

ಬೆಂಗಳೂರು: ಬಹುನಿರೀತ ಐಪಿಎಲ್ 17ನೇ ಆವೃತ್ತಿಯ ಆರಂಭಿಕ 17 ದಿನಗಳ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ಬಿಡುಗಡೆಗೊಳಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಉದ್ಘಾಟನಾ ಪಂದ್ಯದಲ್ಲೇ ಕಣಕ್ಕಿಳಿಯಲಿದೆ. ಆರ್ಸಿಬಿ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ಕಿಂಗ್ಸ್ ತಂಡವನ್ನು ಎದುರಿಸಲಿದೆ. ಮಾರ್ಚ್ 22ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಹಾಗಾದರೆ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳು ಆರ್ಸಿಬಿ ತಂಡದ ತವರಿನಲ್ಲಿ ಮೊದಲ ಪಂದ್ಯವನ್ನು ಸವಿಯುವುದು ಯಾವಾಗ ಗೊತ್ತೇ?
ಮಾ.25ಕ್ಕೆ ಬೆಂಗಳೂರಿನಲ್ಲಿ ಮೊದಲ ಪಂದ್ಯ
ಐಪಿಎಲ್-17ರಲ್ಲಿ ಮಾರ್ಚ್ 25ರಂದು ಬೆಂಗಳೂರಿನಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಆರ್ಸಿಬಿ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಆರಂಭಿಕ 21 ಪಂದ್ಯಗಳ ಪೈಕಿ ಬೆಂಗಳೂರಿನಲ್ಲಿ 3 ಪಂದ್ಯಗಳು ನಿಗದಿಯಾಗಿದ್ದು, ಮಾರ್ಚ್ 29ರಂದು ಕೆಕೆಆರ್ ಮತ್ತು ಏಪ್ರಿಲ್ 2ರಂದು ಲಖನೌ ವಿರುದ್ಧ ಪಂದ್ಯ ನಡೆಯಲಿವೆ. ಈ ಮೊದಲ ಹಂತದ ವೇಳಾಪಟ್ಟಿಯಲ್ಲಿ ಆರ್ಸಿಬಿ 5 ಪಂದ್ಯಗಳನ್ನು ಆಡಲಿದೆ. ಆರ್ಸಿಬಿ ತಂಡ ತವರಿನಲ್ಲಿ ಇನ್ನೂ 4 ಲೀಗ್ ಪಂದ್ಯಗಳನ್ನು ಆಡಲಿದ್ದು ಅದರ ವೇಳಾಪಟ್ಟಿ, ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಪ್ರಕಟಗೊಳ್ಳಲಿದೆ.
ಮೊದಲ ಪಂದ್ಯ ಮಾತ್ರ ರಾತ್ರಿ 8 ಗಂಟೆಗೆ ಆರಂಭ
ಐಪಿಎಲ್ನಲ್ಲಿ ಈ ಸಲವೂ ಎಲ್ಲ ಪಂದ್ಯಗಳು ರಾತ್ರಿ 7.30ರಿಂದ ನಡೆಯಲಿದ್ದು, 2 ಪಂದ್ಯಗಳಿದ್ದಾಗ ಮೊದಲ ಪಂದ್ಯ ಮಧ್ಯಾಹ್ನ 3.30ರಿಂದ ನಡೆಯಲಿದೆ. ಆದರೆ ಟೂರ್ನಿಯ ಮೊದಲ ಪಂದ್ಯ ಮಾತ್ರ ರಾತ್ರಿ 8 ಗಂಟೆಗೆ ಶುರುವಾಗಲಿದೆ. ಪಂದ್ಯಕ್ಕೆ ಮುನ್ನ ನಡೆಯಲಿರುವ ಅದ್ದೂರಿ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.
ವೈಜಾಗ್ನಲ್ಲಿ ಡೆಲ್ಲಿ ತವರಿನ ಪಂದ್ಯ
ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಮಾರ್ಚ್ 17ರವರೆಗೂ ಡಬ್ಲ್ಯುಪಿಎಲ್ ಪಂದ್ಯಗಳ ಆತಿಥ್ಯ ವಹಿಸಿಕೊಳ್ಳಲಿದೆ. ಹೀಗಾಗಿ ನಂತರದಲ್ಲಿ ಕ್ರೀಡಾಂಗಣವನ್ನು ಐಪಿಎಲ್ಗೆ ಸಜ್ಜುಗೊಳಿಸಲು ಸಮಯ ಬೇಕಾಗಿರುವುದರಿಂದ, ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಆರಂಭಿಕ 2 ಲೀಗ್ ಪಂದ್ಯಗಳನ್ನು ಆಂಧ್ರದ ವಿಶಾಖಪಟ್ಟಣದಲ್ಲಿ ಆಡಲಿದೆ. ಡೆಲ್ಲಿ ತಂಡ ತನ್ನ ತವರಿನ ಕೊನೇ 5 ಲೀಗ್ ಪಂದ್ಯಗಳನ್ನು ಜೇಟ್ಲಿ ಸ್ಟೇಡಿಯಂನಲ್ಲೇ ಆಡುವ ನಿರೀಕ್ಷೆ ಇದೆ.