್ ಆಗಿ ಕಾಣಿಸಿಕೊಂಡರು. ಡಬಲ್ ವಿಕೆಟ್ ಮೇಡನ್ ಸಾಧನೆಯೊಂದಿಗೆ ಆರ್‌ಸಿಬಿ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ ಸಿರಾಜ್, ಐಪಿಎಲ್‌ನಲ್ಲಿ ಒಂದೇ ಪಂದ್ಯದಲ್ಲಿ 2 ಮೇಡನ್ ಓವರ್ ಮಾಡಿದ ಮೊದಲ ಬೌಲರ್ ಎಂಬ ಹೊಸ ಇತಿಹಾಸವನ್ನೂ ಸೃಷ್ಟಿಸಿದ್ದಾರೆ.

2018ರ ಐಪಿಎಲ್ ಹರಾಜಿನಲ್ಲಿ 2.60 ಕೋಟಿ ರೂ. ಮೊತ್ತಕ್ಕೆ ಆರ್‌ಸಿಬಿ ತಂಡ ಸೇರಿದ್ದ ಸಿರಾಜ್, ಇದುವರೆಗೆ ದುಬಾರಿ ಬೌಲಿಂಗ್ ನಿರ್ವಹಣೆಯಿಂದಲೇ ಟೀಕೆಗಳನ್ನು ಎದುರಿಸುತ್ತಿದ್ದರು. ಆದರೆ ಬುಧವಾರ ಕೆಕೆಆರ್ ಬ್ಯಾಟ್ಸ್‌ಮನ್‌ಗಳಿಗೆ ದುಃಸ್ವಪ್ನರಾದ ಸಿರಾಜ್ 4 ಓವರ್‌ಗಳಲ್ಲಿ 2 ಮೇಡನ್ ಸಹಿತ ಕೇವಲ 8 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಬಳಿಸುವ ಮೂಲಕ ಆರ್‌ಸಿಬಿ ಅಭಿಮಾನಿಗಳ ಮನಗೆದ್ದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net