ಚೆಸ್​ ವಿಶ್ವಕಪ್​ನಲ್ಲಿ ದಿವ್ಯಾ ದೇಶ್​ಮುಖ್​ ಸೋಲಿನ ಆರಂಭ

web chess wc1
Published on

ಪಣಜಿ: ಮಹಿಳಾ ಚೆಸ್​ ವಿಶ್ವಕಪ್​ ವಿಜೇತೆ ದಿವ್ಯಾ ದೇಶ್​ಮುಖ್​, 11ನೇ ಆವೃತ್ತಿಯ ಫಿಡೆ ಚೆಸ್​ ವಿಶ್ವಕಪ್​ ಟೂರ್ನಿಯ ಮೊದಲ ಸುತ್ತಿನ ಮೊದಲ ಪಂದ್ಯದಲ್ಲಿ ಗ್ರೀಕ್​ನ ಸ್ಟಾಮಾಟಿಸ್​ ಕೌರ್ಕೌಲೋಸ್​ ಆರ್ಡಿಟಿಸ್​ ವಿರುದ್ಧ ಸೋಲು ಕಂಡಿದ್ದಾರೆ. ಭಾರತದ ಗ್ರಾಂಡ್​ಮಾಸ್ಟರ್​ಗಳಾದ ರೌನಕ್​ ಸಾಧ್ವನಿ ಮತ್ತು ಎಸ್​ಎಲ್​ ನಾರಾಯಣನ್​ ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸಿದರೆ, ಸೂರ್ಯಶೇಖರ್​ ಗಂಗೂಲಿ, ವಿ. ಪ್ರಣವ್​, ಪಿ. ಇನಿಯನ್​, ಎಂ. ಪ್ರಾಣೇಶ್​ ಗೆಲುವಿನ ಆರಂಭ ಕಂಡರು.

ಟೂರ್ನಿಯಲ್ಲಿ ಆಡುತ್ತಿರುವ ಏಕೈಕ ಮಹಿಳೆಯಾಗಿರುವ 19 ವರ್ಷದ ದಿವ್ಯಾ ಇನ್ನು ಭಾನುವಾರ ನಡೆಯಲಿರುವ 2ನೇ ಪಂದ್ಯದಲ್ಲಿ ಗೆದ್ದರಷ್ಟೇ ಮೊದಲ ಸುತ್ತಿನಲ್ಲೇ ಹೊರಬೀಳುವ ಅಪಾಯದಿಂದ ಪಾರಾಗಲಿದ್ದಾರೆ. ದಿವ್ಯಾ ಗೆದ್ದರೆ ಸೋಮವಾರ ಟೈಬ್ರೇಕರ್​ ನಡೆಯಲಿದೆ.

ವಿಶ್ವ ಚಾಂಪಿಯನ್​ ಡಿ. ಗುಕೇಶ್​, ಆರ್​. ಪ್ರಜ್ಞಾನಂದ, ಅರ್ಜುನ್​ ಇರಿಗೈಸಿ, ವಿದಿತ್​ ಗುಜರಾತಿ, ಪಿ. ಹರಿಕೃಷ್ಣ ಸಹಿತ ಆತಿಥೇಯ ಭಾರತದ ಪ್ರಮುಖ ಆಟಗಾರರು 17.75 ಕೋಟಿ ರೂ. ಬಹುಮಾನ ಮೊತ್ತದ ಟೂರ್ನಿಯ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ. 206 ಆಟಗಾರರು ಪಾಲ್ಗೊಂಡಿರುವ ಟೂರ್ನಿಯ ಅಗ್ರ ಮೂವರು ಆಟಗಾರರು ಮುಂದಿನ ವರ್ಷದ ಕ್ಯಾಂಡಿಡೇಟ್ಸ್​ ಟೂರ್ನಿಗೆ ಅರ್ಹತೆ ಗಳಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net