ಗೌತಿ-ಧೋನಿ-ವಿರಾಟ್​! ಬೂದಿ ಮುಚ್ಚಿದ ಮನಸ್ತಾಪಕ್ಕಿಲ್ಲ ಕೊನೆ? ಕಡೆಗೂ ಅಸಲಿ ಸಂಗತಿ ಬಿಚ್ಚಿಟ್ಟ ಕೋಚ್​ | Sanjay Bharadwaj

ವಿಜಯವಾಣಿ - 2025-02-01T184249.626
Published on

Sanjay Bharadwaj: ಕ್ರಿಕೆಟ್​ ಜಗತ್ತಿನಲ್ಲಿ ಟೀಮ್ ಇಂಡಿಯಾದ ಈ ಮೂವರು ದಿಗ್ಗಜರು ಕ್ರಿಕೆಟ್ ಅಭಿಮಾನಿಗಳ ಅಚ್ಚುಮೆಚ್ಚಿನ ಆಟಗಾರರು. ಕೇವಲ ಕ್ರೀಡಗೆ ಮಾತ್ರ ಸೀಮತವಾಗದ ಮೂವರು, ತಮ್ಮ ಮಾತು, ನಡೆ-ನುಡಿಗೆ ಸಿಕ್ಕಾಪಟ್ಟೆ ಜನಪ್ರಿಯತೆ ಹಾಗೂ ಅಪಾರ ಪ್ರೀತಿಯನ್ನು ಸಂಪಾದಿಸಿದ್ದಾರೆ. ಪ್ರಸ್ತುತ ಭಾರತ ತಂಡದ ಹೆಡ್ ಕೋಚ್ ಆಗಿ ಗೌತಮ್ ಗಂಭೀರ್​ ಕಾರ್ಯನಿರ್ವಹಿಸುತ್ತಿದ್ದರೆ, ವಿರಾಟ್ ಕೊಹ್ಲಿ ತಂಡದಲ್ಲಿ ಮುಂದುವರಿದಿದ್ದಾರೆ. ಇನ್ನೂ ಕ್ರಿಕೆಟ್​ನ ದಂತಕಥೆಯಾಗಿ ಉಳಿದಿರುವ ಮಹೇಂದ್ರ ಸಿಂಗ್ ಧೋನಿ, ವರ್ಷಕ್ಕೊಮ್ಮೆ ಬರುವ ಐಪಿಎಲ್​ನಲ್ಲಿ ತಮ್ಮ ಅಭಿಮಾನಿಗಳ ಮುಂದೆ ಹಾಜರಾಗುತ್ತಾರೆ. ಮೂವರಿಗೂ ಅವರದ್ದೇ ಆದ ಫ್ಯಾನ್ಸ್​ಗಳಿದ್ದರೂ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ ಎಂಬ ಮಾತು ಇಂದಿಗೂ ಕ್ರಿಕೆಟ್​ ಪ್ರಿಯರಲ್ಲಿ ಕಾಡುತ್ತಿದೆ. ​

ಧೋನಿಯನ್ನು ಕಂಡರೆ ಗಂಭೀರ್​ಗೆ ಇಷ್ಟವಿಲ್ಲ. ಗಂಭೀರ್​ ನೋಡಿದ್ರೆ ಎಂ.ಎಸ್​. ಧೋನಿ ಸ್ಪಂದಿಸುವುದಿಲ್ಲ. ಇದೇ ವಿಷಯ ವಿರಾಟ್​ರಲ್ಲೂ ಏಕಿದೆ? ಇಂದಿಗೂ ಇವರ ಮಧ್ಯೆ ಬೂದಿ ಮುಚ್ಚಿದ ಕೆಂಡದಂತಿರುವ ಮನಸ್ತಾಪ ಏಕೆ ಹೋಗಿಲ್ಲ? ಇದರ ಹಿಂದಿರುವ ಕಾರಣವೇನು? ಯಾವ ವಿಷಯಕ್ಕಾಗಿ ಇವರೊಳಗಿರುವ ಕಿಚ್ಚು ಇನ್ನೂ ಆರಿಲ್ಲ ಎಂಬ ಪ್ರಶ್ನೆಗಳು ಅವರ ಅಭಿಮಾನಿಗಳನ್ನು ಆಗಾಗ್ಗೆ ಕಾಡುತ್ತಿದೆ. ಈ ಕುರಿತು ಜಾಲತಾಣಗಳಲ್ಲಿಯೂ ಒಂದಷ್ಟು ಪ್ರಶ್ನೆಗಳು ಚರ್ಚೆಗೆ ಗ್ರಾಸವಾಗುತ್ತವೆ. ಸದ್ಯ ಈ ಎಲ್ಲಾ ಗೊಂದಲಗಳಿಗೆ ಕಡೆಗೂ ಗೌತಿ ಬಾಲ್ಯದ ಕೋಚ್​ರಿಂದ ತೆರೆ ಬಿದ್ದಿದೆ.

ತಮ್ಮ ಹಠಮಾರಿ ವ್ಯಕ್ತಿತ್ವದಿಂದಲೇ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುವ ಗಂಭೀರ್, ಸಾಕಷ್ಟು ಟ್ರೋಲ್, ಟೀಕೆಗಳನ್ನು ಎದುರಿಸುವಂತೆ ಪರಿಸ್ಥಿತಿಗಳು ನಿರ್ಮಾಣವಾಗುತ್ತವೆ. ಧೋನಿ ಮತ್ತು ವಿರಾಟ್​ ವಿಚಾರದಲ್ಲಿ ಗಂಭೀರ್​ ನಿಜಕ್ಕೂ ಬೇಸರ, ಮನಸ್ತಾಪ, ದ್ವೇಷ ಇಟ್ಟುಕೊಂಡಿದ್ದಾರೆ? ಎಂಬ ಅಭಿಮಾನಿಗಳ ಪ್ರಶ್ನೆಗೆ ಇದೀಗ ಗಂಭೀರ್ ಅವರ ಬಾಲ್ಯದ ಕ್ರಿಕೆಟ್ ಕೋಚ್​ ಸಂಜಯ್ ಭಾರದ್ವಾಜ್ ಪ್ರತಿಕ್ರಿಯಿಸಿದ್ದಾರೆ. "ಗಂಭೀರ್ ಎಷ್ಟು ದೇಶಪ್ರೇಮಿ ಎಂಬುದು ಎಲ್ಲರಿಗೂ ತಿಳಿದಿದೆ. ಭಾರತಕ್ಕಾಗಿ ಆಡುವುದರಿಂದ ಹಿಡಿದು, ರಾಜಕೀಯಕ್ಕೆ ಸೇರುವವರೆಗೆ ಮತ್ತು ವಿಭಿನ್ನ ಪಾತ್ರದಲ್ಲಿ ರಾಷ್ಟ್ರೀಯ ಕರ್ತವ್ಯಕ್ಕೆ ಮರಳುವವರೆಗೆ ಆತ ತನ್ನನ್ನು ತಾನು ಗುರುತಿಸಿಕೊಂಡಿದ್ದಾನೆ" ಎಂದರು.

ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕೋಚ್​, "ಗಂಭೀರ್ ಹಲವು ಆಯಾಮಗಳಲ್ಲಿ ಭಾರತಕ್ಕಾಗಿ ನಿಂತಿದ್ದಾರೆ ಮತ್ತು ಪ್ರತಿದಿನವೂ ಹಾಗೆಯೇ ಮುಂದುವರೆದಿದ್ದಾರೆ. ಇಲ್ಲಿ ಯಾವುದೇ ದ್ವೇಷಗಳಿಗೆ ಅವಕಾಶವಿಲ್ಲ. ಗಂಭೀರ್ ಧೋನಿಯನ್ನು ಇಷ್ಟಪಡುವುದಿಲ್ಲ. ಧೋನಿ ಗಂಭೀರ್​ರನ್ನು ಇಷ್ಟಪಡುವುದಿಲ್ಲ ಇದೆಲ್ಲವೂ ಶುದ್ಧ ಸುಳ್ಳು. ಮೊದಲಿಗೆ ಗೌತಿ ಯಾರನ್ನೂ ದ್ವೇಷಿಸುವುದಿಲ್ಲ. ಇದು ಸತ್ಯ. ಗಂಭೀರ್ ಧೋನಿಯನ್ನು ಇಷ್ಟಪಡುವುದಿಲ್ಲ ಎಂದು ಜನರು ಹೇಳುತ್ತಾರೆ. ವಿರಾಟ್ ಕೊಹ್ಲಿ ಕೂಡ. ಇಲ್ಲಿ ಗಂಭೀರ್​ ಕೆಲವು ಮಾತು ಮತ್ತು ನಡೆಯನ್ನು ಇಷ್ಟಪಡುವುದಿಲ್ಲವೇ ಹೊರತು ವ್ಯಕ್ತಿಯನ್ನಲ್ಲ. ಗೌತಮ್ ಗಂಭೀರ್ ಯಾರ ಮೇಲೂ ವೈಯಕ್ತಿಕ ದ್ವೇಷವನ್ನು ಹೊಂದಿಲ್ಲ" ಎಂದರು.

"ಧೋನಿಯ ನಂತರ, ಗಂಭೀರ್ ಅವರೊಂದಿಗೆ ಬಹಳ ಹಿಂದಿನಿಂದಲೂ ಸಂಬಂಧ ಹೊಂದಿರುವ ಒಂದು ಹೆಸರು ಕೊಹ್ಲಿ. ಕೊಹ್ಲಿ ಮತ್ತು ಗಂಭೀರ್ ಬಹಳ ಹಿಂದಿನಿಂದಲೂ ಒಟ್ಟಿಗೆ ಆಡಿದವರು. ಇಬ್ಬರೂ ರಣಜಿ ಟ್ರೋಫಿಯಲ್ಲಿ ಒಂದೇ ತಂಡವನ್ನು ಪ್ರತಿನಿಧಿಸುತ್ತಿದ್ದರು ಮತ್ತು ಭಾರತ ತಂಡಕ್ಕೂ ಸಹ. 2009ರಲ್ಲಿ, ಕೊಹ್ಲಿ ಭಾರತಕ್ಕಾಗಿ ತಮ್ಮ ಚೊಚ್ಚಲ ಶತಕವನ್ನು ಗಳಿಸಿದಾಗ, ಗಂಭೀರ್ ತಮ್ಮ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೊಹ್ಲಿಗೆ ನೀಡಿದ್ದರು. ಆದಾಗ್ಯೂ, ವಿಶ್ವಕಪ್ ಅನ್ನು ಒಟ್ಟಿಗೆ ಗೆದ್ದ ನಂತರ, ಕೊಹ್ಲಿ ಮತ್ತು ಗಂಭೀರ್ 2013ರ ಐಪಿಎಲ್ ಸಮಯದಲ್ಲಿ, ಪಂದ್ಯದ ವಿಚಾರಕ್ಕೆ ಜಟಾಪಟಿ ಮಾಡಿಕೊಂಡಿದ್ದರು. 10 ವರ್ಷಗಳ ನಂತರ, ಮತ್ತೊಮ್ಮೆ ಐಪಿಎಲ್ 2023ರ ಸಮಯದಲ್ಲಿ ನವೀನ್ ಉಲ್ ಹಕ್ ವಿಷಯಕ್ಕೆ ಜಗಳವಾಡಿದ್ದರು" ಎಂದು ಹೇಳಿದರು.

"ಇಲ್ಲಿ ವಿರಾಟ್​ ಮೇಲೆ ಗಂಭೀರ್​ಗೆ ಕೋಪ ಬಂದಿದ್ದು ತನ್ನ ಕುಟುಂಬದಂತೆ ಇರುವ ತಂಡದವರ ವಿರುದ್ಧ ಮಾತನಾಡಿದ ರೀತಿಗೆ. ಆ ಕ್ಷಣದಲ್ಲಿ ಕೊಹ್ಲಿ ಜಾಗದಲ್ಲಿ ಯಾರೇ ಇದ್ದಿದ್ದರೂ ಗೌತಿ ಹಾಗೆಯೇ ಮಾಡುತ್ತಿದ್ದರು. ತಾನೊಬ್ಬ ಹಿರಿಯ ಆಟಗಾರನಾಗಿ ತಂಡದ ಜವಾಬ್ದಾರಿ ಹೊತ್ತಿರುವಾಗ ತಮ್ಮ ತಂಡದ ಕ್ರಿಕೆಟಿಗನಿಗೆ ಆ ರೀತಿ ಬೈಗುಳ ನೀಡಿದ್ದು ಗೌತಮ್​ಗೆ ಸರಿ ಅನಿಸಲಿಲ್ಲ. ಅವರಿಬ್ಬರ ನಡುವೆ ಅಂತಹ ಮನಸ್ತಾಪ, ಮುನಿಸು ಯಾವುದೂ ಇಲ್ಲ" ಎಂದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net