

ನವದೆಹಲಿ: ಟಿ20 ವಿಶ್ವಕಪ್-2024 ಗೆಲ್ಲಲೇಬೇಕೆಂಬ ಗುರಿಯೊಂದಿಗೆ ಸಪ್ತಸಾಗರವನ್ನು ದಾಟಿ ಅಮೆರಿಕದಲ್ಲಿ ಬೀಡುಬಿಟ್ಟಿರುವ ಟೀಮ್ ಇಂಡಿಯಾ, ಭರ್ಜರಿ ತಯಾರಿ ನಡೆಸಿದೆ. ಈ ಮೆಗಾ ಟೂರ್ನಮೆಂಟ್ ಅನ್ನು ಈ ಬಾರಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆಯೋಜನೆ ಮಾಡಿದೆ. ಜೂನ್ 1 ರಿಂದ ವಿಶ್ವಕಪ್ ಆರಂಭವಾಗಿದ್ದು, ಜೂನ್ 5 ರಂದು ಭಾರತ ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ಅನ್ನು ಎದುರಿಸಲಿದೆ. ಟೀಮ್ ಇಂಡಿಯಾದ ಆಟವನ್ನು ಕಣ್ತುಂಬಿಕೊಳ್ಳಲು ದೇಶದ ಕ್ರೀಡಾಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿರುವಾಗ ರಾಜಸ್ಥಾನ ರಾಯಲ್ಸ್ ತಂಡದ ಆಲ್ರೌಂಡರ್ ರಿಯಾನ್ ಪರಾಗ್ ಟಿ20 ವಿಶ್ವಕಪ್ ನೋಡುವುದಿಲ್ಲ ಎಂದು ಹೇಳಿರುವ ಮಾತು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾದ 15 ಆಟಗಾರರ ಹೆಸರನ್ನು ಪ್ರಕಟಿಸುವ ಮೊದಲು ಸಂಭವನೀಯರ ಪಟ್ಟಿಯಲ್ಲಿ ಪರಾಗ್ ಹೆಸರನ್ನು ಸಹ ಚರ್ಚಿಸಲಾಗಿತ್ತು. ಏಕೆಂದರೆ, ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್‌ನಲ್ಲಿ ಉತ್ತಮ ಆಟವಾಡಿದ್ದರು. ಆದರೂ ಟಿ20 ವಿಶ್ವಕಪ್ನಲ್ಲಿ ಅವರಿಗೆ ಸ್ಥಾನ ದೊರೆಯಲಿಲ್ಲ. ಇದರಿಂದ ಪರಾಗ್ ಬೇಸರಗೊಂಡಿದ್ದಾರೆ ಎನ್ನಲಾಗಿದೆ.
ಇದೀಗ ಭಾರತ್ ಆರ್ಮಿ ಹೆಸರಿನ ಮಾಧ್ಯಮದ ಜತೆ ಮಾತನಾಡಿರುವ ಪರಾಗ್, ವಿಶ್ವಕಪ್ನ ನಾಲ್ಕು ಟಾಪ್ ತಂಡಗಳ ಹೇಳುವುದಾದರೆ ನನ್ನದು ಪಕ್ಷಪಾತದ ಉತ್ತರವಾಗಿರುತ್ತದೆ. ಆದರೆ ತುಂಬಾ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ವಿಶ್ವಕಪ್ ಅನ್ನು ವೀಕ್ಷಿಸಲು ಬಯಸುವುದಿಲ್ಲ. ಆದರೆ, ಯಾರು ಗೆಲ್ಲುತ್ತಾರೆ ಎಂಬುದನ್ನು ನಾನು ಕೊನೆಯಲ್ಲಿ ನೋಡುತ್ತೇನೆ ಮತ್ತು ಸಂತೋಷಪಡುತ್ತೇನೆ. ನಾನು ವಿಶ್ವಕಪ್ ಆಡುವಾಗ ಮಾತ್ರ ಅಗ್ರ ನಾಲ್ಕರ ಬಗ್ಗೆ ಮಾತ್ರ ಯೋಚಿಸುತ್ತೇನೆ ಎಂದರು.
ಪರಾಗ್ ಅವರು ಇತ್ತೀಚೆಗೆ ಸಂದರ್ಶನಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಟೀಮ್ ಇಂಡಿಯಾಗೆ ತಮ್ಮ ಆಯ್ಕೆಯ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದು, ಆಗಾಗ ಟ್ರೋಲ್ಗೆ ಒಳಗಾಗುತ್ತಿದ್ದಾರೆ. ಈ ವರ್ಷದ ಐಪಿಎಲ್‌ನಲ್ಲಿ, ಪರಾಗ್ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ಹಂತದಲ್ಲಿ ಆಯ್ಕೆದಾರರು ತನ್ನನ್ನು ಪರಿಗಣಿಸಬೇಕಾಗಿತ್ತು ಎಂದು ಹೇಳಿದ್ದಾರೆ. ಅಲ್ಲದೆ, ಒಂದಲ್ಲ ಒಂದು ದಿನ ನಾನು ಭಾರತ ತಂಡಕ್ಕಾಗಿ ಆಡುತ್ತೇನೆ ಎಂದಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಪರಾಗ್ ಅವರು ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದರು. ತಮ್ಮ ಗೂಗಲ್ ಸರ್ಚ್ ಹಿಸ್ಟರಿಯಲ್ಲಿ ಸಾರಾ ಅಲಿ ಖಾನ್ ಮತ್ತು ಅನನ್ಯ ಪಾಂಡೆ ಹಾಟ್ ವಿಡಿಯೋ ಎಂದು ಸರ್ಚ್ ಮಾಡಿ ಸಿಕ್ಕಿಬಿದ್ದಿದ್ದರು. ಈ ಸಂಗತಿ ಎಷ್ಟರ ಮಟ್ಟಿಗೆ ಚರ್ಚೆ ಆಯಿತು ಎಂದರೆ, ಎಕ್ಸ್ನಲ್ಲಿ ಪರಾಗ್ ಹೆಸರು ಟ್ರೆಂಡ್ ಆಗಿತ್ತು. (ಏಜೆನ್ಸೀಸ್)