

ಬೆಂಗಳೂರು: ಮುಂಬರುವ ಏಕದಿನ ಏಷ್ಯಾಕಪ್ ಮತ್ತು ವಿಶ್ವಕಪ್ ಟೂರ್ನಿಗಳೊಂದಿಗೆ ಮೂರು ತಿಂಗಳ ಕಾಲ ಭರ್ಜರಿ ಕ್ರಿಕೆಟ್ ಮನರಂಜನೆಗೆ ವೇದಿಕೆ ಸಜ್ಜಾಗುತ್ತಿದೆ. ಈ ನಡುವೆ ಕ್ರಿಕೆಟ್ ಪ್ರೇಮಿಗಳು ಎಲ್ಲ ಪಂದ್ಯಗಳನ್ನು ಮೊಬೈಲ್ನಲ್ಲೇ ಉಚಿತವಾಗಿ ವೀಕ್ಷಿಸುವ ಅವಕಾಶವನ್ನೂ ಹೊಂದಿದ್ದಾರೆ. ಹಾಗಾದರೆ ಅದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕೇ? ಈ ಸ್ಟೋರಿ ಓದಿ...
ಏಷ್ಯಾಕಪ್ ಮತ್ತು ವಿಶ್ವಕಪ್ ಪಂದ್ಯಗಳ ನೇರಪ್ರಸಾರದ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪಡೆದುಕೊಂಡಿದೆ. ಜತೆಗೆ ಇವೆರಡು ಟೂರ್ನಿಗಳ ಎಲ್ಲ ಪಂದ್ಯಗಳನ್ನು ಡಿಸ್ನಿ+ ಹಾಟ್ಸ್ಟಾರ್ ಮೂಲಕ ಒಟಿಟಿಯಲ್ಲೂ ನೇರಪ್ರಸಾರ ಮಾಡಲು ಸಜ್ಜಾಗಿದೆ. ಕಳೆದ ಐಪಿಎಲ್ ಸಮಯದಲ್ಲಿ ಜಿಯೋಸಿನಿಮಾ ಆ್ಯಪ್ ಮೂಲಕ ವಯಾಕಾಮ್18 ಎಲ್ಲ ಪಂದ್ಯಗಳನ್ನು ಉಚಿತವಾಗಿ ನೇರಪ್ರಸಾರ ಮಾಡಿ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ ಇದೀಗ ಡಿಸ್ನಿ+ ಹಾಟ್ಸ್ಟಾರ್ ಕೂಡ ಉಚಿತವಾಗಿ ಪ್ರಸಾರ ಮಾಡಲು ಸಜ್ಜಾಗಿದೆ. ಆದರೆ ಇದಕ್ಕೆ ಒಂದು ಷರತ್ತು ಕೂಡ ಅನ್ವಯಿಸುತ್ತಿದೆ.
ಕ್ರಿಕೆಟ್ ಪ್ರೇಮಿಗಳು ಮೊಬೈಲ್ ಮೂಲಕ ಮಾತ್ರ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಏಷ್ಯಾಕಪ್ ಮತ್ತು ವಿಶ್ವಕಪ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. ಇದೇ ಆ್ಯಪ್ ಮೂಲಕ ಲ್ಯಾಪ್ಟಾಪ್ ಅಥವಾ ಟಿವಿ ಸಹಿತ ಇತರ ಬಿಗ್ ಸ್ಕ್ರೀನ್ಗಳಲ್ಲಿ ವೀಸಲು ಬಯಸುವುದಾದರೆ ಆಗ ಉಚಿತವಾಗಿ ವೀಕ್ಷಿಸಲು ಅವಕಾಶವಿರುವುದಿಲ್ಲ. ಆಗ ನಿಗದಿತ ಶುಲ್ಕ ಪಾವತಿಸಿ ಸಬ್ಸ್ಕ್ರಿಪ್ಷನ್ ಪಡೆದುಕೊಳ್ಳುವುದು ಅಗತ್ಯವಾಗಿರುತ್ತದೆ.
ಅಂದಹಾಗೆ ಏಷ್ಯಾಕಪ್ ಟೂರ್ನಿ ಆಗಸ್ಟ್ 30ರಂದು ಆರಂಭಗೊಳ್ಳಲಿದ್ದರೆ, ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಿಂದ ಭಾರತದಲ್ಲಿ ನಡೆಯಲಿದೆ.