ಜಗತ್ತಿನ ಬಹುತೇಕ ಜನರ ದಿನ ಆರಂಭವಾಗುವುದೇ ಟೀ ಅಥವಾ ಕಾಫಿಯಿಂದ. ದಿನಕ್ಕೆ ಒಂದು ಕಪ್ ಕಾಫಿ-ಟೀ ಕುಡಿಯಲಿಲ್ಲ ಅಂದ್ರೆ ಆ ದಿನ ಏನೋ ಮಿಸ್ ಮಾಡಿಕೊಂಡಂತೆ ಜನರು ಚಡಪಡಿಸುತ್ತಾರೆ. ಒಂದು ಹೊತ್ತು ಊಟ ಬೇಕಾದರೂ ಬಿಡುತ್ತೇನೆ ಆದರೆ, ಟೀ-ಕಾಫಿ ಬಿಡುವುದಿಲ್ಲ ಎಂದು ಹೇಳುವ ಜನರು ಕೂಡ ನಮ್ಮ ನಡುವೆ ಇದ್ದಾರೆ. ದಿನಕ್ಕೊಂದು ಕಾಫಿ-ಟೀ ಕುಡಿಯದಿದ್ದರೆ ಸುಸ್ತು, ಚಡಪಡಿಕೆ ಹಾಗೂ ತಲೆ ನೋವು ಅನುಭವಿಸುವವರೂ ಇದ್ದಾರೆ. ಅಷ್ಟೊಂದು ಜನಪ್ರಿಯವಾಗಿದೆ ಈ ಪಾನೀಯ.
ಅನೇಕರು ನಿಯಮಿತವಾಗಿ ಕಾಫಿ ಕುಡಿಯುತ್ತಾರೆ. ಕಾಫಿ ಕುಡಿಯುವುದರಿಂದ ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಆದರೆ, ಅತಿಯಾಗಿ ಕಾಫಿ ಸೇವಿಸುವುದರಿಂದ ಹಲವಾರು ಸಮಸ್ಯೆಗಳು ಸಹ ಎದುರಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು.
ಆರೋಗ್ಯ ತಜ್ಞರ ಪ್ರಕಾರ, ದಿನಕ್ಕೆ ನಾಲ್ಕು ಕಪ್ ಕಾಫಿ ಸೇವಿಸುವುದು ಸುರಕ್ಷಿತ. ಆದರೆ, ಹೆಚ್ಚು ಕೆಫೀನ್ ಸೇವಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳಲ್ಲದೆ ಇತರ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಬಿಪಿ ಹೆಚ್ಚುವುದಷ್ಟೇ ಅಲ್ಲ, ಹೃದಯಾಘಾತ, ಪಾರ್ಶ್ವವಾಯು ಮುಂತಾದ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಹೀಗಾಗಿ ಕಾಫಿ ಸೇವಿಸುವಾಗ ಎಷ್ಟು ಪ್ರಮಾಣದಲ್ಲಿ ಸೇವಿಸಿದರೆ ಸುರಕ್ಷಿತ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ತಜ್ಞರ ಪ್ರಕಾರ ದಿನಕ್ಕೆ 400 ಮಿಲಿಗ್ರಾಂ ಕೆಫೀನ್ ಸೇವನೆ ಉತ್ತಮ. ಆದರೆ, ಅದಕ್ಕಿಂತ ಹೆಚ್ಚಿಗೆ ತೆಗೆದುಕೊಂಡರೆ ಖಂಡಿತ ಹೃದಯದ ಸಮಸ್ಯೆಗಳು ಬರುತ್ತವೆ. ಅಧಿಕ ರಕ್ತದೊತ್ತಡ ಉಂಟಾಗುತ್ತದೆ. ಈ ಬಗ್ಗೆ ತಿಳಿಯಲು 92 ಜನರ ಮೇಲೆ ಸಂಶೋಧನೆ ನಡೆಸಲಾಗಿದೆ. ಹೆಚ್ಚಿನ ಪ್ರಮಾಣದ ಕಾಫಿ ಸೇವನೆಯು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಸಂಶೋಧನೆಯಲ್ಲಿ ಕಂಡುಬಂದಿದೆ.
ಹೆಚ್ಚು ಕಾಫಿ ಸೇವನೆ ಮಾಡಿದವರಲ್ಲಿ ಅಧಿಕ ರಕ್ತದೊತ್ತಡದ ಜೊತೆಗೆ ಹೃದಯ ಸಂಬಂಧಿ ಸಮಸ್ಯೆ ಇರುವುದು ಕಂಡುಬಂದಿದೆ. ಹಾಗಾಗಿ ಮಿತಿ ಮೀರಿ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಅಧಿಕ ರಕ್ತದೊತ್ತಡವು ಪಾರ್ಶ್ವವಾಯು, ಬುದ್ಧಿಮಾಂದ್ಯತೆ, ಹೃದಯ ಸಮಸ್ಯೆಗಳು ಮತ್ತು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು. ಹಾಗಾಗಿ ನಾಲ್ಕೈದು ಕಪ್ ಕಾಫಿ ಮಾತ್ರ ತೆಗೆದುಕೊಳ್ಳಿ. ಅದಕ್ಕಿಂತ ಹೆಚ್ಚು ತೆಗೆದುಕೊಂಡಲ್ಲಿ ಸಮಸ್ಯೆಗಳು ತಪ್ಪಿದ್ದಲ್ಲ ಎಂಬುದನ್ನು ನೆನಪಿನಲ್ಲಿಡಿ.
ಅಂದಹಾಗೆ ಕಾಫಿಯು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ ಮತ್ತು ಗಮನವನ್ನು ಸುಧಾರಿಸುತ್ತದೆ ಎಂಬುದು ನಿಜವಾಗಿದ್ದರೂ, ಅತಿಯಾದ ಸೇವನೆಯು ನಿದ್ರಾಹೀನತೆ, ಆತಂಕ ಮತ್ತು ಹೆಚ್ಚಿದ ಹೃದಯ ಬಡಿತದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದಾಗ್ಯೂ, ಕಾಫಿಯು ಉತ್ಕರ್ಷಣ ನಿರೋಧಕಗಳನ್ನು ಸಹ ಒಳಗೊಂಡಿದೆ. ಇದು ಆಲ್ಝೈಮರ್ ಮತ್ತು ಪಾರ್ಕಿನ್ಸನ್ನಂತಹ ಕೆಲವು ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಪಾರ್ಕಿನ್ಸನ್ ಕಾಯಿಲೆಗೆ ಮುಖ್ಯ ಕಾರಣವೆಂದರೆ ಕಡಿಮೆ ಮಟ್ಟದ ಡೋಪಮೈನ್. ಅಧ್ಯಯನಗಳ ಪ್ರಕಾರ ಕಾಫಿ ಕುಡಿಯುವುದರಿಂದ ಡೋಪಮೈನ್ ತಯಾರಿಸುವ ಮೆದುಳಿನ ಕೋಶಗಳನ್ನು ರಕ್ಷಿಸುತ್ತದೆ.
ಕಾಫಿಯು ರಕ್ತದಲ್ಲಿನ ಸಕ್ಕರೆಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುತ್ತದೆ. ಮೆದುಳಿನ ಕೋಶಗಳನ್ನು ರಕ್ಷಿಸುತ್ತದೆ. ಉರಿಯೂತವನ್ನು ಕಡಿಮೆ ಮಾಡುತ್ತದೆ ಹಾಗೂ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಆದರೆ, ಕಾಫಿ ಕುಡಿಯುವುದರಿಂದ ಯಕೃತ್ತಿನ ಕಾಯಿಲೆ, ಹೃದ್ರೋಗ, ಕೆಲವು ಮಿದುಳಿನ ಕಾಯಿಲೆಗಳು, ಟೈಪ್ 2 ಡಯಾಬಿಟಿಸ್ಗೆ ಕಡಿಮೆ ಅಪಾಯವಿದೆ. ಹೀಗಾಗಿ ಕಾಫಿ ರುಚಿಗೆ ನೀವು ಫಿದಾ ಆಗಿದ್ದರೆ, ಅದನ್ನು ಮಿತವಾಗಿ ಸೇವಿಸಿದಾಗ ಅದು ಆರೋಗ್ಯಕರ ಜೀವನಶೈಲಿಯ ಭಾಗವಾಗುತ್ತದೆ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಅಬ್ಬಾ… ವೀಳ್ಯದೆಲೆ ಕುದಿಸಿದ ನೀರು ಕುಡಿದ್ರೆ ಇಷ್ಟೆಲ್ಲಾ ಲಾಭಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….
ಊಟದಲ್ಲಿ ಬದನೆಕಾಯಿ ಕಂಡೊಡನೆ ಪಕ್ಕಕ್ಕಿಡುತ್ತೀರಾ? ಈ ವಿಚಾರ ತಿಳಿದ್ರೆ ಇನ್ನೆಂದೂ ಮಿಸ್ ಮಾಡಲ್ಲ!