ದೇಶೀಯ ಟಿ20 ಸೆಮಿಫೈನಲ್​ಗೇರಿದ ಬರೋಡ, ಮುಂಬೈ; ಮಿಂಚಿದ ಹಾರ್ದಿಕ್​ ಪಾಂಡ್ಯ, ರಹಾನೆ, ವೆಂಕಟೇಶ್​ ಅಯ್ಯರ್​

web smat1
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಸ್ಟಾರ್​ ಕ್ರಿಕೆಟಿಗರ ಆಕರ್ಷಣೆ ಹೊಂದಿರುವ ಬಲಿಷ್ಠ ತಂಡಗಳಾದ ಬರೋಡ, ಮುಂಬೈ, ಮಧ್ಯಪ್ರದೇಶ ಜತೆಗೆ ದೆಹಲಿ ತಂಡಗಳು ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯಲ್ಲಿ ಸೆಮಿಫೈನಲ್​ ಪ್ರವೇಶಿಸಿವೆ. ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ (27ಕ್ಕೆ 3) ಬಿಗಿ ಬೌಲಿಂಗ್​ ದಾಳಿಯ ಬಲದಿಂದ ಬರೋಡ ತಂಡ ಬಂಗಾಳವನ್ನು 41 ರನ್​ಗಳಿಂದ ಮಣಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕ್ವಾರ್ಟರ್​ಫೈನಲ್​ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಬರೋಡ ತಂಡ ಶಾಶ್ವತ್​ ರಾವತ್​ (40) ಮತ್ತು ಅಭಿಮನ್ಯು ಸಿಂಗ್​ (37) ಹಾಕಿಕೊಟ್ಟ ಉತ್ತಮ ಬುನಾದಿಯ ಬಲದಿಂದ 7 ವಿಕೆಟ್​ಗೆ 172 ರನ್​ ಪೇರಿಸಿತು. ಅನುಭವಿ ವೇಗಿ ಮೊಹಮದ್​ ಶಮಿ 2 ವಿಕೆಟ್​ ಕಿತ್ತರೂ, 4 ಓವರ್​ಗಳಲ್ಲಿ 43 ರನ್​ ಬಿಟ್ಟುಕೊಟ್ಟು ದುಬಾರಿಯಾದರು. ಪ್ರತಿಯಾಗಿ ಬಂಗಾಳಕ್ಕೆ ಶಾಬಾಜ್​ ಅಹ್ಮದ್​ (55) ಅರ್ಧಶತಕದಾಸರೆ ಒದಗಿಸಿದರೂ, ಅಗ್ರ-ಕೆಳ ಕ್ರಮಾಂಕದ ಕುಸಿತದಿಂದ 18 ಓವರ್​ಗಳಲ್ಲಿ 131 ರನ್​ಗಳಿಗೆ ಸರ್ವಪತನ ಕಂಡಿತು. ಬಂಗಾಳಕ್ಕೆ ಕಡಿವಾಣ ಹೇರಲು ಹಾರ್ದಿಕ್​ ಪಾಂಡ್ಯಗೆ ಲುಕ್ಮನ್​ ಮೆರಿವಾಲಾ (17ಕ್ಕೆ 3) ಮತ್ತು ಅತಿತ್​ ಸೇಠ್​ (41ಕ್ಕೆ 3) ಉತ್ತಮ ಬೆಂಬಲ ಒದಗಿಸಿದರು.

ಬರೋಡ: 7 ವಿಕೆಟ್​ಗೆ 172 (ಶಾಶ್ವತ್​ 40, ಅಭಿಮನ್ಯು 37, ಹಾರ್ದಿಕ್​ 10, ಕೃನಾಲ್​ 7, ಶಿವಾಲಿಕ್​ 24, ಶಮಿ 43ಕ್ಕೆ 2), ಬಂಗಾಳ: 18 ಓವರ್​ಗಳಲ್ಲಿ 131 (ಅಭಿಷೇಕ್​ ಪೊರೆಲ್​ 22, ರಿತ್ವಿಕ್​ 29, ಶಾಬಾಜ್​ 55, ಹಾರ್ದಿಕ್​ 27ಕ್ಕೆ 3, ಲುಕ್ಮನ್​ 17ಕ್ಕೆ 3, ಅತಿತ್​ 41ಕ್ಕೆ 3).

ಮುಂಬೈ ಗೆಲ್ಲಿಸಿದ ರಹಾನೆ

ಅನುಭವಿ ಬ್ಯಾಟರ್​ ಅಜಿಂಕ್ಯ ರಹಾನೆ (84 ರನ್​, 45 ಎಸೆತ, 10 ಬೌಂಡರಿ, 3 ಸಿಕ್ಸರ್​) ಬಿರುಸಿನಾಟದ ಬಲದಿಂದ ಮುಂಬೈ ತಂಡ ವಿದರ್ಭ ವಿರುದ್ಧದ ಕ್ವಾರ್ಟರ್​ಫೈನಲ್​ ಪಂದ್ಯದಲ್ಲಿ ಬೃಹತ್​ ಮೊತ್ತದ ಚೇಸಿಂಗ್​ ನಡೆಸಿ 6 ವಿಕೆಟ್​ಗಳಿಂದ ಗೆಲುವು ದಾಖಲಿಸಿತು. ಬೆಂಗಳೂರು ಹೊರವಲಯದ ಆಲೂರಿನ ಕೆಎಸ್​ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ವಿದರ್ಭ ತಂಡ ಅಥರ್ವ ತೈಡೆ (66), ಅಪೂರ್ವ ವಾಂಖಡೆ (51), ಶುಭಂ ದುಬೆ (43*) ಮತ್ತು ಕನ್ನಡಿಗ ಕರುಣ್​ ನಾಯರ್​ (26) ಉಪಯುಕ್ತ ಆಟದಿಂದ 6 ವಿಕೆಟ್​ಗೆ 221 ರನ್​ ಪೇರಿಸಿತು. ಪ್ರತಿಯಾಗಿ ಪೃಥ್ವಿ ಷಾ (49 ರನ್​, 26 ಎಸೆತ, 5 ಬೌಂಡರಿ, 4 ಸಿಕ್ಸರ್​) ಸ್ಫೋಟಕ ಆಟವಾಡಿ ರಹಾನೆ ಜತೆ ಮೊದಲ ವಿಕೆಟ್​ಗೆ 43 ಎಸೆತಗಳಲ್ಲಿ 83 ರನ್​ ಸಿಡಿಸುವ ಮೂಲಕ ಬೃಹತ್​ ಮೊತ್ತದ ಚೇಸಿಂಗ್​ಗೆ ಭದ್ರ ಅಡಿಪಾಯ ಹಾಕಿಕೊಟ್ಟರು. ನಂತರ ನಾಯಕ ಶ್ರೇಯಸ್​ ಅಯ್ಯರ್​ (5) ಮತ್ತು ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್​ ಯಾದವ್​ (9) ವೈಲ್ಯದ ನಡುವೆ ರಹಾನೆ ತಂಡಕ್ಕೆ ಆಸರೆಯಾಗಿ ನಿಂತರು. ಕೊನೆಯಲ್ಲಿ ಶಿವಂ ದುಬೆ (37*) ಮತ್ತು ಸೂರ್ಯಾಂಶ್​ ಶೆಡ್ಗೆ (36*) ಮುರಿಯದ 5ನೇ ವಿಕೆಟ್​ಗೆ 25 ಎಸೆತಗಳಲ್ಲೇ 67 ರನ್​ ದೋಚುವ ಮೂಲಕ ಮುಂಬೈ 19.2 ಓವರ್​ಗಳಲ್ಲೇ 4 ವಿಕೆಟ್​ಗೆ 224 ರನ್​ ಪೇರಿಸಿ ಜಯ ಸಾಧಿಸಿತು. ಕೊನೇ ಓವರ್​ನಲ್ಲಿ 6 ರನ್​ ಬೇಕಿದ್ದಾಗ ಸೂರ್ಯಾಂಶ್​ ಮೊದಲ 2 ಎಸೆತಗಳಲ್ಲೇ ಸಿಕ್ಸರ್​ ಸಹಿತ 8 ರನ್​ ಸಿಡಿಸಿ ಜಯ ತಂದರು.

ವೆಂಕಟೇಶ್​ ಆಲ್ರೌಂಡ್​ ಆಟ

ಐಪಿಎಲ್​ ಹರಾಜಿನಲ್ಲಿ 23.75 ಕೋಟಿ ರೂ.ಗೆ ಬಿಕರಿಯಾಗಿ ಗಮನಸೆಳೆದ ವೆಂಕಟೇಶ್​ ಅಯ್ಯರ್​ (38*ರನ್​, 33 ಎಸೆತ, 2 ಬೌಂಡರಿ, 2 ಸಿಕ್ಸರ್​, 23ಕ್ಕೆ 2 ವಿಕೆಟ್​) ಆಲ್ರೌಂಡ್​ ಆಟದ ಬಲದಿಂದ ಮಧ್ಯಪ್ರದೇಶ ತಂಡ ಆಲೂರು ಕೆಎಸ್​ಸಿಎ ಮೈದಾನದಲ್ಲಿ ನಡೆದ ದಿನದ ಮೊದಲ ಕ್ವಾರ್ಟರ್​ಫೈನಲ್​ನಲ್ಲಿ ಸೌರಾಷ್ಟ್ರ ವಿರುದ್ಧ 6 ವಿಕೆಟ್​ಗಳಿಂದ ಜಯಿಸಿತು. ಮೊದಲು ಬ್ಯಾಟಿಂಗ್​ ಮಾಡಿದ ಸೌರಾಷ್ಟ್ರ, ಚಿರಾಗ್​ ಜಾನಿ (80*) ಸಾಹಸದಿಂದ 7 ವಿಕೆಟ್​ಗೆ 173 ರನ್​ ಪೇರಿಸಿದರೆ, ಮಧ್ಯಪ್ರದೇಶ ತಂಡ 19.2 ಓವರ್​ಗಳಲ್ಲಿ 4 ವಿಕೆಟ್​ಗೆ 174 ರನ್​ ಗಳಿಸಿ ಗೆಲುವು ದಾಖಲಿಸಿತು.

ದೆಹಲಿಗೆ ಮಣಿದ ಯುಪಿ

ದೆಹಲಿ ತಂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕೊನೇ ಕ್ವಾರ್ಟರ್​ಫೈನಲ್​ನಲ್ಲಿ ಉತ್ತರ ಪ್ರದೇಶ ತಂಡವನ್ನು 19 ರನ್​ಗಳಿಂದ ಮಣಿಸಿ ಉಪಾಂತ್ಯಕ್ಕೇರಿತು. ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ದೆಹಲಿ ತಂಡ ಪ್ರಿಯಾಂಶ್​ ಆರ್ಯ (44), ಯಶ್​ ಧುಲ್​ (42) ಮತ್ತು ಅನುಜ್​ ರಾವತ್​ (73) ಉಪಯುಕ್ತ ಆಟದಿಂದ 3 ವಿಕೆಟ್​ಗೆ 193 ರನ್​ ಪೇರಿಸಿತು. ಪ್ರತಿಯಾಗಿ ಉತ್ತರ ಪ್ರದೇಶ ತಂಡ ಪ್ರಿಯಂ ಗಾರ್ಗ್​ (54) ಹೋರಾಟದ ನಡುವೆ 20 ಓವರ್​ಗಳಲ್ಲಿ 174 ರನ್​ಗಳಿಗೆ ಆಲೌಟ್​ ಆಗಿ ಶರಣಾಯಿತು. ರಿಂಕು ಸಿಂಗ್​ (10) ನಿರಾಸೆ ಮೂಡಿಸಿದರು.

ನಿತೀಶ್​-ಬಡೋನಿ ಜಟಾಪಟಿ

ದೆಹಲಿ ನಾಯಕ ಆಯುಷ್​ ಬಡೋನಿ ಮತ್ತು ದೆಹಲಿಯಿಂದ ಯುಪಿಗೆ ವಲಸೆ ಹೋಗಿರುವ ನಿತೀಶ್​ ರಾಣಾ ನಡುವೆ ಚಿನ್ನಸ್ವಾಮಿ ಮೈದಾನದಲ್ಲಿ ಮಾತಿನ ಚಕಮಕಿ ಏರ್ಪಟ್ಟಿತು. ಈ ಹಿಂದೆ ದೆಹಲಿ ತಂಡದಲ್ಲಿ ಜತೆಯಾಗಿ ಆಡುವಾಗಲೇ ಪರಸ್ಪರ ಕಿತ್ತಾಡಿಕೊಂಡಿದ್ದ ಆಟಗಾರರ ನಡುವಿನ ವೈಮನಸ್ಸು ಪಂದ್ಯದ 13ನೇ ಓವರ್​ ವೇಳೆ ಮರುಕಳಿಸಿತು. ಆಗ ಅಂಪೈರ್ಸ್​ ಇಬ್ಬರನ್ನೂ ಶಾಂತಗೊಳಿಸಿದರು.

ಶುಕ್ರವಾರ ಸೆಮಿಫೈನಲ್ಸ್​

ಆರಂಭ: ಬೆಳಗ್ಗೆ 11.00: ಬರೋಡ-ಮುಂಬೈ

ಆರಂಭ: ಸಂಜೆ 4.30: ಮಧ್ಯಪ್ರದೇಶ-ದೆಹಲಿ

ಎಲ್ಲಿ: ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು

ನೇರಪ್ರಸಾರ: ಜಿಯೋಸಿನಿಮಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net