

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಗೆ ಇದೀಗ ದಿನಗಣನೆ ಆರಂಭಗೊಂಡಿದ್ದು, ಟಿ-20 ಪಂದ್ಯಗಳನ್ನು ಆಡಲು 10 ಬಲಿಷ್ಠ ತಂಡಗಳು ಕೂಡ ಭರ್ಜರಿ ತಯಾರಿಗಳನ್ನು ಮಾಡಿಕೊಳ್ಳುವಲ್ಲಿ ಸದ್ಯ ಬ್ಯುಸಿಯಾಗಿದೆ. ಇದೆಲ್ಲದರ ಮಧ್ಯೆ ಕ್ರಿಕೆಟ್ ಅಭಿಮಾನಿಗಳ ಚಿತ್ತ ಮಾತ್ರ ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೇಲಿದೆ. ಕಾರಣ, ಈ ಬಾರಿಯೂ ತಮ್ಮ ತಂಡಕ್ಕೆ ನಾಯಕರಾಗಿ 'ಕ್ಯಾಪ್ಟನ್ ಕೂಲ್' ಮಹೇಂದ್ರ ಸಿಂಗ್ ಧೋನಿ ಕಣಕ್ಕಿಳಿಯಲಿದ್ದಾರೆ.
ಸದ್ಯ ಈ ವಿಷಯ ಅಪಾರ ಸಂಖ್ಯೆಯ ಕ್ರಿಕೆಟ್ ಫ್ಯಾನ್ಸ್ ಹಾಗೂ ಧೋನಿ ಅವರ ಅಭಿಮಾನಿಗಳಲ್ಲಿ ಭಾರೀ ಸಂತಸ ಮತ್ತು ಕಾತರವನ್ನು ಹೆಚ್ಚಿಸಿದೆ. ಐಪಿಎಲ್ ಇತಿಹಾಸದಲ್ಲಿ ಬಲಿಷ್ಠ ತಂಡ, ಅತ್ಯುತ್ತಮ ಆಟಗಾರರು, ಹುಚ್ಚೆದ್ದು ಕುಣಿಯುವ ಅಭಿಮಾನಿಗಳ ಬಳಗ ಹೊಂದಿರುವ ತಂಡವಾಗಿ ಗುರುತಿಸಿಕೊಂಡಿರುವ ಸಿಎಸ್ಕೆಗೆ ಧೋನಿ ಅವರೇ ಕ್ಯಾಪ್ಟನ್ ಆಗಿ ಮುನ್ನಡೆಸಿಕೊಂಡು ಹೋಗಬೇಕು ಎಂಬ ನಿರೀಕ್ಷೆ ವ್ಯಾಪಕವಾಗಿ ವ್ಯಕ್ತವಾಗಿತ್ತು.
ಅದರಂತೆಯೇ ತಮ್ಮ 42ನೇ ವಯಸ್ಸಿನಲ್ಲೂ ಛಲ ಬಿಡದ ಎಂ.ಎಸ್. ಧೋನಿ, ಯುವ ಆಟಗಾರರ ಮಧ್ಯೆ ಮತ್ತೊಮ್ಮೆ ಕ್ರೀಡಾಂಗಣಕ್ಕೆ ಇಳಿದು ಆಡಲಿರುವ ಬಗ್ಗೆ ದೃಢಪಡಿಸಿದರು. ಸಿಎಸ್ಕೆ ನಾಯಕತ್ವ ಮುಂದುವರೆಸುವೆ ಎಂದು ಧೋನಿ ಖಚಿತ ಪಡಿಸಿದ್ದೇ ತಡ ಫ್ಯಾನ್ಸ್ ಸದ್ಯ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದು, ಈ ಬಾರಿಯೂ ಚೆನ್ನೈ ಪ್ಲೇ-ಆಫ್ಗೆ ಎಂಟ್ರಿ ಕೊಟ್ಟು, ಟ್ರೋಫಿ ಗೆಲ್ಲಲಿದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಸದ್ಯ ಇದರ ಬೆನ್ನಲ್ಲೇ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಕ್ಯಾಪ್ಟನ್ ಕೂಲ್ ನಿರೂಪಕರ ಪ್ರಶ್ನೆಗೆ ಕೊಟ್ಟ ಉತ್ತರ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ.
ನಿರೂಪಕರು, "ಶೇನ್ ವ್ಯಾಟ್ಸಾನ್, ಅಜಿಂಕ್ಯ ರಹಾನೆ, ಅಂಬಟಿ ರಾಯುಡು ಹೀಗೆ ಯಾವುದೇ ಆಟಗಾರರು ನಿಮ್ಮ ತಂಡಕ್ಕೆ ಬಂದರೆ ಅಷ್ಟು ಚೆನ್ನಾಗಿ ಆಡುತ್ತಾರೆ. ಎಲ್ಲರೂ ಉತ್ತಮವಾಗಿ ಪ್ರದರ್ಶನ ನೀಡಲು ಹೇಗೆ ಸಾಧ್ಯ?" ಎಂದು ಧೋನಿಗೆ ಕೇಳಿದರು. ಇದಕ್ಕೆ ಉತ್ತರಿಸಿದ ಮಿಸ್ಟರ್ ಕೂಲ್, "ಇದನ್ನು ನಾನು ಬಹಿರಂಗವಾಗಿ ಹೇಳಿದರೆ, ಯಾರೂ ಸಹ ನನ್ನನ್ನು ನೇಮಕ ಮಾಡಿಕೊಳ್ಳಲ್ಲ. ಹಾಗಾಗಿ, ದೊಡ್ಡ ಕಂಪನಿಗಳಂತೆ ನಾನೂ ಕೂಡ ಇದನ್ನು ರಹಸ್ಯವಾಗಿಯೇ ಇಡಲು ಬಯಸ್ತೀನಿ. ಅವರು ಹಾಗೇ ಅಲ್ವಾ, ತಮ್ಮ ರೆಸಿಪಿಯನ್ನು ಸಾರ್ವಜನಿಕರ ಮುಂದೆ ಬಿಟ್ಟುಕೊಡುವುದಿಲ್ಲ" ಎಂದು ಹೇಳಿದರು.
ಸದ್ಯ ಈ ಹೇಳಿಕೆಗೆ ನೆಟ್ಟಿಗರು ಫಿದಾ ಆಗಿದ್ದು, ಇಂತಹ ಕ್ವಿಕ್ ಅಂಡ್ ಸ್ಮಾರ್ಟ್ ಉತ್ತರವನ್ನು ಧೋನಿ ಮಾತ್ರ ಕೊಡಲು ಸಾಧ್ಯ ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).