40ನೇ ಜನ್ಮದಿನದಂದು ಎಂಎಸ್ ಧೋನಿ ಹೊಸ ಲುಕ್ ವೈರಲ್!

dhoni web
Published on

ನವದೆಹಲಿ: ಭಾರತೀಯ ಕ್ರಿಕೆಟ್ ಇತಿಹಾಸ ಕಂಡ ಶ್ರೇಷ್ಠ ನಾಯಕ ಹಾಗೂ ಅತ್ಯುತ್ತಮ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಎನಿಸಿರುವ ಮಹೇಂದ್ರ ಸಿಂಗ್ ಧೋನಿಗೆ ಬುಧವಾರ 40ನೇ ಜನ್ಮದಿನದ ಸಂಭ್ರಮ. ಇದೇ ವೇಳೆ ಅವರ ಹೊಸ ಲುಕ್‌ನ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಧೋನಿ ವೃತ್ತಿಜೀವನದ ಆರಂಭದಿಂದಲೂ ವಿವಿಧ ಕೇಶಶೈಲಿಯ ಮೂಲಕ ಗಮನಸೆಳೆದವರು. ಇದೀಗ 40ನೇ ಜನ್ಮದಿನದಂದು ಅವರು ಬಿಳಿ ಗಡ್ಡದೊಂದಿಗೆ ಕಾಣಿಸಿಕೊಂಡಿದ್ದಾರೆ. 2 ವಾರದ ಹಿಂದೆ ಅವರು ಉದ್ದ ಮೀಸೆಯ ಲುಕ್‌ನೊಂದಿಗೆ ಮಿಂಚಿದ್ದರು. ಇದೀಗ ಕಪ್ಪು-ಬಿಳುಪಿನ ಲುಕ್ ಅಭಿಮಾನಿಗಳಿಗೆ ಮತ್ತಷ್ಟು ಅಚ್ಚರಿ ತಂದಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬಳಿಕ ಐಪಿಎಲ್‌ನಲ್ಲಿ ಮಾತ್ರ ಆಡುತ್ತಿರುವ ಧೋನಿ, ಸದ್ಯ ರಾಂಚಿಯ ಮನೆಯಲ್ಲಿ ಪತ್ನಿ ಸಾಕ್ಷಿ ಮತ್ತು ಪುತ್ರಿ ಝಿವಾ ಜತೆಗೆ ಕಾಲ ಕಳೆಯುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಐಪಿಎಲ್ 14ನೇ ಆವೃತ್ತಿ ಯುಎಇಯಲ್ಲಿ ಪುನರಾರಂಭಗೊಂಡಾಗ ಧೋನಿ ಚೆನ್ನೈ ಸೂಪರ್‌ಕಿಂಗ್ಸ್ ನಾಯಕರಾಗಿ ಮತ್ತೆ ಕಣಕ್ಕಿಳಿಯಲಿದ್ದಾರೆ. 2007ರ ಟಿ20 ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ನಾಯಕ ಧೋನಿ, ಭಾರತ ಪರ 90 ಟೆಸ್ಟ್, 350 ಏಕದಿನ ಮತ್ತು 98 ಟಿ20 ಪಂದ್ಯ ಆಡಿದ್ದು, ಒಟ್ಟು 15 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net