RCB ವಿರುದ್ಧದ ಸೋಲಿಗೆ ಧೋನಿಯೇ ಕಾರಣ! ಇಲ್ಲೇ ಆಗಿದ್ದು ತಪ್ಪು: ಮಾಜಿ ಕ್ರಿಕೆಟಿಗ ಗರಂ | MS Dhoni

ವಿಜಯವಾಣಿ - 2025-03-29T165014.723
Published on

MS Dhoni: ನಿನ್ನೆ (ಮಾ.28) ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 50 ರನ್​​ಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತು. ಚೆನ್ನೈ ತವರಿನಲ್ಲೇ ಸಿಎಸ್​ಕೆಯನ್ನು ಬಗ್ಗುಬಡಿದ ಆರ್​ಸಿಬಿ ಹೆಚ್ಚುವರಿ ಅಂಕಗಳೊಂದಿಗೆ ಪ್ರಸ್ತುತ ಐಪಿಎಲ್​ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಒಂದೆಡೆ ಆರ್​ಸಿಬಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದರೆ, ಮತ್ತೊಂದೆಡೆ ಸಿಎಸ್​ಕೆ ಅಭಿಮಾನಿಗಳಲ್ಲಿ ಬೇಸರದ ಛಾಯೆ ಮೂಡಿದೆ.

ಆರ್​ಸಿಬಿ ನೀಡಿದ 197 ರನ್​ ಗುರಿಯನ್ನು ಬೆನ್ನಟ್ಟಿದ ಸಿಎಸ್​ಕೆಗೆ ಆರಂಭದಲ್ಲೇ ಭಾರೀ ಆಘಾತ ಎದುರಾಯಿತು. ಒಬ್ಬರಂತೆ ಮತ್ತೊಬ್ಬರು ಬ್ಯಾಕ್ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡ ಬೆನ್ನಲ್ಲೇ ಕ್ರಿಕೆಟ್​ ದಿಗ್ಗಜ, ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್ ಧೋನಿ 8ನೇ ಕ್ರಮಾಂಕದಲ್ಲಿ ತಂಡದ ಪರ ಕಣಕ್ಕಿಳಿದರು. ಜಡೇಜಾ ಜತೆಗೂಡಿ ಅಬ್ಬರಿಸಲು ಶುರು ಮಾಡಿದ ಧೋನಿ, 16 ಎಸೆತಕ್ಕೆ 30 ರನ್​ ಬಾರಿಸಿ ಅಜೇಯರಾಗಿ ಉಳಿದರು. ಇದು ಸ್ಟೇಡಿಯಂನಲ್ಲಿ ಕುಳಿತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡಿದ್ದೇ ಆದರೂ ಸೋಲುಂಡ ಸಂಗತಿ ಭಾರೀ ಬೇಸರ ತಂದೊಡ್ಡಿತು.

ಕೆಲವರು ಧೋನಿ 5 ಅಥವಾ 6ನೇ ಕ್ರಮಾಂಕದಲ್ಲಿ ಆಡಬೇಕಿತ್ತು. ಆಗ ಪ್ರಾಯಶಃ ಆರ್​ಸಿಬಿ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಬಹುದಿತ್ತು ಎಂದು ಅಭಿಪ್ರಾಯಿಸಿದ್ದಾರೆ. ಈ ಕುರಿತಂತೆ ಮಾತನಾಡಿರುವ ಮಾಜಿ ಹಿರಿಯ ಆಟಗಾರ ಆಕಾಶ್ ಚೋಪ್ರಾ, "ಧೋನಿ 17-20 ಓವರ್‌ಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು (122) ಬಾರಿಸಿರುವ ಆಟಗಾರ. ಹೀಗಿರುವಾಗ ಬ್ಯಾಟಿಂಗ್ ಕ್ರಮಾಂಕದಲ್ಲಿ ಅಷ್ಟು ತಡವಾಗಿ ಬರುವುದು ಸರಿಯಲ್ಲ. ತಂಡ 197 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿರುವಾಗ, ಹೆಚ್ಚಿನ ಎಸೆತಗಳನ್ನು ಎದುರಿಸಲು ಧೋನಿ ಅವರಂತಹ ಸ್ಫೋಟಕ ಬ್ಯಾಟರ್​ ಅಗತ್ಯವಿದೆ. ಆದರೆ, ಸಿಎಸ್​ಕೆ ಹಾಗೇ ಮಾಡಲಿಲ್ಲ" ಎಂದರು.

"ಧೋನಿ ಅಖಾಡಕ್ಕಿಳಿಯುವ ಮುನ್ನವೇ ಗೆಲುವು ಚೆನ್ನೈನಿಂದ ದೂರ ಸರಿದಿತ್ತು. ಆರ್. ಅಶ್ವಿನ್‌ ಬರುವ ಮೊದಲೇ ಧೋನಿ ಕಣಕ್ಕಿಳಿದಿದ್ದರೆ, ಪ್ರಾಯಶಃ ಗೆಲುವು ಸಿಎಸ್​ಕೆ ಪಾಲಾಗುತ್ತಿತ್ತು. ಈ ವಿಷಯದಲ್ಲಿ ಧೋನಿ ಯೋಚಿಸಬೇಕಿತ್ತು. 8 ಅಥವಾ 9ನೇ ಅವರು ಆಡುವುದು ಸರಿಯಲ್ಲ. ನನ್ನ ಪ್ರಕಾರ, ಆರ್​. ಅಶ್ವಿನ್​ ಬದಲಿಗೆ ಧೋನಿ ಮೈದಾನಕ್ಕಿಳಿಯುವುದು ಉತ್ತಮ" ಎಂದು ಆಕಾಶ್ ಚೋಪ್ರಾ ಸಲಹೆ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net