ಭಾರತ ಟೆಸ್ಟ್​ ತಂಡಕ್ಕೆ ಹೊಸ ಧ್ರುವ ತಾರೆ! ಇಂಗ್ಲೆಂಡ್​ ವಿರುದ್ಧ ಸರಣಿಗೂ ಇಶಾನ್​ ಕಿಶನ್​ ಗೈರು

druva jurel web
Published on

ಬೆಂಗಳೂರು: ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಬಹುನಿರೀತ ಟೆಸ್ಟ್​ ಸರಣಿಯ ಮೊದಲೆರಡು ಪಂದ್ಯಗಳಿಗೆ 16 ಆಟಗಾರರ ಭಾರತ ತಂಡ ಪ್ರಕಟಗೊಂಡಿದ್ದು, ಯುವ ವಿಕೆಟ್​ ಕೀಪರ್​-ಬ್ಯಾಟರ್​ ಧ್ರುವ ಜುರೆಲ್​ ಏಕೈಕ ಹೊಸಮುಖವಾಗಿದ್ದಾರೆ. ಮೊಹಮದ್​ ಶಮಿ ಇನ್ನೂ ಫಿಟ್​ ಆಗದ ಕಾರಣ ತಂಡದಲ್ಲಿ ಸ್ಥಾನ ಪಡೆದಿಲ್ಲ. ಮಾನಸಿಕ ಆರೋಗ್ಯದ ಕಾರಣ ನೀಡಿ ದಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಿಂದ ಹೊರಗುಳಿದಿದ್ದ ವಿಕೆಟ್​ ಕೀಪರ್-ಬ್ಯಾಟರ್​ ಇಶಾನ್​ ಕಿಶನ್​, ರಣಜಿ ಪಂದ್ಯ ಆಡಿದ ಬಳಿಕವೇ ಆಯ್ಕೆಗೆ ಪರಿಗಣಿಸಲ್ಪಡಲಿದ್ದಾರೆ ಎನ್ನಲಾಗಿದೆ.

5 ಪಂದ್ಯಗಳ ಸರಣಿಯ ಮೊದಲ ಟೆಸ್ಟ್​ ಜನವರಿ 25ರಿಂದ 29ರವರೆಗೆ ಹೈದರಾಬಾದ್​ನಲ್ಲಿ ನಡೆಯಲಿದ್ದು, 2ನೇ ಟೆಸ್ಟ್​ ಫೆಬ್ರವರಿ 2ರಿಂದ 6ರವರೆಗೆ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಫೆಬ್ರವರಿ 15ರಿಂದ ರಾಜ್​ಕೋಟ್​ನಲ್ಲಿ ನಡೆಯಲಿರುವ 3ನೇ ಟೆಸ್ಟ್​ಗೆ ಶಮಿ ಫಿಟ್​ ಆಗುವ ನಿರೀಕ್ಷೆ ಇದೆ.

ಅಶ್ವಿನ್-ಜಡೇಜಾ ಜತೆಗೆ ಅಕ್ಷರ್​ ಪಟೇಲ್​ ಮತ್ತು ಕುಲದೀಪ್​ ಯಾದವ್​ ತಂಡದಲ್ಲಿರುವ ಇನ್ನಿಬ್ಬರು ಸ್ಪಿನ್ನರ್​ಗಳಾಗಿದ್ದಾರೆ. ಕನ್ನಡಿಗ ಕೆಎಲ್​ ರಾಹುಲ್​ ಜತೆಗೆ ವಿಕೆಟ್​ ಕೀಪರ್​-ಬ್ಯಾಟರ್​ಗಳಾಗಿ ತಂಡದಲ್ಲಿ ಒಟ್ಟು ಮೂವರು ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಉತ್ತರ ಪ್ರದೇಶದ 22 ವರ್ಷದ ಧ್ರುವ ಜುರೆಲ್​ ಜತೆಗೆ ಕೆಎಸ್​ ಭರತ್​ ಮತ್ತೋರ್ವ ಕೀಪರ್​ ಆಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್​ ಪದಾರ್ಪಣೆ ಮಾಡಿದ್ದ ಕನ್ನಡಿಗ ಪ್ರಸಿದ್ಧ ಕೃಷ್ಣ ರಣಜಿ ಪಂದ್ಯದ ವೇಳೆ ಗಾಯಗೊಂಡಿರುವುದರಿಂದ ತಂಡದಲ್ಲಿ ಸ್ಥಾನ ಪಡೆದಿಲ್ಲ ಎನ್ನಲಾಗಿದೆ.

ಭಾರತ ಟೆಸ್ಟ್​ ತಂಡ: ರೋಹಿತ್​ ಶರ್ಮ (ನಾಯಕ), ಜಸ್​ಪ್ರೀತ್​ ಬುಮ್ರಾ (ಉಪನಾಯಕ), ಶುಭಮಾನ್​ ಗಿಲ್​, ಯಶಸ್ವಿ ಜೈಸ್ವಾಲ್​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಕೆಎಲ್​ ರಾಹುಲ್​ (ವಿ.ಕೀ), ಕೆಎಸ್​ ಭರತ್​ (ವಿ.ಕೀ), ಧ್ರುವ ಜುರೆಲ್​ (ವಿ.ಕೀ), ಆರ್​. ಅಶ್ವಿನ್​, ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್​, ಕುಲದೀಪ್​ ಯಾದವ್​, ಮೊಹಮದ್​ ಸಿರಾಜ್​, ಮುಕೇಶ್​ ಕುಮಾರ್​, ಆವೇಶ್​ ಖಾನ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net