

ಗುವಾಹಟಿ: ಭಾರತ ಮಾತ್ರವಲ್ಲದೆ ಐಪಿಎಲ್ನಲ್ಲಿ ಸಿಎಸ್ಕೆ ತಂಡದಲ್ಲೂ ಫಿನಿಷರ್ ಪಾತ್ರದಲ್ಲಿ ಮಿಂಚಿದವರು ಎಂಎಸ್ ಧೋನಿ. ಹೀಗಾಗಿ ಅವರು ಕ್ರೀಸ್ಗೆ ಬಂದರೆಂದರೆ ಎಂಥದ್ದೇ ಪರಿಸ್ಥಿತಿಯಲ್ಲಿದ್ದರೂ ತಂಡವನ್ನು ಗೆಲ್ಲಿಸಿಕೊಡುವ ನಂಬಿಕೆ ಅಭಿಮಾನಿಗಳದ್ದು. ಆದರೆ ಈ ಬಾರಿ ಐಪಿಎಲ್ನಲ್ಲಿ ಇದು ಸತತ 2ನೇ ಪಂದ್ಯದಲ್ಲಿ ಹುಸಿಯಾಗಿದೆ. ಇದರಿಂದ ಆಗ ಮ್ಯಾಚ್ ಫಿನಿಷರ್ ಆಗಿದ್ದ ಧೋನಿ ಈಗ ಲೂಸರ್ ಆಗಿ ಟೀಕೆಗಳಿಗೆ ಆಹಾರವಾಗುತ್ತಿದ್ದಾರೆ. ಧೋನಿ ಐಪಿಎಲ್ನಲ್ಲಿ ಆಡುವುದನ್ನು ಮುಂದುವರಿಸಿದ ಬಗ್ಗೆ ಖುಷಿಪಟ್ಟಿದ್ದ ಅಭಿಮಾನಿಗಳು ಈಗ ಅವರಿಂದಲೇ ಗೆಲುವು ಕೈತಪ್ಪುತ್ತಿರುವ ಬಗ್ಗೆ ಟೀಕೆಗಳನ್ನು ಮಾಡಲಾರಂಭಿಸಿದ್ದಾರೆ.
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಸಿಎಸ್ಕೆಗೆ ಅಗತ್ಯವೆನಿಸಿದ ಸಂದರ್ಭದಲ್ಲೂ ಕ್ರೀಸ್ಗೆ ಬಾರದೆ ತಡವಾಗಿ 9ನೇ ಕ್ರಮಾಂಕದಲ್ಲಿ ಆಡಿ, ಸೋಲಿನ ನಡುವೆ ಆರ್ಭಟಿಸಿದರೂ ಟೀಕೆಗೆ ಗುರಿಯಾಗಿದ್ದ 43 ವರ್ಷದ ಧೋನಿ, ಭಾನುವಾರ ರಾಜಸ್ಥಾನ ವಿರುದ್ಧ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದರೂ ತಂಡವನ್ನು ಗೆಲುವಿನ ದಡ ಸೇರಿಸಲಿಲ್ಲ. ಇದರಿಂದ ಟೀಕೆಗಳಿಗೆ ಗುರಿಯಾಗುತ್ತಿರುವ ನಡುವೆ ಸಿಎಸ್ಕೆ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್, ಧೋನಿ ಪರದಾಟಕ್ಕೆ ಕಾರಣವೇನೆಂದು ವಿವರಿಸಿದ್ದಾರೆ.
ಧೋನಿಗೆ ಈಗಲೂ ಮೊಣಕಾಲು ನೋವು ಕಾಡುತ್ತಿದೆ. ಹೀಗಾಗಿ 10 ಓವರ್ನಷ್ಟು ಸುದೀರ್ ಕಾಲ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಅವರಿಗಿಲ್ಲ. ಇದರಿಂದ ತಂಡದಲ್ಲಿ ಅವರ ಬ್ಯಾಟಿಂಗ್ ಕ್ರಮಾಂಕವೂ ಪರಿಸ್ಥಿತಿಗೆ ತಕ್ಕಂತೆ ಬದಲಾಗುತ್ತಿದೆ ಎಂದು ಫ್ಲೆಮಿಂಗ್ ತಿಳಿಸಿದ್ದಾರೆ. ಧೋನಿ ಆಟಕ್ಕೆ ಅವರ ದೇಹ ಸಹಕರಿಸುತ್ತಿಲ್ಲ. 10 ಓವರ್ ಕಾಲ ಓಡುತ್ತ ಆಡುತ್ತಿರಲು ಅವರಿಂದಾಗದು. ಹೆಚ್ಚಿನ ಓವರ್ ಆಡಬೇಕೆಂದಿದ್ದರೆ ಅವರು ಇತರರನ್ನು ಮುಂದೆ ಕಳುಹಿಸುತ್ತಾರೆ. 13, 14ನೇ ಓವರ್ ನಂತರವೇ ಅವರು ಕ್ರೀಸ್ಗೆ ಇಳಿಯಬಲ್ಲರು. ಕಳೆದ ವರ್ಷವೇ ಹೇಳಿದಂತೆ ಅವರು ತಂಡದ ಅಮೂಲ್ಯ ಆಟಗಾರರಾಗಿದ್ದಾರೆ ಎಂದು ಫ್ಲೆಮಿಂಗ್ ಹೇಳಿದ್ದಾರೆ.
ರಾಯಲ್ಸ್ ಎದುರು ಸಿಎಸ್ಕೆ ತಂಡಕ್ಕೆ ಕೊನೇ 25 ಎಸೆತಗಳಲ್ಲಿ 54 ರನ್ ಬೇಕಿದ್ದಾಗ ಮಾಜಿ ನಾಯಕ ಎಂಎಸ್ ಧೋನಿ ಕ್ರೀಸ್ಗೆ ಇಳಿದರೂ ಗೆಲುವಿನ ದಡ ಸೇರಿಸದೆ ನಿರಾಸೆ ಮೂಡಿಸಿದರು. ರವೀಂದ್ರ ಜಡೇಜಾ (32*) ಜತೆಗೂಡಿ 6ನೇ ವಿಕೆಟ್ಗೆ 20 ಎಸೆತಗಳಲ್ಲಿ 35 ರನ್ ಕಸಿದ ಧೋನಿ, ಕೊನೇ ಓವರ್ನಲ್ಲಿ 19 ರನ್ ಬೇಕಿದ್ದಾಗ ಸಂದೀಪ್ ಶರ್ಮಗೆ ವಿಕೆಟ್ ಒಪ್ಪಿಸಿದರು. ಧೋನಿ-ಜಡೇಜಾ ಜತೆಯಾದಾಗ ಮೊದಲ 13 ಎಸೆತಗಳಲ್ಲಿ 14 ರನ್ ಮಾತ್ರ ಗಳಿಸಿದರು. ಇದು ಸಿಎಸ್ಕೆಯನ್ನು ಕೊನೇ 2 ಓವರ್ಗಳಲ್ಲಿ 39 ರನ್ ಗಳಿಸುವ ಒತ್ತಡಕ್ಕೆ ಸಿಲುಕಿಸಿತು. ಇದರಿಂದ ರಾಜಸ್ಥಾನ ಎದುರು 6 ರನ್ಗಳಿಂದ ಶರಣಾದ ಸಿಎಸ್ಕೆ, ಐಪಿಎಲ್-18ರಲ್ಲಿ ಸತತ 2ನೇ ಸೋಲು ಕಂಡಿತು.