

ಟೀಂ ಇಂಡಿಯಾದ 'ರನ್ ಮಷಿನ್', ಕ್ರಿಕೆಟ್ ಲೋಕದ ಮಾಂತ್ರಿಕ, ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರನ್ನು ಪಾಕಿಸ್ತಾನ ತಂಡದ ನಾಯಕ ಬಾಬರ್ ಆಝಮ್ ಜತೆಗೆ ಹೋಲಿಕೆ ಮಾಡುವುದು ಸರಿಯಲ್ಲ, ಅದಕ್ಕೆ ಇನ್ನು ಸಮಯವಿದೆ ಎಂದು ಪಾಕ್ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಹಾಗೂ ಕ್ರಿಕೆಟ್ ಬೋರ್ಡ್ನ ನಿರ್ದೇಶಕ ಮೊಹಮ್ಮದ್ ಹಫೀಜ್ ಅಭಿಪ್ರಾಯಿಸಿದ್ದಾರೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಹಫೀಜ್, ತಮಗೆ ಕೇಳಲಾದ ಒಂದು ಪ್ರಶ್ನೆಗೆ ಉತ್ತರಿಸುವಾಗ, ವಿರಾಟ್ ಕೊಹ್ಲಿ ಮತ್ತು ಬಾಬರ್ ಆಝಮ್ ನಡುವೆ ಹೋಲಿಕೆ ಬೇಡ, ಅದು ಇನ್ನು ದೂರದ ಮಾತು ಎಂದು ಹೇಳಿದರು.
"ಟೀಂ ಇಂಡಿಯಾಗೆ ವಿರಾಟ್ ಅವರ ಕೊಡುಗೆ ಅಪಾರ. ಪ್ರಸ್ತುತ ದಿನಗಳಲ್ಲಿ ಕೊಹ್ಲಿ ಮತ್ತು ಬಾಬರ್ ಆಝಮ್ ಇಬ್ಬರೂ ಸಹ ಉತ್ತಮ ಬ್ಯಾಟ್ಸ್ಮನ್ಗಳು ಎಂಬ ಮಾತು ಕ್ರಿಕೆಟ್ ಲೋಕದಲ್ಲಿ ಕೇಳಿಬಂದಿದೆ. ಅದು ನಿಜವೇ. ತಮ್ಮ ತಂಡಕ್ಕೆ ರನ್ ಗಳಿಸುವಲ್ಲಿ ಇಬ್ಬರು ಯಶಸ್ವಿ ಪ್ರದರ್ಶನ ನೀಡುತ್ತಾರೆ. ಹಾಗಂತ ವಿರಾಟ್ ಜತೆಗೆ ಬಾಬರ್ ಅವರನ್ನು ಹೋಲಿಕೆ ಮಾಡುವುದು ಅಷ್ಟು ಸರಿಯಲ್ಲ" ಎಂದರು.
"ಸತತವಾಗಿ ತಮ್ಮ ತಂಡಗಳಿಗೆ ರನ್ ತಂದುಕೊಡುವಲ್ಲಿ ಈ ಇಬ್ಬರು ಉತ್ತಮ ಆಟಗಾರರೇ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಗಳಿಸಿರುವ ಹೆಸರು, ಸಾಧನೆ ಅಪಾರ. ಇದೆಲ್ಲವನ್ನೂ ಬಾಬರ್ ಇನ್ನು ಸಾಧಿಸಬೇಕಿದೆ. ಸದ್ಯಕ್ಕೆ ಅದು ದೂರದ ಮಾತು. ಬಾಬರ್ ಆಝಮ್ಗೆ ಈ ಸಾಧನೆ ಮಾಡಲು ಇನ್ನೂ ಹೆಚ್ಚಿನ ಕಾಲಾವಕಾಶವಿದೆ. ಹಾಗಾಗಿ ಹೋಲಿಕೆ ಮಾಡುವ ಅಗತ್ಯವಿಲ್ಲ" ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).