

ನವದೆಹಲಿ: ಟೀಮ್ ಇಂಡಿಯಾ ಮುಂದಿನ ಮೂರು ವರ್ಷಗಳಲ್ಲಿ ತವರಿನಲ್ಲಿ ಆಡಲಿರುವ ದ್ವಿಪಯ ಸರಣಿಗಳ ಶೀರ್ಷಿಕೆ ಪ್ರಾಯೋಜಕತ್ವವನ್ನು ಭಾರತದ ಪ್ರತಿಷ್ಠಿತ ಖಾಸಗಿ ಬ್ಯಾಂಕ್ ಎನಿಸಿರುವ "ಐಡಿಎಫ್ಸಿ ಫಸ್ಟ್ ಬ್ಯಾಂಕ್'ಗೆ ಬಿಸಿಸಿಐ ನೀಡಿದೆ. ಪ್ರತಿ ಪಂದ್ಯಕ್ಕೆ 4.2 ಕೋಟಿ ರೂ.ನಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ. 2026ರ ಆಗಸ್ಟ್ವರೆಗೆ ಭಾರತ ತಂಡ ತವರಿನಲ್ಲಿ ಆಡಲಿರುವ 56 ಪಂದ್ಯಗಳಿಗೆ ಒಟ್ಟು 235.2 ಕೋಟಿ ರೂ. ಬಿಸಿಸಿಐ ಖಜಾನೆ ಸೇರಲಿದೆ.
ಮುಂದಿನ ತಿಂಗಳು ಭಾರತ ತಂಡ ವಿಶ್ವಕಪ್ಗೆ ಪೂರ್ವ ಸಿದ್ಧತೆಯಾಗಿ ಪ್ರವಾಸಿ ಆಸ್ಟ್ರೆಲಿಯಾ ತಂಡದ ವಿರುದ್ಧ ಆಡಲಿರುವ 3 ಪಂದ್ಯಗಳ ಏಕದಿನ ಸರಣಿಯಿಂದ ಈ ಶೀರ್ಷಿಕೆ ಪ್ರಾಯೋಜಕತ್ವ ಒಪ್ಪಂದ ಜಾರಿಗೆ ಬರಲಿದೆ. ಈ ಹಿಂದೆ ಶೀರ್ಷಿಕೆ ಪ್ರಾಯೋಜಕತ್ವ ಹೊಂದಿದ್ದ "ಮಾಸ್ಟರ್ ಕಾರ್ಡ್' ಪ್ರತಿ ಪಂದ್ಯಕ್ಕೆ 3.8 ಕೋಟಿ ರೂ. ಪಾವತಿಸುತ್ತಿತ್ತು. ಹೊಸ ಒಪ್ಪಂದ ಅದಕ್ಕಿಂತ 40 ಲಕ್ಷ ರೂ. ಅಧಿಕವಾಗಿದೆ. ಹಕ್ಕು ಖರೀದಿಗೆ ಬಿಸಿಸಿಐ 2.4 ಕೋಟಿ ರೂ. ಮೂಲಬೆಲೆ ನಿಗದಿಪಡಿಸಿತ್ತು.
ಮುಂಬೈ ಮೂಲದ ಐಡಿಎಫ್ಸಿ ಫಸ್ಟ್ ಬ್ಯಾಂಕ್, ಶೀರ್ಷಿಕೆ ಪ್ರಾಯೋಜಕತ್ವ ಬಿಡ್ಡಿಂಗ್ ರೇಸ್ನಲ್ಲಿದ್ದ ಸೋನಿ ಸ್ಪೋರ್ಟ್ಸ್ ಅನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ. ಸೋನಿ ಸ್ಪೋರ್ಟ್ಸ್ ಸಂಸ್ಥೆ ಮೂಲಬೆಲೆಯಷ್ಟು ಮಾತ್ರ ಬಿಡ್ ಸಲ್ಲಿಸಿತ್ತು ಎನ್ನಲಾಗಿದೆ.