

ಲಖನೌ: ಲಖನೌ ಸೂಪರ್ಜೈಂಟ್ಸ್ ತಂಡದ ಸ್ಪಿನ್ನರ್ ದಿಗ್ವೇಶ್ ರಾಥಿ "ನೋಟ್ಬುಕ್' ಸಂಭ್ರಮಾಚರಣೆಯನ್ನು ಮುಂಬೈ ವಿರುದ್ಧದ ಪಂದ್ಯದಲ್ಲೂ ಪುನರಾವರ್ತಿಸಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿರುವುದಕ್ಕಾಗಿ ಪಂದ್ಯ ಸಂಭಾವನೆಯ ಶೇ. 50 ಅಂದರೆ 3.75 ಲಕ್ಷ ರೂ. ದಂಡ ಶಿಕ್ಷೆಗೆ ಗುರಿಯಾಗಿದ್ದಾರೆ. ಜತೆಗೆ 2ನೇ ಬಾರಿ ನೀತಿಸಂಹಿತೆ ಉಲ್ಲಂಘಿಸಿದ್ದಕ್ಕೆ 2 ಡಿಮೆರಿಟ್ ಅಂಕ ನೀಡಲಾಗಿದೆ.
ನಮನ್ ಧೀರ್ ವಿಕೆಟ್ ಕಬಳಿಸಿದ ಬಳಿಕ ರಾಥಿ ಈ ರೀತಿ ಸಂಭ್ರಮಿಸಿದ್ದರು. ಈ ಮುನ್ನ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ವಿಕೆಟ್ ಕಬಳಿಸಿದ ಬಳಿಕ ಇದೇ ರೀತಿ ಸಂಭ್ರಮಿಸಿದ್ದಕ್ಕಾಗಿ ಪಂದ್ಯ ಸಂಭಾವನೆಯ ಶೇ. 25 ಅಂದರೆ 1.87 ಲಕ್ಷ ರೂ. ದಂಡ ಶಿಕ್ಷೆಗೆ ಗುರಿಯಾಗಿದ್ದರು.
ಕಳೆದ ಮೆಗಾ ಹರಾಜಿನಲ್ಲಿ ದಿಗ್ವೇಶ್ ರಾಥಿ 30 ಲಕ್ಷ ರೂ.ಗೆ ಲಖನೌ ತಂಡ ಸೇರಿದ್ದರು. ಜತೆಗೆ ಐಪಿಎಲ್ ಹೊಸ ನಿಯಮದಂತೆ ಪ್ರತಿ ಪಂದ್ಯಕ್ಕೆ ಬಿಸಿಸಿಐನಿಂದ 7.5 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ. ಈ ಪೈಕಿ ಇದುವರೆಗೆ 5.62 ಲಕ್ಷ ರೂ. ದಂಡ ತೆತ್ತಿದ್ದಾರೆ. ಇದಲ್ಲದೆ ಅವರ ಒಟ್ಟು ಡಿಮೆರಿಟ್ ಅಂಕ ಈಗ 3ಕ್ಕೇರಿದ್ದು, ಇನ್ನೊಂದು ಅಂಕ ಗಳಿಸಿದರೆ 1 ಪಂದ್ಯ ನಿಷೇಧ ಶಿಕ್ಷೆಗೂ ಗುರಿಯಾಗಲಿದ್ದಾರೆ.