

ಲಂಡನ್: ಟೀಮ್ ಇಂಡಿಯಾ ಮತ್ತು ಕೋಲ್ಕತ ನೈಟ್ರೈಡರ್ಸ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಅವರು ಇದೀಗ ಇಂಗ್ಲೆಂಡ್ನಲ್ಲಿ ವೀಕ್ಷಕವಿವರಣೆಕಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತ-ನ್ಯೂಜಿಲೆಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದ ಬಳಿಕ ಇಂಗ್ಲೆಂಡ್-ಶ್ರೀಲಂಕಾ ನಡುವಿನ ಏಕದಿನ ಸರಣಿಯಲ್ಲೂ ಅವರು ಕಾಮೆಂಟರಿ ಕೆಲಸ ಮುಂದುವರಿಸಿದ್ದರು. ಆದರೆ ಸರಣಿಯ 2ನೇ ಪಂದ್ಯದ ವೇಳೆ ವೀಕ್ಷಕವಿವರಣೆ ನೀಡುವಾಗ ಎಡವಟ್ಟು ಒಂದನ್ನು ಮಾಡಿಕೊಂಡಿದ್ದ ದಿನೇಶ್ ಕಾರ್ತಿಕ್ 3ನೇ ಹಾಗೂ ಅಂತಿಮ ಪಂದ್ಯದ ವೇಳೆ ಕ್ಷಮೆಯಾಚಿಸುವ ಮೂಲಕ ಈ ವಿವಾದವನ್ನು ಮುಕ್ತಾಯಗೊಳಿಸಿದ್ದಾರೆ.
ಶ್ರೀಲಂಕಾ-ಇಂಗ್ಲೆಂಡ್ ನಡುವೆ ಓವಲ್ನಲ್ಲಿ ಗುರುವಾರ ನಡೆದ 2ನೇ ಏಕದಿನ ಪಂದ್ಯದ ವೇಳೆ ದಿನೇಶ್ ಕಾರ್ತಿಕ್, ಬ್ಯಾಟ್ಅನ್ನು ಪಕ್ಕದ ಮನೆಯವನ ಹೆಂಡತಿಗೆ ಹೋಲಿಸಿ ಮಾತನಾಡಿದ್ದರು. ‘ಹೆಚ್ಚಿನ ಬ್ಯಾಟ್ಸ್ಮನ್ಗಳು ತಮ್ಮ ಬ್ಯಾಟ್ಅನ್ನು ಇಷ್ಟ ಪಡುವುದಿಲ್ಲ. ಇನ್ನೊಬ್ಬ ಆಟಗಾರನ ಬ್ಯಾಟ್ಅನ್ನೇ ಹೆಚ್ಚು ಇಷ್ಟಪಡುತ್ತಾರೆ. ಬ್ಯಾಟ್ಗಳು ಪಕ್ಕದ ಮನೆಯವನ ಹೆಂಡತಿ ಇದ್ದಂತೆ. ಪಕ್ಕದ ಮನೆಯವನ ಹೆಂಡತಿಯೇ ಯಾವಾಗಲೂ ಸುಂದರವಾಗಿ ಕಾಣಿಸುತ್ತಾಳೆ’ ಎಂದು ದಿನೇಶ್ ಕಾರ್ತಿಕ್ ಪಂದ್ಯದ ವೇಳೆ ಆಟಗಾರರು ಬ್ಯಾಟ್ ಬದಲಾಯಿಸುತ್ತಿದ್ದ ಬಗ್ಗೆ ವಿವರಣೆ ನೀಡಿದ್ದರು.
ದಿನೇಶ್ ಕಾರ್ತಿಕ್ ಅವರ ಈ ಕಾಮೆಂಟರಿ ಲಿಂಗಭೇದಭಾವದಿಂದ ಕೂಡಿದೆ ಎಂದು ಭಾರಿ ಟೀಕೆ ಎದುರಿಸಿದ್ದರು. ಅವರ ಸೆಕ್ಸಿಸ್ಟ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗಳನ್ನು ಎದುರಿಸಿದ್ದರು. ಇದರಿಂದಾಗಿ ಭಾನುವಾರ ನಡೆದ ಅಂತಿಮ ಏಕದಿನ ಪಂದ್ಯದ ವೇಳೆ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ ದಿನೇಶ್ ಕಾರ್ತಿಕ್, ‘ಕಳೆದ ಪಂದ್ಯದ ವೇಳೆ ನುಡಿದ ಮಾತಿಗೆ ನಾನು ಕ್ಷಮೆಯಾಚಿಸುವೆ. ನಾನು ತಪ್ಪಾಗಿ ಮಾತನಾಡಿದೆ. ಇದಕ್ಕಾಗಿ ಎಲ್ಲರ ಕ್ಷಮೆಯಾಚಿಸುವೆ. ನಾನು ಹೇಳಿದ ಮಾತು ಸರಿಯಾಗಿರಲಿಲ್ಲ. ಅದಕ್ಕಾಗಿ ನನ್ನ ಪತ್ನಿ ಮತ್ತು ಅಮ್ಮನಿಂದ ಸಾಕಷ್ಟು ಬೈಗುಳವನ್ನು ತಿಂದೆ’ ಎಂದಿದ್ದಾರೆ.