

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ (98 ರನ್, 56 ಎಸೆತ, 11 ಬೌಂಡರಿ, 5 ಸಿಕ್ಸರ್) ಬಿರುಸಿನಾಟದಿಂದ ಮುಂಬೈ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ಗೇರಿದೆ. ಶ್ರೇಯಸ್ ಅಯ್ಯರ್ ಪಡೆ ಮೊದಲ ಸೆಮಿಫೈನಲ್ನಲ್ಲಿ ಬರೋಡ ವಿರುದ್ಧ 6 ವಿಕೆಟ್ಗಳಿಂದ ಗೆಲುವು ದಾಖಲಿಸಿತು. ಮುಂಬೈ ತಂಡ ಭಾನುವಾರ ಮಧ್ಯಪ್ರದೇಶ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಬರೋಡ, ಮುಂಬೈ ಬೌಲರ್ಗಳ ಸಂಟಿತ ದಾಳಿ ಎದುರು 7 ವಿಕೆಟ್ಗೆ 158 ರನ್ ಗಳಿಸಲಷ್ಟೇ ಶಕ್ತವಾಯಿತು. ಹಾರ್ದಿಕ್ ಪಾಂಡ್ಯ (5) ನಿರಾಸೆ ಮೂಡಿಸಿದರು. ಪ್ರತಿಯಾಗಿ ಮುಂಬೈ 17.2 ಓವರ್ಗಳಲ್ಲೇ 4 ವಿಕೆಟ್ಗೆ 164 ರನ್ ಗಳಿಸಿ ಜಯಿಸಿತು. ರಹಾನೆ ಮತ್ತು ನಾಯಕ ಶ್ರೇಯಸ್ ಅಯ್ಯರ್ (46) 2ನೇ ವಿಕೆಟ್ಗೆ 56 ಎಸೆತಗಳಲ್ಲಿ 88 ರನ್ ಸೇರಿಸಿ ಮುಂಬೈ ಗೆಲುವಿನ ಹಾದಿ ಸುಗಮಗೊಳಿಸಿದರು.
ಬರೋಡ: 7 ವಿಕೆಟ್ಗೆ 158 (ಶಾಶ್ವತ್ 33, ಕೃನಾಲ್ 30, ಹಾರ್ದಿಕ್, 5, ಶಿವಾಲಿಕ್ 36*, ಸೂರ್ಯಾಂಶ್ 11ಕ್ಕೆ 2, ಶಾರ್ದೂಲ್ 46ಕ್ಕೆ 1, ಶಿವಂ ದುಬೆ 34ಕ್ಕೆ 1, ತನುಷ್ 16ಕ್ಕೆ 1), ಮುಂಬೈ: 17.2 ಓವರ್ಗಳಲ್ಲಿ 4 ವಿಕೆಟ್ಗೆ 164 (ಪೃಥ್ವಿ ಷಾ 8, ರಹಾನೆ 98, ಶ್ರೇಯಸ್ 46, ಸೂರ್ಯಕುಮಾರ್ 1, ಹಾರ್ದಿಕ್ 29ಕ್ಕೆ 1, ಅತಿತ್ 39ಕ್ಕೆ 1). ಪಂದ್ಯಶ್ರೇಷ್ಠ: ಅಜಿಂಕ್ಯ ರಹಾನೆ.
13 ವರ್ಷಗಳ ನಂತರ ಪ್ರಶಸ್ತಿ ಸುತ್ತಿಗೆ ಎಂಪಿ
ಆರ್ಸಿಬಿ ಬ್ಯಾಟರ್ ರಜತ್ ಪಾಟೀದಾರ್ (66*ರನ್, 29 ಎಸೆತ, 4 ಬೌಂಡರಿ, 6 ಸಿಕ್ಸರ್) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ 2ನೇ ಸೆಮಿಫೈನಲ್ನಲ್ಲಿ ಗರ್ಜಿಸುವುದರೊಂದಿಗೆ ಮಧ್ಯಪ್ರದೇಶ ತಂಡ ದೆಹಲಿ ವಿರುದ್ಧ 7 ವಿಕೆಟ್ಗಳಿಂದ ಗೆದ್ದು 13 ವರ್ಷಗಳ ಬಳಿಕ ದೇಶೀಯ ಟಿ20 ಟೂರ್ನಿಯ ಫೈನಲ್ ಪ್ರವೇಶಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ದೆಹಲಿ 5 ವಿಕೆಟ್ಗೆ 146 ರನ್ ಪೇರಿಸಿತು. ಪ್ರತಿಯಾಗಿ ಮಧ್ಯಪ್ರದೇಶ 46 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ನಾಯಕ ರಜತ್ ಮುರಿಯದ 4ನೇ ವಿಕೆಟ್ಗೆ ಹರ್ಪ್ರೀತ್ ಸಿಂಗ್ (46*) ಜತೆ 57 ಎಸೆತಗಳಲ್ಲಿ 106 ರನ್ ಕಸಿದರು. ಇದರೊಂದಿಗೆ ಮಧ್ಯಪ್ರದೇಶ 15.4 ಓವರ್ಗಳಲ್ಲೇ 3 ವಿಕೆಟ್ಗೆ 152 ರನ್ ಗಳಿಸಿ ಜಯಿಸಿತು.
ನಾಳೆ ಫೈನಲ್
ಮುಂಬೈ-ಮಧ್ಯಪ್ರದೇಶ
ಆರಂಭ: ಸಂಜೆ 4.30
ಎಲ್ಲಿ: ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
ನೇರಪ್ರಸಾರ: ಜಿಯೋಸಿನಿಮಾ