ಕ್ಯಾಪ್ಟನ್ ಸ್ಥಾನದಲ್ಲಿದ್ದು ಇಂಥ.. ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಬಾಬರ್​, ನಾಚಿಕೆಯಾಗಬೇಕು! ಫ್ಯಾನ್ಸ್​ ಕಿಡಿ

Untitled design (38)
Published on

ಅಮೆರಿಕಾ​​​: ಕಳೆದ ತಿಂಗಳು ಮೇ.30ರಂದು ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ಇಂಗ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧದ 4ನೇ T20I ಪಂದ್ಯದಲ್ಲಿ ಪಾಕ್ ಪರ ವಿಕೆಟ್ ಕೀಪರ್ ಆಗಿ ಮೈದಾನಕ್ಕಿಳಿದಿದ್ದ ಆಜಂ ಖಾನ್, ವಿಲ್​​ ಜ್ಯಾಕ್ಸ್​ ಕೊಟ್ಟ ಕೀಪರ್ ಕ್ಯಾಚ್ ಹಿಡಿಯುವಲ್ಲಿ ವಿಫಲರಾಗಿದ್ದರು. ಇದರಿಂದ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಆಜಂ, ತಮ್ಮ ದಡೂತಿ ದೇಹ ಮತ್ತು ಫಿಟ್ನೆಸ್​ ವಿಷಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದರು.

ಈ ವಿಷಯಕ್ಕೆ ವ್ಯಾಪಕ ಟೀಕೆ ಮಾಡಿದ್ದ ನೆಟ್ಟಿಗರು, ಒಂದು ಸುಲಭ ಕ್ಯಾಚ್ ನಿನ್ನಿಂದ ಹಿಡಿಯಲು ಸಾಧ್ಯವಾಗಲಿಲ್ಲ. ಇದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ದೊಡ್ಡ ಅವಮಾನ. ಮೊದಲು ಫಿಟ್ನೆಸ್ ಕಾಪಾಡಿಕೊಳ್ಳೋದು ಕಲಿಯಬೇಕು, ಆನಂತರ ಮೈದಾನಕ್ಕೆ ಇಳಿಯಬೇಕು ಎಂದೆಲ್ಲಾ ಟ್ರೋಲ್ ಮಾಡಿ, ಟೀಕಿಸಿದ್ದರು. ನೆಟ್ಟಿಗರ ವ್ಯಾಪಕ ಟೀಕಾ ಪ್ರಹಾರಕ್ಕೆ ತಲೆಕೆಡಿಸಿಕೊಳ್ಳದ ಕ್ರಿಕೆಟ್ ಫ್ಯಾನ್ಸ್, ತಂಡದ ಕ್ಯಾಪ್ಟನ್ ಆದ ಬಾಬರ್ ಆಜಂ ನೀಡಿದ ಹೇಳಿಕೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

ತಂಡದ ಸಹ ಆಟಗಾರನಾದ ಆಜಂ ಖಾನ್ ಬಗ್ಗೆ ಮಾತನಾಡಿದ ಪಾಕ್ ಕ್ಯಾಪ್ಟನ್ ಬಾಬರ್ ಆಜಂ, “ಪಾಕಿಸ್ತಾನದ ಪರವಾಗಿ ಆಡಬೇಕೆಂದರೆ ಖಂಡಿತ ಅವರು ತಮ್ಮ ತೂಕವನ್ನು ಕಳೆದುಕೊಳ್ಳಬೇಕಾಗುತ್ತದೆ. ತಂಡಕ್ಕಾಗಿ ನಿಮ್ಮ ದೇಹದ ತೂಕದಲ್ಲಿ 10 ಕೆಜಿ ಕಳೆದುಕೊಳ್ಳಲು ಸಾಧ್ಯವಾಗದಿದ್ದರೆ ಹೇಗೆ? ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ದೇಶೀಯ ಪಂದ್ಯಾವಳಿಗಳ ನಡುವೆ ವ್ಯತ್ಯಾಸವಿದೆ. ಆಜಂ ತನ್ನ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇದರೊಟ್ಟಿಗೆ ಆರಾಮ ವಲಯದಿಂದ ಕೂಡ ಹೊರಬರಬೇಕು. ಇದು ಆನುವಂಶಿಕ ಸಮಸ್ಯೆಯಾಗಿದ್ದರೆ, ವೈದ್ಯರನ್ನು ಸಂಪರ್ಕಿಸಬೇಕು ಎಂದು ಹೇಳಿದ್ದಾರೆ.

ಇನ್ನು ಆಜಂ ಅವರ ದೇಹದ ಬಗ್ಗೆ ಮಾತನಾಡಿದ ಬಾಬರ್ ಆಜಂ ವಿರುದ್ಧ ಕಿಡಿಕಾರಿದ ಕ್ರಿಕೆಟ್ ಅಭಿಮಾನಿಗಳು, ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಇಂಥ ಮಾತುಗಳನ್ನು ಹೇಗೆ ಆಡ್ತೀರಾ? ಅದು ಒಬ್ಬ ಕ್ಯಾಪ್ಟನ್ ಆಗಿ? ನಿಮ್ಮ ತಂಡದ ಆಟಗಾರನ ದೇಹವನ್ನು ಅಣಕಿಸುತ್ತೀರಾ ಅಂದಮೇಲೆ ನಿಜಕ್ಕೂ ಇದು ಸರಿ ಕಾಣುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net