ರೋಹಿತ್​-ಕೊಹ್ಲಿಗೆ ಏಕೆ ವಿಶ್ರಾಂತಿ ಕೊಟ್ಟಿದ್ದೀರಿ? ಆ ಸಮಸ್ಯೆ ಬಂದ್ರೆ ಯಾರು ಹೊಣೆ? ಮಾಜಿ ಕ್ರಿಕೆಟಿಗನಿಂದ ಟೀಕೆ

Virat Rohit
Published on

ನವದೆಹಲಿ: ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ ಹಾಗೂ ಸ್ಟಾರ್​ ಬ್ಯಾಟ್ಸ್​ಮನ್​ ವಿರಾಟ್ ಕೊಹ್ಲಿ ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಕುಟುಂಬದೊಂದಿಗೆ ರಜೆಯ ಮೋಜು ಮಾಡುತ್ತಿದ್ದಾರೆ. ಭಾರತ ಮುಂದಿನ ತಿಂಗಳು ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ. ಅಲ್ಲಿಯವರೆಗೆ ಬೇರೆ ಯಾವುದೇ ಸರಣಿ ಇಲ್ಲದ ಕಾರಣ ರೋಹಿತ್​-ವಿರಾಟ್​ ಜೋಡಿ ವಿಶ್ರಾಂತಿ ಪಡೆಯುತ್ತಿದೆ.

ಶೀಘ್ರದಲ್ಲೇ ದುಲೀಪ್ ಟ್ರೋಫಿ-2024 ಆರಂಭವಾಗಲಿದೆ. ಕೊಹ್ಲಿ, ರೋಹಿತ್​ ಮತ್ತು ಬುಮ್ರಾರನ್ನು ಬಿಟ್ಟರೆ ಉಳಿದೆಲ್ಲ ಕ್ರಿಕೆಟಿಗರು ಆಡಲಿದ್ದಾರೆ. ಸುದೀರ್ಘ ಟೆಸ್ಟ್ ಸರಣಿ ಎದುರಾಗುವುದರಿಂದ ಬಿಸಿಸಿಐ ದುಲೀಪ್ ಟ್ರೋಫಿಯಲ್ಲಿ ಈ ಮೂವರು ಸ್ಟಾರ್‌ಗಳನ್ನು ಆಡಿಸುತ್ತಿಲ್ಲ. ಗಾಯಗೊಂಡರೆ ತೊಂದರೆಯಾಗುತ್ತದೆ ಎಂದು ವಿಶ್ರಾಂತಿಯನ್ನು ವಿಸ್ತರಿಸಲಾಗಿದೆ. ಆದರೆ, ಈ ಕ್ರಮವನ್ನು ಲೆಜೆಂಡರಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಟೀಕಿಸಿದ್ದಾರೆ.

ರೋಹಿತ್-ಕೊಹ್ಲಿಗೆ ವಿಶ್ರಾಂತಿ ಬೇಕೇ? ಅವರ ವಿಶ್ರಾಂತಿಯನ್ನು ವಿಸ್ತರಿಸುವುದರಿಂದ ಆಗುವ ಸಮಸ್ಯೆಗಳಿಗೆ ಯಾರು ಹೊಣೆ? ದುಲೀಪ್ ಟ್ರೋಫಿ ತಂಡಕ್ಕೆ ಅವರನ್ನು ಏಕೆ ಆಯ್ಕೆ ಮಾಡಿಲ್ಲ ಎಂದು ಗವಾಸ್ಕರ್ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಬುಮ್ರಾ ಅವರು ವೇಗದ ಬೌಲರ್ ಆಗಿರುವುದರಿಂದ ಮತ್ತು ಗಾಯಕ್ಕೆ ಗುರಿಯಾಗಿರುವುದರಿಂದ ಅವರಿಗೆ ವಿಶ್ರಾಂತಿ ನೀಡುವುದರಲ್ಲಿ ಅರ್ಥವಿದೆ. ಆದರೆ, ಬ್ಯಾಟ್ಸ್‌ಮನ್‌ಗಳಿಗೆ ಇಷ್ಟೊಂದು ವಿಶ್ರಾಂತಿಯ ಅವಶ್ಯಕತೆ ಇದೆಯಾ? ಎಂದು ಪ್ರಶ್ನಿಸಿರುವ ಗವಾಸ್ಕರ್​, 35 ವರ್ಷ ಮೇಲ್ಪಟ್ಟ ಯಾವುದೇ ಆಟಗಾರ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಸುದೀರ್ಘ ವಿರಾಮದ ನಂತರ ಮತ್ತೆ ಕ್ರೀಸ್​ಗೆ ಮರಳಿದರೆ ಸ್ನಾಯು ಸಮಸ್ಯೆಗಳ ಅಪಾಯವಿದೆ ಎಂದು ಹೇಳಿದ್ದಾರೆ.

ಫಿಟ್ ಆಗಿರಬೇಕೆಂಬ ಉದ್ದೇಶದಿಂದ ರೋಹಿತ್-ಕೊಹ್ಲಿಗೆ ಹೆಚ್ಚಿನ ವಿಶ್ರಾಂತಿ ನೀಡಿರುವುದು ಸರಿಯಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ. ವಿಶ್ರಾಂತಿ ಪಡೆದಷ್ಟೂ ಸಮಸ್ಯೆ ಹೆಚ್ಚುತ್ತದೆ. ಸುದೀರ್ಘ ಗ್ಯಾಪ್​ ನಂತರ ಆಡಿದರೆ ಸಮಸ್ಯೆಗಳು ತಪ್ಪಿದಲ್ಲ, ಹಾಗಾಗಿ ಅವರನ್ನು ಆಟದ ಹತ್ತಿರ ಇಟ್ಟುಕೊಳ್ಳುವುದು ಉತ್ತಮ ಎಂದು ಗವಾಸ್ಕರ್​ ಸಲಹೆಯನ್ನು ನೀಡಿದ್ದಾರೆ.

ಟಿ20 ವಿಶ್ವಕಪ್ ನಂತರ ವಿರಾಟ್​-ರೋಹಿತ್​ ಜೋಡಿ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು, ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೂಲಕ ಮರುಪ್ರವೇಶ ಮಾಡಿದರು. 37 ವರ್ಷ ವಯಸ್ಸಿನ ರೋಹಿತ್​, ಈ ಸರಣಿಯಲ್ಲಿ 58, 64 ಮತ್ತು 35 ರನ್ ಗಳಿಸಿದರು. ಆದರೆ, 35ರ ಹರೆಯದ ಕೊಹ್ಲಿ ಭಾರಿ ನಿರಾಸೆ ಮೂಡಿಸಿದರು. ಅವರು ಒಟ್ಟು 58 ರನ್ ಗಳಿಸಿದರು. ಇಬ್ಬರು ಮತ್ತೆ ಕ್ರೀಸ್​ಗೆ ಬರಲು ನಾವು ಸೆಪ್ಟೆಂಬರ್ 19ರವರೆಗೆ ಕಾಯಬೇಕು. ಅಂದು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರೋಹಿತ್-ವಿರಾಟ್ ಕಣಕ್ಕಿಳಿಯಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net