

ನವದೆಹಲಿ: ಟೀಮ್ ಇಂಡಿಯಾದ ಲೆಜೆಂಡ್ ಮಹೇಂದ್ರ ಸಿಂಗ್ ಧೋನಿ ಸಾಧನೆ ಬಗ್ಗೆ ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ. ಬ್ಯಾಟರ್, ವಿಕೆಟ್ ಕೀಪರ್ ಹಾಗೂ ನಾಯಕನಾಗಿ ಅದ್ವೀತಿಯ ಸಾಧನೆ ಮಾಡಿದ್ದಾರೆ ಎಂಬುದು ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತಿದೆ. 2007ರ ಟಿ20 ವಿಶ್ವಕಪ್ ಜತೆಗೆ 2011ರಲ್ಲಿ ಏಕದಿನ ವಿಶ್ವಪ್ ಅನ್ನು ದೇಶಕ್ಕೆ ನೀಡಿದರು. ಭಾರತದ ಮಡಿಲಲ್ಲಿ ಚಾಂಪಿಯನ್ಸ್ ಟ್ರೋಫಿ ಸಹ ಗೆದ್ದರು. ಇಂತಹ ಮಹಾನ್ ಆಟಗಾರನನ್ನು ತಮ್ಮ ಇಲೆವೆನ್ ತಂಡದಲ್ಲಿ ದಿನೇಶ್ ಕಾರ್ತಿಕ್ ಕೈಬಿಟ್ಟಿದ್ದು ಭಾರಿ ಟೀಕೆಗೆ ಕಾರಣವಾಯಿತು. ಇದನ್ನು ಮನಗಂಡ ಡಿಕೆ ಧೋನಿ ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ್ದಾರೆ.
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಅವರು ತನ್ನ ಸಾರ್ವಕಾಲಿಕ ನೆಚ್ಚಿನ ಟೀಮ್ ಇಂಡಿಯಾ ಇಲೆವೆನ್ ತಂಡವನ್ನು ಘೋಷಿಸಿದರು. 12ನೇ ಆಟಗಾರನಾಗಿ ಹರ್ಭಜನ್ ಸಿಂಗ್ ಹೆಸರನ್ನು ಸೇರಿಸಿದರು. ಆದರೆ ಹನ್ನೊಂದರ ಬಳಗದಲ್ಲಿ ಧೋನಿ ಹೆಸರಿರಲಿಲ್ಲ. ಬ್ಯಾಟರ್, ವಿಕೆಟ್ ಕೀಪರ್ ಹಾಗೂ ನಾಯಕನಾಗಿ ದೇಶಕ್ಕೆ ಇಷ್ಟೊಂದು ಸೇವೆ ಸಲ್ಲಿಸಿರುವ ಮಹಿ ಹೆಸರನ್ನು ಏಕೆ ಸೇರಿಸಲಿಲ್ಲ ಎಂದು ಧೋನಿ ಅಭಿಮಾನಿಗಳು ಡಿಕೆ ವಿರುದ್ಧ ರೊಚ್ಚಿಗೆದ್ದಿದ್ದರು.
ಈ ವಿವಾದದ ಬಗ್ಗೆ ಇತ್ತೀಚೆಗೆ ಕ್ರಿಕ್ಬಜ್ ವೆಬ್ಸೈಟ್ನಲ್ಲಿ ಪ್ರತಿಕ್ರಿಯಿಸಿದ ಡಿಕೆ, ನಾನು ಪ್ರಕಟಿಸಿದ ತಂಡದಲ್ಲಿ ವಿಕೆಟ್ ಕೀಪರ್ ಸ್ಥಾನವನ್ನೇ ಮರೆತಿದ್ದೇನೆ ಎಂದರು. ಹಲವರು ರಾಹುಲ್ ದ್ರಾವಿಡ್ ಅವರನ್ನೇ ವಿಕೆಟ್ ಕೀಪರ್ ಎಂದು ತಪ್ಪಾಗಿ ಆಯ್ಕೆ ಮಾಡಿದ್ದಾರೆ. ಆದರೆ ನಾನು ದ್ರಾವಿಡ್ ಅವರನ್ನು ಕೀಪರ್ ಎಂದು ಪರಿಗಣಿಸಲಿಲ್ಲ. ಹನ್ನೊಂದರ ಬಳಗದಲ್ಲಿ ಧೋನಿ ಅವರನ್ನು ನಾನು ತೆಗೆದುಕೊಂಡಿಲ್ಲ. ನನ್ನಿಂದ ತಪ್ಪಾಗಿದೆ ಎಂದು ಧೋನಿ ಅಭಿಮಾನಿಗಳ ಬಳಿ ಡಿಕೆ ಕ್ಷಮೆ ಕೋರಿದರು.
ನಾನು ದೊಡ್ಡ ತಪ್ಪು ಮಾಡಿದೆ. ಇದು ಆಕಸ್ಮಿಕವಾಗಿ ಸಂಭವಿಸಿದೆ. ನಾನು ಘೋಷಿಸಲಾದ 11 ಸದಸ್ಯರ ತಂಡದಲ್ಲಿ ವಿಕೆಟ್ ಕೀಪರ್ ಮಿಸ್ ಮಾಡಿದ್ದೇನೆ. ದ್ರಾವಿಡ್ ಅವರನ್ನು ಆ ಸ್ಥಾನಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅವರನ್ನು ಕೀಪಿಂಗ್‌ಗೆ ತೆಗೆದುಕೊಳ್ಳಲಿಲ್ಲ. ಸ್ವಭಾವತಃ ವಿಕೆಟ್ ಕೀಪರ್ ಆಗಿರುವ ನಾನು ವಿಕೆಟ್ ಕೀಪರ್ ಆಯ್ಕೆಯನ್ನೇ ಮರೆತಿದ್ದೇನೆ ಎಂದರೆ ಯಾರಾದರೂ ನಂಬುವರೇ? ಇದು ದೊಡ್ಡ ತಪ್ಪು. ಧೋನಿ ಹೆಸರು ಯಾವುದೇ ಸ್ವರೂಪದಲ್ಲಿರುತ್ತದೆ. ಭಾರತದಲ್ಲಿ ಮಾತ್ರವಲ್ಲದೆ ಎಲ್ಲೆಡೆ ಅವರ ಹೆಸರು ಇರುತ್ತದೆ. ಮಹಿ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು. ಸಾರ್ವಕಾಲಿಕ ಹನ್ನೊಂದರ ಬಳಗವನ್ನು ಮತ್ತೊಮ್ಮೆ ಘೋಷಿಸಬೇಕಾದರೆ, ಒಂದು ಬದಲಾವಣೆ ಮಾಡಲಾಗುತ್ತದೆ. ಧೋನಿಯನ್ನು ಏಳನೇ ಕ್ರಮಾಂಕದಲ್ಲಿ ತೆಗೆದುಕೊಳ್ಳಲಾಗುವುದು. ಧೋನಿ ವಿಚಾರದಲ್ಲಿ ತಪ್ಪು ಮಾಡಿದ್ದೇನೆ ಎಂದು ಡಿಕೆ ಕ್ಷಮೆ ಕೇಳಿದ್ದಾರೆ. ಇದೀಗ ಈ ವಿವಾದ ಇಲ್ಲಿಗೆ ಇತ್ಯರ್ಥವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಡಿಕೆ ಘೋಷಿಸಿದ್ದ ಆಲ್-ಟೈಮ್ ಇಲೆವೆನ್ ತಂಡ
ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮ, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅನಿಲ್ ಕುಂಬ್ಳೆ, ಜಸ್ಪ್ರೀತ್ ಬುಮ್ರಾ, ಜಹೀರ್ ಖಾನ್. 12ನೇ ಆಟಗಾರನಾಗಿ ಹರ್ಭಜನ್ ಸಿಂಗ್. (ಏಜೆನ್ಸೀಸ್)